
ಹಲವು ಮುಸ್ಲಿಂ ನಾಯಕರಿಗೆ ಕಾಂಗ್ರೆಸ್ ನಿಂದ ನೋಟೀಸ್ ಜಾರಿ
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆಯನ್ನು ಖಂಡಿಸಿ ಮುಸ್ಲಿಂ ನಾಯಕರು ಸರ್ಕಾರದ ವಿರುದ್ಧ ರಾಜೀನಾಮೆ ಅಸ್ತ್ರ ತೋರಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಿರಿಯ ನಾಯಕರು ಕರೆ ಮಾಡಿ ಪಕ್ಷಕ್ಕೆ ರಾಜಿನಾಮೆ ನೀಡಬಾರದು ಎಂದು ತಿಳಿಸಿದರೂ ಸಭೆ ನಡೆಸಿ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿರುವುದು, ಹಿರಿಯ ಸಚಿವರ ವಿರುದ್ಧ ಹೇಳಿಕೆ ನೀಡಿದ ಮುಸ್ಲಿಂ ನಾಯಕರಿಗೆ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆಯ ನಂತರ ಪಕ್ಷದ ಜವಾಬ್ದಾರಿಯುತ ನಾಯಕರಾಗಿ ನೀವು ಸಾರ್ವಜನಿಕರು, ಅಲ್ಪಸಂಖ್ಯಾತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುವುದು ಆದ್ಯತೆಯಾಗಿದೆ. ಈ ಸಂದರ್ಭ ಜಿಲ್ಲೆಯ ಕಾಂಗ್ರೆಸ್ ನಾಯಕರು సీఎం ಅವರ ಗಮನಕ್ಕೂ ವಿಷಯಗಳನ್ನು ತಂದಿದ್ದು ಎಲ್ಲಾ ನಾಯಕರು ನಿಮಗೆ ದೂರವಾಣಿ ಮೂಲಕ ಯಾವುದೇ ಸಭೆ ನಡೆಸಿ ಪಕ್ಷಕ್ಕೆ ರಾಜಿನಾಮೆ ನೀಡುವಂತಹ ದುಡುಕಿನ ಕ್ರಮ ಕೈಗೊಳ್ಳಬಾರದು, ಎಲ್ಲವನ್ನೂ ಸರಕಾರ ನಿಭಾಯಿಸುತ್ತದೆ ಎಂದು ಹೇಳಿದ ಹೊರತಾಗಿಯೂ ಸಭೆ ನಡೆಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೀರಿ.ಇದು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಪ್ರಕರಣವಾಗಿದೆ ಎಂದು ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಅವರಿಗೆ ನೀಡಿದ ನೊಟೀಸ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಯಾರೂ ಮಾತನಾಡಬೇಡಿ ಎಂದು ಹೇಳಿಕೆ ನೀಡಿದ್ದ ಮಾಜಿ ಮೇಯರ್ ಕೆ.ಅಶ್ರಫ್ ಅವರಿಗೂ ನೋಟಿಸ್ ನೀಡಲಾಗಿದೆ.












