ಬಸನಗೌಡ ಪಾಟೀಲ್ ಯತ್ನಾಳ್ ಎರಡನೇ ಬಾರಿ ಬಿಜೆಪಿಯಿಂದ ಉಚ್ಛಾಟನೆಯಾಗಿದ್ದಾರೆ.
ಈ ಮೊದಲು 2015ರಲ್ಲಿ ವಿಜಯಪುರದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.
ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆರೋಪದ ಮೇಲೆ ಪಕ್ಷ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿತ್ತು. ನಂತರ ಉಚ್ಛಾಟನೆಯನ್ನು ಹಿಂಪಡೆದ ಬಿಜೆಪಿ 2018ರ ಚುನಾವಣೆಯಲ್ಲಿ ಯತ್ನಾಳ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಈ ಚುನಾವಣೆಯಲ್ಲಿ ಯತ್ನಾಳ್ 6 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿದ್ದರು.
ಈಗ ಮತ್ತೆ 6 ವರ್ಷಗಳ ಕಾಲ ಬಿಜೆಪಿ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ 6 ವರ್ಷ ಉಚ್ಛಾಟನೆ ಮಾಡಿ ಆದೇಶ ಪ್ರಕಟಿಸಿದೆ.
ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಆಗಾಗ ವಿಧಾನಸಭೆಯಲ್ಲೇ ಸರ್ಕಾರದ ವಿರುದ್ಧ ಯತ್ನಾಳ್ ಅಸಮಾಧಾನ ಹೊರಹಾಕುತ್ತಿದ್ದರು. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ನೇರಾನೇರವಾಗಿ ವಾಗ್ದಾಳಿ ನಡೆಸುತ್ತಿದ್ದರು. ಈ ಸಂಬಂಧ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್‌ಗೆ ಸಮರ್ಪಕವಾದ ಉತ್ತರ ನೀಡದ ಕಾರಣ ಈಗ ಯತ್ನಾಳ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ.
2023ರ ಚುನಾವಣೆಯಲ್ಲಿ ಯತ್ನಾಳ್ 8,233 ಮತಗಳಿಂದ ಜಯಗಳಿಸಿದ್ದರು. ಯತ್ನಾಳ್ 94,211 ಮತಗಳನ್ನು ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಬ್ದುಲ್ ಹಮೀದ್ 85,978 ಮತಗಳನ್ನು ಪಡೆದಿದ್ದರು.