ಸಾಣೂರು ಗ್ರಾಮದ ಇಂದಿರಾ ನಗರದ 5 ಸೆಂಟ್ಸ್ ನಿವೇಶನಗಳ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಸುಮಾರು 7 ಎಕ್ರೆ ಪ್ರದೇಶದಲ್ಲಿ ಹುಲ್ಲು ಗಿಡಗಂಟಿಗಳಿಗೆ ಬೆಂಕಿ ತಗಲಿದ್ದು, ಅಗ್ನಿಶಾಮಕ ದಳದವರು ತುರ್ತು ಸ್ಪಂದಿಸಿ ಸಮೀಪದ 300ಕ್ಕೂ ಹೆಚ್ಚು ಮನೆಗಳನ್ನು ಬೆಂಕಿಯ ಅಪಾಯದಿಂದ ರಕ್ಷಿಸಿದ್ದಾರೆ.
ಬುಧವಾರ ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಇಂದಿರಾ ನಗರದ ಹುಲ್ಲು ಪ್ರದೇಶದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬಿಸಿಲಿನ ತಾಪ ಹಾಗೂ ಗಾಳಿಯ ವೇಗಕ್ಕೆ ಬೆಂಕಿ ಕ್ಷಣಾರ್ಧದಲ್ಲಿಸುಮಾರು ಭಾಗಕ್ಕೆ ವ್ಯಾಪಿಸಿದೆ. ಈ ಭಾಗದಲ್ಲಿ 5 ಸೆಂಟ್ಸ್ ಯೋಜನೆಯಡಿ ನಿರ್ಮಿಸಲಾದ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, ಬೆಂಕಿ ಮನೆಗಳ ತೀರಾ ಹತ್ತಿರಕ್ಕೆ ಬಂದಿದ್ದರಿಂದ ನಿವಾಸಿಗಳಲ್ಲಿಆತಂಕ ಮನೆಮಾಡಿತ್ತು. ಕಾರ್ಕಳ ಅಗ್ನಿಶಾಮಕ ದಳದ ಸಿಬಂದಿ 6 ತಾಸು ಕಾರ್ಯಾಚರಣೆ ನಡೆಸಿದರು.


























