ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕವಾಗಿ ಮನೆಯ ಕಸ ಎಸೆದ ಇಬ್ಬರನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪತ್ತೆ ಹಚ್ಚಿ ತಲಾ 500 ರೂ. ದಂಡ ವಿಧಿಸಲಾಗಿದೆ.
ಪಟ್ಟಣದ ಪ್ರಮುಖ ರಸ್ತೆ ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಕಸ ಎಸೆಯದಂತೆ ನಿಗಾ ಇಡಲು ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿ ಪರಿಶೀಲನೆ ನಡೆಸಿದ ವೇಳೆ ಮನೆಯ ತ್ಯಾಜ್ಯವನ್ನು ತಂದು ಸಾರ್ವಜನಿಕ ಸ್ಥಳದಲ್ಲಿ ಎಸೆಯುತ್ತಿದ್ದ ಇಬ್ಬರು ರೆಡ್ ಹ್ಯಾಂಡ್ ಸೆರೆಯಾಗಿದ್ದಾರೆ. ತತ್ ಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಇಬ್ಬರನ್ನೂ ಪತ್ತೆ ಹಚ್ಚಿ 500 ರೂ. ದಂಡ ವಿಧಿಸಿ, ಅವರಿಂದಲೇ ತ್ಯಾಜ್ಯ ತೆರವುಗೊಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾದಿಡ್ಡಿಕಸ ಎಸೆದು ಪರಿಸರ ಮಾಲಿನ್ಯ ಉಂಟುಮಾಡುವವರ ವಿರುದ್ಧಕಠಿನ ಕ್ರಮ ಕೈಗೊಳ್ಳಲಾಗುವುದು.ಮುಂದಿನ ದಿನಗಳಲ್ಲಿ ಯಾರೇ ಕಸ ಎಸೆದರೂ ಸಿಸಿಟಿವಿ ಮೂಲಕ ಪತ್ತೆಹಚ್ಚಿ ಇನ್ನೂ ಹೆಚ್ಚಿನ ಮೊತ್ತದ ಭಾರೀದಂಡ ವಿಧಿಸಲಾಗುವುದು ಎಂದು ಆರೋಗ್ಯ ನಿರೀಕ್ಷಕಿ ಲೈಲ ಥಾಮಸ್ ಅವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಮನೆಯ ಕಸವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಬೇಕೇ ಹೊರತು ರಸ್ತೆ ಬದಿ ಹಾಗೂ ಮಾರುಕಟ್ಟೆ ಆವರಣದಲ್ಲಿ ಎಸೆಯಬಾರದು ಎಂದು ಮನವಿ ಮಾಡಿದ್ದಾರೆ.



















