ಜಾಗ ಹಾಗೂ ಮನೆಯ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಅಣ್ಣನನ್ನು ಹೊಡೆದು ಕೊಂದ ಘಟನೆಗೆ ಕಾರ್ಕಳ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಕಾರ್ಕಳ ನಗರ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಕಾರ್ಕಳ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ನಿವಾಸಿ ರಿಚಾರ್ಡ್ ಡಿ’ಸೋಜಾ (65) ಕೊಲೆಯಾದವರು.ಡಿ’ಸೋಜಾ ಇವರ ತಮ್ಮ ಹೆರಾಲ್ಡ್ ಬಂಧಿತ ಆರೋಪಿ. ಇಬ್ಬರ ನಡುವೆ ಜಾಗ ಹಾಗೂ ವಾಸವಿದ್ದ ಮನೆಯ ಬಗ್ಗೆ ತಕರಾರು ಸಂಬಂಧಿಸಿ ಮೇ 2ರಂದು ಸಂಜೆ 6 ಗಂಟೆ ಸುಮಾರಿಗೆ ಜಗಳ ನಡೆದಿದ್ದು, ಈ ವೇಳೆ ಆರೋಪಿ ಹೆರಾಲ್ಡ್ ಮರದ ರೀಪಿನಿಂದ ಅಣ್ಣನಿಗೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಗಂಭೀರ ಗಾಯಗೊಂಡ ರಿಚಾರ್ಡ್ ಸಾವನ್ನಪ್ಪಿದ್ದರು. ಈ ಬಗ್ಗೆ ಮೃತರ ಪತ್ನಿ ಜೆಸಿಂತ ಡಿ’ಸೋಜಾ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೋಲಿಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.




























