ಮನೆಗಳಲ್ಲಿ ವಿದ್ಯಾರ್ಥಿಗಳ ಕಡೆಗೆ ಗಮನ ಕಡಿಮೆಯಾಗುತ್ತಿದೆ : ರವಿಶಂಕರ್ ರಾವ್
ಹಿಂದಿನ ಕಾಲದಲ್ಲಿ ಮನೆಯಲ್ಲಿ ಅನೇಕ ಮಂದಿ ಹಿರಿಯರು ಕಿರಿಯರಿಗೆ ಬುದ್ಧಿಮಾತನ್ನು ಹೇಳುತ್ತಿದ್ದರು. ಅವರಿಗೆ ಮಕ್ಕಳೊಂದಿಗೆ ಬೆರೆಯಲು ಸಮಯವಿತ್ತು. ಆದರೆ ಈಗಿನ ಕಾಲಘಟ್ಟದಲ್ಲಿ ಪೋಷಕರು ತಮ್ಮ ತಮ್ಮ ಉದ್ಯೋಗದಲ್ಲಿಯೇ ಹೆಚ್ಚು ಗಮನಹರಿಸುವುದರಿಂದ ಮಕ್ಕಳ ಕುರಿತು ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಶಾಲೆಯಲ್ಲಿ ಶಿಕ್ಷಕರೇ ಮಕ್ಕಳ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯತೆಯಿದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ರವಿಶಂಕರ್ ರಾವ್ ಹೇಳಿದರು. ಇವರು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ್ ಶೆಟ್ಟಿ ಅವರು ಮಾತನಾಡಿ, ನಾವು ಸ್ವಾತಂತ್ರ್ಯ ಪಡೆಯಲು ನಮ್ಮ ಹಿರಿಯರು ಮಾಡಿದಂತಹ ತ್ಯಾಗ, ಬಲಿದಾನಗಳನ್ನು ಇಂದಿನ ಯುವ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಹಿರಿಯರು ನಡೆದ ಆದರ್ಶದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸುವ, ಮುಂದಿನ ಪೀಳಿಗೆಗೆ ತಲುಪಿಸುವ, ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವು ಪಡೆದ ಸ್ವಾತಂತ್ರ್ಯದ ಮೌಲ್ಯವನ್ನು ನಮ್ಮ ಬದುಕಿನಲ್ಲಿ ಅಳವಡಿಸಿ, ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ, ಎಸ್.ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್, ಎಸ್.ಆರ್. ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಭಗವತಿ, ಉಪಪ್ರಾಂಶುಪಾಲರಾದ ದೀಪಕ್ ಎನ್, ಎಸ್.ಆರ್.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಆಚಾರ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಜಯಲಕ್ಷ್ಮೀ ಮತ್ತು ಬಸವರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್.ಆರ್. ಪದವಿಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ಉಪನ್ಯಾಸಕಿ ಅಶ್ವಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



















