Tuesday, August 25, 2026
Google search engine
Homeಹೆಬ್ರಿಎಸ್.ಆರ್.ಪಿ.ಯು. ಕಾಲೇಜಿನಲ್ಲಿ ‘ಕ್ಯಾಟಲಿಸ್ಟ್ ಕ್ಲಬ್’ ಉದ್ಘಾಟನೆ

ಎಸ್.ಆರ್.ಪಿ.ಯು. ಕಾಲೇಜಿನಲ್ಲಿ ‘ಕ್ಯಾಟಲಿಸ್ಟ್ ಕ್ಲಬ್’ ಉದ್ಘಾಟನೆ

ವಿದ್ಯಾರ್ಥಿಗಳಲ್ಲಿ ರಸಾಯನಶಾಸ್ತ್ರದ ಬಗ್ಗೆ ವೈಜ್ಞಾನಿಕ ಕುತೂಹಲ, ಸೃಜನಶೀಲತೆ, ಸಂಶೋಧನಾ ಮನೋಭಾವ ಹಾಗೂ ಹೊಸ ಆಲೋಚನೆಗಳನ್ನು ಬೆಳೆಸುವ ಉದ್ದೇಶದಿಂದ ಹೆಬ್ರಿಯ ಎಸ್.ಆರ್.ಪಿ.ಯು. ಕಾಲೇಜಿನಲ್ಲಿ ‘ಕ್ಯಾಟಲಿಸ್ಟ್ ಕ್ಲಬ್’ ಅನ್ನು ಬುಧವಾರ ಎಸ್.ಆರ್. ಆಡಿಟೋರಿಯಂನಲ್ಲಿ ಉದ್ಘಾಟಿಸಲಾಯಿತು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್‌ನ ಪ್ರಾಧ್ಯಾಪಕ ಡಾ. ಅರುಣ್ ಮೋಹನ್ ಇಸ್ಲೂರ್ ಅವರು ಕ್ಲಬ್‌ನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕುತೂಹಲ, ಪ್ರಶ್ನಿಸುವ ಮನೋಭಾವ ಹಾಗೂ ನಿರಂತರ ಕಲಿಕೆಯ ಮಹತ್ವವನ್ನು ವಿವರಿಸಿದ ಅವರು, ರಸಾಯನಶಾಸ್ತ್ರವು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂದರು.

“ನಮ್ಮ ದೇಹದಲ್ಲಿಯೂ ನಿರಂತರವಾಗಿ ಹಲವು ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ನಮ್ಮ ದೈನಂದಿನ ಬದುಕಿನಲ್ಲಿ ರಸಾಯನಶಾಸ್ತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರಗಳ ಸಮನ್ವಯದಿಂದ ನಾವು ನಿತ್ಯ ಬಳಸುವ ಅನೇಕ ಉಪಯುಕ್ತ ಔಷಧಗಳು ರೂಪುಗೊಂಡಿವೆ. ಆದ್ದರಿಂದ ವಿದ್ಯಾರ್ಥಿಗಳು ರಸಾಯನಶಾಸ್ತ್ರವನ್ನು ಕೇವಲ ಪಠ್ಯ ವಿಷಯವಾಗಿ ನೋಡದೆ, ಬದುಕಿನೊಂದಿಗೆ ಬೆಸೆದುಕೊಂಡಿರುವ ವಿಜ್ಞಾನವಾಗಿ ಅರಿತುಕೊಳ್ಳಬೇಕು” ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಸಪ್ನಾ ಎನ್. ಶೆಟ್ಟಿ ಮಾತನಾಡಿ, ನಿರಂತರ ಕಲಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮತ್ತಷ್ಟು ಬೆಳೆಸಿಕೊಳ್ಳಲು ಸಾಧ್ಯ ಎಂದರು. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಗೆ ತಮ್ಮನ್ನು ತಾವು ತೆರೆದುಕೊಳ್ಳುವ ಮೂಲಕ ಹೊಸ ಆಲೋಚನೆಗಳನ್ನು ಬೆಳೆಸಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಆರ್.ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಶಾಂತ ಎಚ್., ಕ್ಯಾಟಲಿಸ್ಟ್ ಕ್ಲಬ್ ಸಂಯೋಜಕರಾದ ವಿನಾಯಕ, ಸಹ ಸಂಯೋಜಕರಾದ ಗಣೇಶ್ ಹಾಗೂ ಪ್ರೀತಿ ಪಿ. ಹೆಗ್ಡೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಐಶ್ವರ್ಯ ಶೆಟ್ಟಿ ಮತ್ತು ಸಮರ್ಥ್ ಎ. ಜಾದವ್ ಉಪಸ್ಥಿತರಿದ್ದರು.

ಉಪನ್ಯಾಸಕಿ ಪ್ರೀತಿ ಪಿ. ಹೆಗ್ಡೆ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಚನ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ರಸಾಯನಶಾಸ್ತ್ರದ ಬಗ್ಗೆ ಆಸಕ್ತಿ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments