ಉದಯ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗ, ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾರ್ಕಳದ ಡಾ। ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರ ಹುಟ್ಟುಹಬ್ಬದ ಪ್ರಯುಕ್ತ ಜೂ. 8ರಂದು ಕಾರ್ಕಳದಲ್ಲಿ ಬೃಹತ್ ಉಚಿತ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಕಳ ಬಂಡಿಮಠದ ಶ್ರೀ ಮೂಡುಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಬೃಹತ್ ಜನಸೇವಾ ಅಭಿಯಾನ ನಡೆಯಲಿದೆ. ಶಿಬಿರದಲ್ಲಿ ರಕ್ತದಾನ ಶಿಬಿರದೊಂದಿಗೆ, ಉಚಿತ ಹೃದ್ರೋಗ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ಉಚಿತ ತಪಾಸಣೆ ನಡೆಯಲಿದೆ. ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಸ್ತ್ರೀ ರೋಗ ಹಾಗೂ ಪ್ರಸೂತಿ ಸಂಬಂಧಿ ಸಮಸ್ಯೆಗಳಿಗೆ ಉಚಿತ ತಪಾಸಣ ಶಿಬಿರ ಆಯೋಜಿಸಲಾಗಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ ಆರೋಗ್ಯ ವಿಮೆ ಕಾರ್ಡ್ ವಿತರಿಸಲಾಗುವುದು. ಎಲ್ಲ ಉಚಿತ ಆರೋಗ್ಯ ಸೌಲಭ್ಯಗಳ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಉದಯ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗ ಹಾಗೂ ಕಾರ್ಕಳ-ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಕಟನೆ ತಿಳಿಸಿದೆ.


















