ಪಾನಿಪುರಿ ತಿಂದು 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿ ಮಂಡಲದ ಕೆಸಿಆರ್ ನಗರ ಕಾಲೋನಿಯಲ್ಲಿ ನಡೆದಿದೆ.
ಮಂಗಳವಾರ ಸಂಜೆ ಸ್ಥಳೀಯ ಪಾನಿಪುರಿ ವ್ಯಾನ್‌ನಲ್ಲಿ ಕೆಲವು ಮಕ್ಕಳು ಪಾನಿಪುರಿ ತಿಂದರು. ಅದನ್ನು ತಿಂದ ಸ್ವಲ್ಪ ಸಮಯದ ನಂತರ ಕೆಲವು ಮಕ್ಕಳು ಅಸ್ವಸ್ಥರಾದರು. ಅವರಲ್ಲಿ ಕೆಲವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಇನ್ನು ಕೆಲವರು ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದರಿಂದಾಗಿ, ಕುಟುಂಬ ಸದಸ್ಯರು ಅವರನ್ನು ಚಿಕಿತ್ಸೆಗಾಗಿ ಸಿರಿಸಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರು.
ಸ್ಥಳೀಯ ನಿವಾಸಿಗಳ ಪ್ರಕಾರ, ಮಂಗಳವಾರ ಸಂಜೆ ಕಾಲೋನಿಗೆ ಬಂದಿದ್ದ ಚಾಟ್ಸ್ ವ್ಯಾಪಾರಿಯೊಬ್ಬನ ಬಳಿ ಮಕ್ಕಳು ಹಾಗೂ ಅವರ ಕುಟುಂಬಸ್ಥರು ಪಾನಿಪುರಿ ಸೇವಿಸಿದ್ದರು. ಆದರೆ, ಮುಂಜಾನೆ ವೇಳೆ ಮಕ್ಕಳಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಮತ್ತು ಭೇದಿ ಆರಂಭವಾಗಿದೆ. ಒಬ್ಬರಾದ ಮೇಲೊಬ್ಬರಂತೆ ಕಾಲೋನಿಯ ಹಲವು ಮಕ್ಕಳು ಇದೇ ರೋಗಲಕ್ಷಣಗಳಿಂದ ಬಳಲಲು ಆರಂಭಿಸಿದಾಗ ಗಾಬರಿಗೊಂಡ ಪಾಲಕರು ತಕ್ಷಣವೇ ಅವರನ್ನು ರಾಜಣ್ಣ ಸಿರ್ಸಿಲ್ಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆ ವೇಳೆಗೆ ಆಸ್ಪತ್ರೆಗೆ ದಾಖಲಾದ ಮಕ್ಕಳ ಸಂಖ್ಯೆ 20 ದಾಟಿದೆ ಎನ್ನಲಾಗಿದೆ. ಸದ್ಯ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ತಂಗಲ್ಲಪಲ್ಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪಾಲಕರು ಮತ್ತು ನಿವಾಸಿಗಳ ಪ್ರಾಥಮಿಕ ಹೇಳಿಕೆಗಳ ಆಧಾರದ ಮೇಲೆ ಸದ್ಯ ಪಾನಿಪುರಿ ವ್ಯಾಪಾರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಕ್ಕಳು ಬೀದಿಬದಿಯ ಪಾನಿಪುರಿ ತಿಂದ ಬಳಿಕವೇ ಅಸ್ವಸ್ಥಗೊಂಡಿದ್ದಾರೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ. ಸದ್ಯ ವ್ಯಾಪಾರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಕ್ಕಳು ಸೇವಿಸಿದ ಪಾನಿಪುರಿ, ಅದಕ್ಕೆ ಬಳಸಲಾದ ಮಸಾಲೆ ನೀರು ಮತ್ತು ಆಲೂಗಡ್ಡೆ ಮಿಶ್ರಣದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಕಲುಷಿತ ನೀರು ಅಥವಾ ಹಳಸಿದ ಆಹಾರ ಪದಾರ್ಥಗಳ ಬಳಕೆಯಿಂದ ಈ ಫುಡ್ ಪಾಯ್ಸನಿಂಗ್ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.



















