ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿಭಾಗ ಮತ್ತು ಇ & ಸಿ (ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗ ಜಂಟಿಯಾಗಿ ಸ್ಥಾಪಿಸಿದ ಉಪಗ್ರಹ ಟ್ರ್ಯಾಕಿಂಗ್ ಕೇಂದ್ರವಾದ ‘ನಿಟ್ಟೆ ಸ್ಯಾಟಲೈಟ್ ಟ್ರ್ಯಾಕಿಂಗ್ ಮತ್ತು ನ್ಯಾವಿಗೇಷನಲ್ ಟೆಲಿಮೆಟ್ರಿ ಯುನಿಟ್’ – ನಿಸ್ತಂತು ವನ್ನು ಅಕ್ಟೋಬರ್ 9 ರಂದು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು.
ಈ ಕೇಂದ್ರವನ್ನು ಉಡುಪಿ ಜಿಲ್ಲಾ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ಇಶಿತಾ ಗುಪ್ತಾ IPS ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೇಂದ್ರದಲ್ಲಿ ಪ್ರದರ್ಶಿಸಲಾದ ಉಪಗ್ರಹ ಸಿಗ್ನಲ್ ತಂತ್ರಜ್ಞಾನವನ್ನು ಶ್ಲಾಘಿಸಿದರು. ಉಪಗ್ರಹ ದತ್ತಾಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ಉಪಕ್ರಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಅವಕಾಶಗಳನ್ನು ಅನ್ವೇಷಿಸಲು ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕೇಂದ್ರಕ್ಕೆ ತಾಂತ್ರಿಕ ಸಂಪನ್ಮೂಲಗಳನ್ನು ಬೆಂಗಳೂರಿನ ಐಆರ್ಜಿ ಲ್ಯಾಬ್ಸ್ನ ಸಂಸ್ಥಾಪಕಿ ಶ್ರೀಮತಿ ಶ್ವೇತಾ ಪ್ರಭಾಕರನ್ ಮತ್ತು ಅವರ ತಂಡವು ಒದಗಿಸಿದೆ. ಐಆರ್ಜಿ ಲ್ಯಾಬ್ಸ್ ಬೆಂಗಳೂರು ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್ಅಪ್ ಆಗಿದ್ದು, ಕ್ಯೂಬ್ಸ್ಯಾಟ್ಸ್, ಸ್ಯಾಟಲೈಟ್ ಪೇಲೋಡ್ಗಳು ಮತ್ತು ಗ್ರೌಂಡ್ ಸ್ಟೇಷನ್ ಸಿಸ್ಟಮ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದೆ.
ನಿರ್ದಿಷ್ಟ ದಿಕ್ಕು ಹಾಗೂ ಕೋನದಲ್ಲಿ ಡಿಶ್ ಆಂಟೆನಾವನ್ನು ಅಳವಡಿಸುವ ಮೂಲಕ, ಈ ಜಿಯೋಸ್ಟೇಷನರಿ ಉಪಗ್ರಹಗಳಿಂದ ರವಾನೆಯಾಗುವ ಸಂಕೇತ ಹಾಗೂ ಭೂಮಿಯ ಚಿತ್ರಗಳನ್ನು ಕೇಂದ್ರದಲ್ಲಿ ಸ್ವೀಕರಿಸಿ ಹವಾಮಾನದ ಬಗೆಗೆ ಮಾಹಿಯನ್ನು ವಿಶ್ಲೇಷಿಸಬಹುದಾಗಿದೆ.. ಉದ್ಘಾಟನೆಯ ಸಮಯದಲ್ಲಿ, ಪ್ರದರ್ಶನದ ಭಾಗವಾಗಿ ಕೊರಿಯನ್ ಉಪಗ್ರಹದಿಂದ ಸಿಗ್ನಲ್ ನ್ನು ಯಶಸ್ವಿಯಾಗಿ ಸ್ವೀಕರಿಸಲಾಯಿತು.






























