ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಮತ್ತು ವಿದ್ಯಾನಗರ ಗ್ರೀನ್ಸ್ –ಕ್ರೀಡಾಂಗಣ ಲೋಕಾರ್ಪಣೆ

0

ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಮತ್ತು ವಿದ್ಯಾನಗರ ಗ್ರೀನ್ಸ್ –ಕ್ರೀಡಾಂಗಣ ಲೋಕಾರ್ಪಣೆ

ಮಣ್ಣುಪಳ್ಳ ಮಣಿಪಾಲವಾಗಿ, ಅನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳಾಗಿ ಇದೀಗ ಮಣಿಪಾಲ ಜ್ಞಾನಸುಧಾವಾಗಿ ಬೆಳಗುತ್ತಿರುವುದು ಅತ್ಯಂತ ಸಂತೋಷದ ವಿಷಯ. ಹಳ್ಳಿಗಳ ಅಬಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬಂತೆ ಹಳ್ಳಿಯಾಗಿದ್ದ ಮಣಿಪಾಲ ಇದೀಗ ಸರ್ವರ ಸಂತೋಷಕ್ಕೆ ಕಾರಣವಾಗಿ ಮುನ್ನಡೆಯುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಮಣಿಪಾಲ ಗ್ರೂಪ್ಸ್ ಅಧ್ಯಕ್ಷರಾದ ಟಿ. ಸುಧಾಕರ್ ಪೈ ಹೇಳಿದರು.

ಇವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ನವೀಕೃತ ಕಟ್ಟಡದ ಲೋಕಾರ್ಪಣೆ ಹಾಗೂ ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣರವರು ಮಣಿಪಾಲ ಜ್ಞಾನಸುಧಾದ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಕಾಶಿ ಉಡುಪಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಂದ ಸಿಗಲಿ, ಆ ಮೂಲಕ ಕನಸಿನ ಭಾರತ ನಿರ್ಮಾಣವಾಗಲಿ ಎಂದು ಹೇಳಿದರು.

ನೂತನವಾಗಿ ನಿರ್ಮಾಣಗೊಂಡ ಗ್ರಂಥಾಲಯವನ್ನು ಉದ್ಘಾಟಿಸಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಜ್ಞಾನಸುಧಾದ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾದ ರಘುಪತಿ ಭಟ್‌ರವರು ವಿದ್ಯಾನಗರ ಗ್ರೀನ್ಸ್- ಕ್ರೀಡಾಂಗಣವನ್ನು ಉದ್ಘಾಟಿಸಿ, ರಮೇಶ್ ಪೈರವರ ಈ ನೆಲಕ್ಕೆ ನೀಡಿದ ಯೋಗದಾನವನ್ನು ಜ್ಞಾನಸುಧಾವು ಸ್ಮರಣೀಯಗೊಳಿಸಿರುವುದು ಅಭಿನಂದನೀಯ ಎಂದರು. ಶ್ರೀಮತಿ ಜಯ ಸುಧಾಕರ ಪೈರವರು ನೂತನವಾಗಿ ನಿರ್ಮಾಣಗೊಂಡ ಶಾಂತಿ ರಮೇಶ ಪೈ ಸ್ಮಾರಕ ಸಭಾಂಗಣವನ್ನು, ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಸಂಸ್ಥಾಪಕ ಡಾ. ಕೆ.ಸಿ. ನಾಯ್ಕ್ರವರು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ನೂತನ ಕಛೇರಿಯನ್ನು ಉದ್ಘಾಟಿಸಿದರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಸ್ವಸ್ತಿ ಕಾಮತ್, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದ ರಕ್ಷಾ ರಾಮಚಂದ್ರ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಹಾಗೂ ಉಡುಪಿಗೆ ಪ್ರಥಮ ರ‍್ಯಾಂಕ್ ಪಡೆದ ಆಸ್ತಿ ಶೆಟ್ಟಿ, ಜೆ.ಇ.ಇ.ಮೈನ್ಸ್ನಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರ್ಕಳ ಜ್ಞಾನಸುಧಾದ ಆಕಾಶ್ ಎಚ್ ಪ್ರಭು ಮತ್ತು ಉಡುಪಿ ಜ್ಞಾನಸುಧಾಕ್ಕೆ ಪ್ರಥಮ ಸ್ಥಾನಿಯಾದ ಅಪೂರ್ವ್ ವಿ ಕುಮಾರ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪದವಿಪೂರ್ವ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರಾಗಿರುವ ಶ್ರೀಯುತ ಮಾರುತಿಯವರು ತಂದೆ ತಾಯಿಯ ಕನಸಿನೊಂದಿಗೆ, ಸಂಸ್ಥೆಯ ವಿಶೇಷ ಸೌಲಭ್ಯಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಿ ಎನ್ನುವುದು ಇಲಾಖೆಯ ಆಶಯ ಎಂದರು. ಮಣಿಪಾಲ ಹೈಸ್ಕೂಲ್ ಟ್ರಸ್ಟ್ನ ಸಂಚಾಲಕರಾದ ಶ್ರೀಯುತ ಪ್ರಕಾಶ ಶೆಟ್ಟಿ,

ಅಜೆಕಾರು ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್ನ ಟ್ರಸ್ಟಿಗಳು, ಆಡಳಿತ ಮಂಡಳಿಯ ಸದಸ್ಯರು, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ, ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

   

LEAVE A REPLY

Please enter your comment!
Please enter your name here