ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮಕ್ಕೆ ಅನುದಾನ ನೀಡಿಲ್ಲ ಎಂದು ಶಾಸಕರ ವಿರುದ್ದ ನಡೆಸಲಾದ ಸುದ್ದಿಗೋಷ್ಟಿಯಲ್ಲಿದ್ದ ರಿಕ್ಷಾ ಚಾಲಕನ ಮೂಲಕವೇ, ಅದೇ ಗ್ರಾಮದ ರಸ್ತೆಯೊಂದನ್ನು ಶಾಸಕರು ಉದ್ಘಾಟನೆ ಮಾಡಿಸಿದ ಘಟನೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿಯಲ್ಲಿ ನಡೆದಿದೆ.
ಕೊಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಲಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಆರೋಪಿಸಿ ಶಾಸಕರ ವಿರುದ್ಧ ಕೆಲವು ದಿನಗಳ ಹಿಂದೆ ಕೊಡಿಪ್ಪಾಡಿಯ ಚಂದ್ರಶೇಖರ ಮತ್ತಿತರರು ಪತ್ರಿಕಾಗೋಷ್ಟಿ ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ರಿಕ್ಷಾ ಚಾಲಕ ಹರೀಶ್ ಅವರ ಕೈಯಿಂದಲೇ ಶಾಸಕ ಅಶೋಕ್ ಕುಮಾರ್ ರೈ ಅವರು ಕೊಡಿಪ್ಪಾಡಿ ಗ್ರಾಮದ ನೂತನ ರಸ್ತೆಯಂದನ್ನು ಉದ್ಘಾಟನೆ ಮಾಡಿಸಿದ ಘಟನೆ ಜೂ.14ರಂದು ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಡೆದಿದೆ.
ಜೂ.೧೪ ರಂದು ಶಾಸಕ ಅಶೋಕ್ ರೈ ಅವರು ಕೊಡಿಪ್ಪಾಡಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತೆರಳಿದ್ದರು. ಗ್ರಾಮದ ಎಸ್ ಟಿ ಕಾಲನಿಗೆ ತೆರಳುವ ರಸ್ತೆಗೆ 10 ಲಕ್ಷ ರೂ.ಅನುದಾನವನ್ನು ನೀಡಿ ಅದರ ಕಾಮಗಾರಿ ಪೂರ್ಣಗೊಂಡಿದ್ದು ಅದರ ಉದ್ಘಾಟನೆಗೆ ಹೋಗಿದ್ದ ಶಾಸಕರು ಭಾಗವಹಿಸಿದ್ದ ಹರೀಶ್ ನಾಯಕ್ ಅಲ್ಲಿರುವುದನ್ನು ಗಮನಿಸಿದರು. ಅದೇ ರಸ್ತೆಯ ಮೂಲಕ ತೆರಳುವ ಹರೀಶ್ ರವರನ್ನು ಕಂಡ ಕೂಡಲೇ ಪುತ್ತೂರು ಶಾಸಕರು, ಅಭಿವೃದ್ಧಿಯಾಗಿಲ್ಲ ಎಂದು ಕೆಲವರು ಸುದ್ದಿಗೋಷ್ಠಿ ನಡೆಸಿದ್ದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೆ. ಇದೀಗ ಉದ್ಘಾಟನೆಯಾಗುತ್ತಿರುವುದು ಅಭಿವೃದ್ಧಿಯಲ್ವ? ಎಂದು ಕೇಳಿದರು. ಬಳಿಕ ಹರೀಶ್ ರವರ ಮೂಲಕವೇ ನೂತನ ರಸ್ತೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಯನ್ನೂ ಮಾಡಿಸಿದರು. ಈ ವೇಳೆ ಕೆಲವು ಮಂದಿ ಸ್ಥಳೀಯ ಯುವಕರು, ಸುದ್ದಿಗೋಷ್ಠಿ ನಡೆಸಿದವರು ಸಂಸದರ ಅನುದಾನವನ್ನು ತಂದು ಕುಡಿಪ್ಪಾಡಿ ಗ್ರಾಮಕ್ಕೆ ಸುರಿಯುವಂತೆ ಹೋರಾಟ ಮಾಡಲಿ ಎಂದು ಹೇಳಿದ ಘಟನೆಯೂ ನಡೆಯಿತು.
ಈ ವೇಳೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಕುಡಿಪ್ಪಾಡಿ ಗ್ರಾಮಕ್ಕೆ ಎರಡು ವರ್ಷದಲ್ಲಿ 2.84 ಕೋಟಿ ರೂ.ಅನುದಾನ ನೀಡಿದ್ದೇನೆ. ಸಣ್ಣ ಗ್ರಾಮವಾದರೂ ದೊಡ್ಡ ಮೊತ್ತದ ಅನುದಾನವನ್ನು ನೀಡಿದ್ದೇನೆ. ಎಲ್ಲಿಯೂ ತಾರತಮ್ಯ ಮಾಡಿಲ್ಲ. ಅಭಿವೃದ್ಧಿಯಾಗಿಲ್ಲ. ಸುದ್ದಿಗೋಷ್ಠಿ ನಡೆಸಿದವರದ್ದು ರಾಜಕೀಯ ಪ್ರೇರಿತ ಸುದ್ದಿಗೋಷ್ಠಿಯಾಗಿತ್ತು. ಇಲ್ಲಿ ಆಗಿರುವ ಕೆಲಸವನ್ನು ಒಮ್ಮೆ ಪರಿಶೀಲನೆ ಮಾಡಲಿ. ಇವತ್ತು 78 ಲಕ್ಷ ರೂ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಿಲಾನ್ಯಾಸ ಮಾಡಿದ್ದೇನೆ. ಮುಂದೆಯೂ ಈ ಗ್ರಾಮಕ್ಕೆ ಅನುದಾನ ನೀಡುತ್ತೇನೆ. ನಮಗೆ ಗ್ರಾಮದ ಅಭಿವೃದ್ಧಿ ಮುಖ್ಯ ರಾಜಕೀಯ ಮಾಡುವವರು ಅದನ್ನೇ ಮಾಡುತ್ತಿರಲಿ ಎಂದರು. ಕಬಕದಿಂದ ಕುಂಡಡ್ಕ ರಸ್ತೆಗೆ 4 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೆಲವು ಕಡೆಗಳಲ್ಲಿ ಡಾಮಾರು ರಸ್ತೆಗಳು ಹೊಂಡ ಬಿದ್ದಿದೆ ಇದಕ್ಕೂ 25 ರೂ. ಲಕ್ಷ ಅನುದಾನ ಮಂಜೂರಾಗಿದೆ ಎಂದರು.


















