ರಾಜೀವ ಗಾಂಧಿ, ವೀರಪ್ಪ ಮೊಯಿಲಿ ಹಾಕಿದ ಅಡಿಪಾಯ ಇಂದು ಗಟ್ಟಿಯಾಗಿ ಫಲನೀಡಿದೆ – ನೀರೆ ಕೃಷ್ಣ ಶೆಟ್ಟಿ.
ರಾಜ್ಯದ 6 ಗ್ರಾಮ ಪಂಚಾಯಿತಿಗೆ, ಪಂಚಾಯಿತಿರಾಜ್ ಆಡಳಿತಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಘೋಷಣೆಯಾಗಿದ್ದು ಇದರಲ್ಲಿ 5 ಪ್ರಶಸ್ತಿಗಳು ಉಡುಪಿ ಜಿಲ್ಲೆಗೆ ದೊರೆತಿದ್ದು ಜಿಲ್ಲೆ ಸಂದ ಬಹುದೊಡ್ಡ ಗೌರವ ಎಂದು ಪಂಚಾಯಿತಿರಾಜ್ ಒಕ್ಕೂಟದ ಮಾಜಿ ಅಧ್ಯಕ್ಷರಾದ ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ. ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿಗೆ ಬಡತನ ಮತ್ತು ಸುಧಾರಿತ ಜೀವನೋಪಾಯ ವಿಭಾಗದಲ್ಲಿ ಪ್ರಶಸ್ತಿಯ ಜೊತೆಗೆ 1 ಕೋಟಿ ರೂಪಾಯಿ ದೊರೆತಿದೆ. ಬೈಂದೂರು ತಾಲ್ಲೂಕಿನ ವಂಡ್ಸೆ ಗ್ರಾಮ ಪಂಚಾಯಿತಿಗೆ ಆರೋಗ್ಯ ಮತ್ತು ಮಕ್ಕಳ ಸ್ನೇಹಿ ಪಂಚಾಯಿತಿ, ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿಗೆ ನೀರು ಸಮೃದ್ಧಿಗಾಗಿ ಪ್ರಶಸ್ತಿಯ ಜೊತೆಗೆ 75 ಲಕ್ಷ ನಗದು ದೊರೆತಿದೆ.
ಮೂಲಸೌಕರ್ಯಕ್ಕಾಗಿ ಕಾರ್ಕಳ ತಾಲ್ಲೂಕಿನ ಸಾಣೂರು ಗ್ರಾಮ ಪಂಚಾಯಿತಿ ಮತ್ತು ಹಕ್ಲಾಡಿ ಗ್ರಾಮ ಪಂಚಾಯಿತಿಗೆ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಸಾಮಾಜಿಕ ನ್ಯಾಯಕ್ಕಾಗಿ 25 ಲಕ್ಷ ನಗದು ಜೊತೆಗೆ ಪ್ರಶಸ್ತಿ ಲಭಿಸಿದ್ದು ಪ್ರಶಂಸನೀಯ ಎಂದು ಕೃಷ್ಣ ಶೆಟ್ಟಿ ಅಭಿನಂದಿಸಿದ್ದಾರೆ.
ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ಪಂಚಾಯಿತಿರಾಜ್ ಕಾಯ್ದೆಗೆ 73 ನೇ ತಿದ್ದುಪಡಿ ತಂದಿರುವುದು ಮತ್ತು 1993 ರಲ್ಲಿ ಪಂಚಾಯಿತಿರಾಜ್ ಅಧಿನಿಯಮವನ್ನು ಡಾ.ಎಂ.ವೀರಪ್ಪ ಮೊಯಿಲಿಯವರು ತಂದು ಪಂಚಾಯಿತಿರಾಜ್ ವ್ಯವಸ್ಥೆಯನ್ನು ಬಲಪಡಿಸಿರುವುದು ಆಡಳಿತ ವ್ಯವಸ್ಥೆಗೆ ಬಲ ನೀಡಿದೆ. ಅದು ಈಗ ಫಲನೀಡುತ್ತಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ. ಉಡುಪಿ ಜಿಲ್ಲೆಯ ಪಂಚಾಯಿತಿಯ ಪ್ರಾಮಾಣಿಕ ಆಡಳಿತ ವ್ಯವಸ್ಥೆ, ದಕ್ಷತೆಗೆ ಸಂದ ಗೌರವವಾಗಿದೆ. ಇದು ಸರ್ವ ಸದಸ್ಯರಿಗೂ ದೊರೆತ ಮನ್ನಣೆಯಾಗಿದೆ ಎಂದು ಹೆಬ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ನೀರೆ ಕೃಷ್ಣ ಶೆಟ್ಟಿ ಅಭಿನಂದಿಸಿದ್ದಾರೆ.



































