
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 15 ವರ್ಷದ ಬಾಲಕಿಯೊಬ್ಬಳು ನ. 12ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಮಗಳು ಹರ್ಷಿತಾ (15) ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತಾ ಅವರು, ನ. 4ರಂದು ತಲೆನೋವು ಎಂದು ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದಳು. ಈ ವೇಳೆ ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಳಾಗಿದ್ದ ಅವಳನ್ನು ತಕ್ಷಣವೇ ತಾಯಿ ಚಿಕಿತ್ಸೆಗೆಂದು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೇ ನ. 12ರಂದು ಮೃತಪಟ್ಟಿದ್ದಾರೆ.
ಕಡಬದ ರಾಜೇಶ್ ಎಂಬಾತ ಹರ್ಷಿತಾಗೆ ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಹೀಗಾಗಿ ಹರ್ಷಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯವಿದೆ ಎಂದು ಆಕೆಯ ತಂದೆ ಶ್ರೀಧರ ಕುಂಬಾರ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



