9ನೇ ನಿಟ್ಟೆ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಒಂದು ಅಪೂರ್ವ ಸಂಶೋಧನಾ, ಪ್ರಾಯೋಗಿಕ ಪರಿಕಲ್ಪನೆ- ಪ್ರೊ. ಡಾ|ಫೆಮಿದಾ ಹ್ಯಾಂಡಿ
ಕಾರ್ಕಳ: ಕಂಪೆನಿಗಳ ಸಾಮಾಜಿಕ ಜವಾಬ್ದಾರಿ (ಸಿ. ಎಸ್. ಆರ್) ಒಂದು ಅಪೂರ್ವ ಪರಿಕಲ್ಪನೆ. ಉದ್ದಿಮೆಗಳು ತಮ್ಮ ಸಹ್ಯ ಬೆಳವಣಿಗೆಗೆ ಸಂಬಂಧಿಸಿ ಸಿ.ಎಸ್.ಆರ್ ಪರಿಕಲ್ಪನೆಯನ್ನು ಇಂದು ಜಾಗತಿಕವಾಗಿ ಜಾರಿಗೊಳಿಸುತ್ತಲಿದೆ. ಭಾರತದಲ್ಲಿ ಸಿ.ಎಸ್.ಆರ್ ಪರಿಕಲ್ಪನೆ ಕಾನೂನಾತ್ಮಕವಾಗಿ ಜಾರಿಗೊಂಡರೆ, ಅಮೆರಿಕದಂತಹ ದೇಶದಲ್ಲಿ ಸಿ.ಎಸ್.ಆರ್ ಕಾನೂನಾತ್ಮಕವಾಗಿ ಜಾರಿಗೊಳ್ಳಲಿಲ್ಲ. ಈ ವಿಚಾರಗಳಿಗೆ ಸಂಬಂಧಿಸಿ ಸಾಕಷ್ಟು ಜಿಜ್ಞಾಸೆ, ಸಂಶೋಧನೆಯ ಅಗತ್ಯವಿದೆ ಎಂದು ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾನಿಲಯದ ಸ್ಕೂಲ್ ಓಫ್ ಸೋಶಿಯಲ್ ಪಾಲಿಸಿ ಮತ್ತು ಪ್ರಾಕ್ಟೀಸ್ನ ಪ್ರೊ. ಡಾ| ಫೆಮಿದಾ ಹ್ಯಾಂಡಿ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯಲ್ಲಿ ಸಾರ್ಕ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ 9ನೇ ನಿಟ್ಟೆ ರಾಷ್ಟ್ರೀಯ ಸಮ್ಮೇಳನವನ್ನು ಜ.೧೦ ರಂದು ಉದ್ಘಾಟಿಸಿ ಮಾತನಾಡಿದರು. ದಿಕ್ಸೂಚಿ ಭಾಷಣಗೈದ ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಧರ್ಮ ಮತ್ತು ಸೋಶಿಯಲ್ ಪಾಲಿಸಿ ಸಂಶೋಧನೆಯ ಪ್ರೊ. ಡಾ| ರಾಮ್ ನ್ಯಾನ್ ಅವರು ಸಿ.ಎಸ್.ಆರ್ ಮತ್ತು ಸಹ್ಯ ಅಭಿವೃದ್ಧಿ ಬಗ್ಗೆ ಸಂಶೋಧನಾ ವ್ಯಾಖ್ಯಾನವನ್ನು ಉದಾಹರಣೆ ಸಹಿತ ನೀಡಿದರು. ಸಹ್ಯ ಅಭಿವೃದ್ಧಿಗೆ ಸಂಬಂದಿಸಿದ ವಿಚಾರಗಳನ್ನು ಆಮೂಲಾಗ್ರವಾಗಿ ಚಿಂತಿಸಬೇಕು ಎಂದರು. ರಾಷ್ಟ್ರೀಯ ಸಮ್ಮೇಳನ ಸಾರ್ಕ್ ಪ್ರಾಯೋಜಿತವಾಗಿದ್ದು, ಸಮ್ಮೇಳನವು ಕಂಪನಿಗಳ ಸಾಮಾಜಿಕ ಜವಾಬ್ದರಿ: ಸಹ್ಯತೆ ಮತ್ತು ಪ್ರಭುತ್ವ- ಭವಿಷ್ಯದ ಉದ್ದೇಶದಿಂದ ಮತ್ತು ಧನಾತ್ಮಕ ಪರಿಣಾಮದಿಂದ ನಿಭಾಯಿಸುವ ಕುರಿತು ಸಂಯೋಜಿಸಲಾಗಿತ್ತು.
ಇನ್ನೋರ್ವ ಮುಖ್ಯ ಅತಿಥಿ ನಿಟ್ಟೆ ವಿವಿಯ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷರಾದ ಪ್ರೊ. ಡಾ| ಗೋಪಾಲ ಮುಗೇರಾಯ ಮಾತನಾಡುತ್ತಾ ಸಿ.ಎಸ್.ಆರ್ ಜವಾಬ್ದರಿ. ಆದ್ದರಿಂದ ಅದನ್ನು ಕಂಪೆನಿಗಳು ಜವಾಬ್ದಾರಿಯಿಂದ ನೈತಿಕತೆಯಿಂದ ನಿಭಾಯಿಸಬೇಕು ಎಂದರು. ಈ ನಿಟ್ಟಿನಲ್ಲಿ ಜನತೆ, ಲಾಭ, ಪರಿಸರವನ್ನು ಕಾಲಕಾಲಕ್ಕೆ ನಿರ್ಣಯ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿವಿಯ ಕುಲಪತಿಗಳಾದ ಪ್ರೊ. ಡಾ| ಎಂ ಎಸ್ ಮೂಡಿತ್ತಾಯ ಅವರು ಮಾತನಾಡುತ್ತ ನಾವು ನಮ್ಮ ಜೀವನವನ್ನು ಇನ್ನೊಬ್ಬರಿಗೆ ಮಾದರಿಯಾಗಿ ನಿಭಾಯಿಸಿ ಕಂಪೆನಿಗಳು ಹತ್ತು- ಹಲವು ಸಾಮಾಜಿಕ, ಸರ್ಕಾರ, ಪರಿಸರ ವಿಚಾರಗಳತ್ತ ಕೇಂದ್ರೀಕರಿಸಿ ನಿರ್ಣಯಗಳನ್ನು ನಿಭಾಯಿಸಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಡಾ. ಸುಧೀರ್ ಎಂ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ. ಟಿ ಮಲ್ಲಿಕಾರ್ಜುನಪ್ಪ ಸಮ್ಮೇಳನದ ಆಶಯ ವಿವರಿಸಿದರು. ಸಮ್ಮೇಳನದ ಕಾರ್ಯದರ್ಶಿ ಪ್ರೊ. ಅರುಣ್ ಡಿಸೋಜ ವಂದಿಸಿದರು. ದೇಶದ ನಾನಾ ಸಂಸ್ಥೆಗಳಿಂದ ಆಗಮಿಸಿದ 160 ಸಂಶೋದಕರು ಪ್ರಬಂಧ ಮಂಡಿಸಿದರು. ಕು. ವಂದನಾ ಪ್ರಾರ್ಥಿಸಿದರು, ಪ್ರಾಧ್ಯಾಪಕಿ ಡಾ| ಕೀರ್ತಿ ಕಾರ್ಯಕ್ರಮ ನಿರ್ವಹಿಸಿದರು.