ಶ್ರೀ ಭುವನೇಂದ್ರ ಕಾಲೇಜಿನ 1997-2000 ಬಿ. ಎ. ಬ್ಯಾಚ್ ವಿದ್ಯಾರ್ಥಿಗಳು 26 ವರ್ಷಗಳ ನಂತರ ತಾವು ಕಲಿತ ಕಾಲೇಜಿನಲ್ಲಿ ಒಂದಾಗಿ ಮತ್ತೊಮ್ಮೆ ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡು ಸಂತಸವನ್ನು ಹಂಚಿಕೊಂಡರು.
ಬೆಂಗಳೂರು, ಮೈಸೂರು, ಮಡಿಕೇರಿ, ಮೂಡಿಗೆರೆ, ಕಾಸರಗೋಡು ಮತ್ತು ಇತರ ಅನೇಕ ದೂರದ ಊರುಗಳಿಂದ ಬಂದಿರುವ ಮತ್ತು ಸ್ಥಳಿಯ ಹಳೇ ವಿದ್ಯಾರ್ಥಿಗಳು ತಾವು ಕುಳಿತುಕೊಳ್ಳುತ್ತಿದ್ದ ತರಗತಿ ಬೆಂಚೆಗಳಲ್ಲಿ ಕುಳಿತು ತಮ್ಮ ವಿದ್ಯಾರ್ಥಿ ಜೀವನದ ಘಟನೆಗಳನ್ನು ಮೆಲುಕು ಹಾಕುತ್ತಾ ಪರಸ್ಪರ ಸವಿನೆನಪುಗಳನ್ನು ವಿನಿಮಯ ಮಾಡಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರ ಸಹಿತವಾಗಿ ಹಿರಿಯ ಶಿಕ್ಷಕರಾದ ನಾಗರಾಜ, ಪಾಂಡುರಂಗ ನಾಯಕ್, ಕೃಷ್ಣ ಆಚಾರ್, ಶ್ರೀನಿವಾಸ್ ರಾವ್, ಹಾಗೂ ಎಂ.ಜಿ ಅಸದಿ ಮೊದಲಾದವರನ್ನು ಹೂ-ಹಾರ, ಶಾಲು, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.
ಗೌರವಾರ್ಪಣೆ ಸ್ವೀಕರಿಸಿದ ಎಲ್ಲಾ ಶಿಕ್ಷಕರು ಹಳೇ ವಿದ್ಯಾರ್ಥಿಗಳು ಸಂಸ್ಥೆಯ ಮತ್ತು ಶಿಕ್ಷಕರ ಮೇಲೆ ಇಟ್ಟಿರುವ ಗೌರವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಈ ಬಾಂದವ್ಯ ಹೀಗಿಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಉಪಸ್ಥಿತರಿದ್ದ ಹಳೇ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು, ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು, ರೊನಾಲ್ಡ್ ಸ್ವಾಗತಿಸಿ ನಿರಂಜನ್ ಜೈನ್ ನಿರೂಪಿಸಿದರು.






























