Monday, June 15, 2026
Google search engine
Homeಕಾರ್ಕಳಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ಕೇರಳದಲ್ಲಿ ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ಕೇರಳದಲ್ಲಿ ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ

ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ಕಲ್ಪಿಸುವ ‘ಪ್ರಿಯದರ್ಶಿನಿ’ ಯೋಜನೆಗೆ ಕೇರಳ ಸರ್ಕಾರ ಚಾಲನೆ ನೀಡಿದೆ. ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿರುವನಂತಪುರಂನ ತಂಪನೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಯೋಜನೆಯನ್ನು ಉದ್ಘಾಟಿಸಿದರು.

ಯೋಜನೆಯ ಉದ್ಘಾಟನಾ ಪ್ರಯಾಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ವಿಶೇಷವೆಂದರೆ, ಈ ಬಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು.

ಈ ಯೋಜನೆಯಡಿ ಮಹಿಳೆಯರು ಮತ್ತು ತೃತೀಯಲಿಂಗಿಗಳು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಡೆಸುವ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ರಾಜ್ಯದಾದ್ಯಂತ ಸುಮಾರು 3,125 ಸಾಮಾನ್ಯ ಬಸ್‌ಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ.

ಸಾಮಾನ್ಯ, ಸಿಟಿ ಆರ್ಡಿನರಿ, ಲಿಮಿಟೆಡ್ ಸ್ಟಾಪ್, ಟೌನ್ ಟು ಟೌನ್, ಪಾಯಿಂಟ್ ಟು ಪಾಯಿಂಟ್ ಹಾಗೂ ಗ್ರಾಮವಂಡಿ ಸೇರಿದಂತೆ ಏಳು ವಿಭಾಗದ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ. ಪ್ರಯಾಣಿಕರಿಗೆ ಗುರುತಿಸಲು ಅರ್ಹ ಬಸ್‌ಗಳ ಮೇಲೆ ವಿಶೇಷ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದೆ.

ಈ ಯೋಜನೆ ಮಹಿಳೆಯರ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಸತೀಶನ್ ಹೇಳಿದ್ದಾರೆ. ಇದು ಮಹಿಳೆಯರಿಗೆ ನೀಡುತ್ತಿರುವ ದಾನವಲ್ಲ. ಅವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಯೋಜನೆ ಎಂದು ಅವರು ತಿಳಿಸಿದ್ದಾರೆ.ಇದನ್ನೂ ಓದಿ: 5 ದಶಕಗಳಿಂದ ಹೇರಲಾಗಿದ್ದ ಮದ್ಯ ನಿಷೇಧ ತೆರವು – ಮಾಲ್ಡೀವ್ಸ್‌ಗೆ ಪೈಪೋಟಿ ನೀಡಲು ಸಜ್ಜಾಯ್ತಾ ಲಕ್ಷದ್ವೀಪ?

ಯೋಜನೆಯಿಂದ KSRTCಗೆ ಆಗುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಖಾಸಗಿ ಬಸ್‌ಗಳಿಗೂ ಯಾವುದೇ ತೊಂದರೆ ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆರಂಭಿಕ ಹಂತದಲ್ಲಿ ಮೊದಲ 100 ದಿನಗಳ ಕಾಲ ಮಹಿಳೆಯರು ಮತ್ತು ತೃತೀಯಲಿಂಗಿಗಳು ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಬಳಿಕ ಯೋಜನೆಯ ಪರಿಣಾಮವನ್ನು ಪರಿಶೀಲಿಸಿ ಫಾಸ್ಟ್ ಮತ್ತು ಸೂಪರ್ ಫಾಸ್ಟ್ ಬಸ್‌ಗಳಿಗೂ ಸೌಲಭ್ಯ ವಿಸ್ತರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

ಮಹಿಳೆಯರ ಪ್ರಯಾಣ ವೆಚ್ಚದಲ್ಲಿ ಶೇ.15ರಿಂದ 25ರಷ್ಟು ಉಳಿತಾಯವಾಗುವ ನಿರೀಕ್ಷೆ ಇದೆ. ಇದರಿಂದ ಅವರ ಕೈಯಲ್ಲಿ ಹೆಚ್ಚು ಹಣ ಉಳಿಯಲಿದ್ದು, ಕುಟುಂಬದ ಆರ್ಥಿಕ ಸ್ಥಿತಿಗೂ ನೆರವಾಗಲಿದೆ ಎಂದು ಸರ್ಕಾರ ಅಂದಾಜಿಸಿದೆ. ಮಹಿಳೆಯರ ದೈನಂದಿನ ಜೀವನವನ್ನು ಸುಲಭಗೊಳಿಸುವ ಜೊತೆಗೆ, ರಾಜ್ಯದ ಆರ್ಥಿಕ ಚಟುವಟಿಕೆಗಳಿಗೂ ಈ ಯೋಜನೆ ಉತ್ತೇಜನ ನೀಡಲಿದೆ ಎಂಬ ವಿಶ್ವಾಸವನ್ನು ಕೇರಳ ಸರ್ಕಾರ ವ್ಯಕ್ತಪಡಿಸಿದೆ

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments