ಪ್ರೊ.ಭಗವಾನ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದ ಕಾಂಗ್ರೆಸ್ ಶಾಸಕ
ಮಂಗಳೂರು: ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪ್ರೊ.ಭಗವಾನ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು ಎಂದು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವಾನ್ ಯಾವ ಧರ್ಮವನ್ನು ನಂಬುತ್ತಾರೆ ಅಂತ ನಮಗೆ ಗೊತ್ತಿಲ್ಲ. ಭಗವಾನ್ ಅವರು ಹಿಂದೂ ಧರ್ಮದ ಭಾವನೆಯನ್ನ ಕೆಣಕುವಂತ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಅವರಿಗೆ ಯಾವುದೇ ಪ್ರಯೋಜನವಿಲ್ಲ. ಇಂತಹವರ ವಿರುದ್ಧ ಕೂಡಲೇ ಕೇಸ್ ಹಾಕಿ ಬಂಧಿಸಬೇಕು. ಭಗವಾನ್ ಮೇಲೆ ಕಠಿಣ ಕ್ರಮ ಸರ್ಕಾರ ತೆಗೆದುಕೊಳ್ಳಬೇಕು ಎಂದರು.
ಈ ಬಗ್ಗೆ ಯಾವುದೇ ಹಿಂದೂ ಸಂಘಟನೆಯಾಗಲಿ ಗೃಹ ಸಚಿವರಿಗೆ, ಮುಖ್ಯಮಂತ್ರಿಯವರಲ್ಲಿ ಮಾತಾಡಿ ಮನವಿ ಮಾಡಿ ಎಂದು ನನ್ನಲ್ಲಿ ಹೇಳಿಲ್ಲ. ಆದರೂ ಕೂಡ ಅವರವರ ಧರ್ಮ ಅವರವರಿಗೆ ಮುಖ್ಯ, ಅದು ನಂಬಿಕೆ. ಹಾಗಾಗಿ ಈ ಬಗ್ಗೆ ಗೃಹಸಚಿವ ಹಾಗೂ ಮುಖ್ಯಮಂತ್ರಿ ಅವರಲ್ಲಿ ಮಾತಾಡಿ, ಭಗವಾನ್ ಮೇಲೆ ಸುಮೋಟೊ ಕೇಸ್ ದಾಖಲಿಸಲು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.


















