ಅಹಮದಾಬಾದ್: ಗಂಟೆಗಳ ಹಿಂದೆ ವಿಮಾನ ದುರಂತ ಹೋಲುವ ಜಾಹಿರಾತು ಪ್ರಕಟ; ಎಲ್ಲೆಡೆ ವೈರಲ್ ಆಗುತ್ತಿರುವ ಜಾಹಿರಾತು
ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತ ಎಲ್ಲರಿಗೂ ತಿಳಿದ ಸುದ್ದಿ. ಆದರೆ ಆ ದಿನ ಕಾಕತಾಳಿಯವೋ ಏನೋ ಗೊತ್ತಿಲ್ಲ. ಘಟನೆ ನಡೆಯುವ 2-3 ತಾಸುಗಳ ಮೊದಲು ಪತ್ರಿಕೆಯಲ್ಲಿ ಪ್ರಕಟವಾದ ಜಾಹಿರಾತು ಈ ಘಟನೆಯನ್ನು ಹೋಲುತ್ತಿದ್ದದ್ದಂತೂ ನಿಜ. ಗುಜರಾತಿ ಭಾಷೆಯ ಜನಪ್ರಿಯ ದೈನಿಕ ಮಿಡ್ಡೇನಲ್ಲಿ ಜೂನ್ 12 ರಂದು ಮೊದಲ ಪುಟದಲ್ಲಿ ಅಹ್ಮದಾಬಾದ್ ನ ಮನರಂಜನಾ ಕೇಂದ್ರ ‘ಕಿಡ್ ಝಾನಿಯಾ’ದ ಜಾಹೀರಾತೊಂದು ಪ್ರಕಟವಾಗಿತ್ತು. ಜೂನ್ 13ರಿಂದ 15ರವರೆಗೆ ನಡೆಯುವ ತಂದೆಯಂದಿರ ದಿನಾಚರಣೆಯ ಅಂಗವಾಗಿ ಈ ಜಾಹೀರಾತನ್ನು ಪ್ರಕಟಿಸಲಾಗಿತ್ತು.
ಏರ್ಇಂಡಿಯಾದ ವಿಮಾನವೊಂದು ಸುಂದರವಾದ ನಗರದಲ್ಲಿ ಕೆಳಮಟ್ಟದಲ್ಲಿ ಹಾರುತ್ತಾ, ಕಟ್ಟಡವೊಂದರ ಮೇಲೆ ಲ್ಯಾಂಡಿಂಗ್ ಆಗಿರುವಂತೆ ಈ ಜಾಹೀರಾತಿನಲ್ಲಿ ತೋರಿಸಲಾಗಿತ್ತು. ಕಿಡ್ ಝಾನಿಯಾದಲ್ಲಿರುವ ವಿಮಾನಯಾನ ಥೀಮ್ ನ ಅನುಭವಗಳ ಬಗ್ಗೆ ಬೆಳಕು ಚೆಲ್ಲುವುದೇ ಈ ಜಾಹೀರಾತಿನ ಉದ್ದೇಶವಾಗಿತ್ತು. ಈ ಥೀಮ್ ಪಾರ್ಕ್ ನಲ್ಲಿ ಮಕ್ಕಳು ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿಯಂತೆ ಪಾತ್ರವಹಿಸಲು ಅವಕಾಶವಿತ್ತು.
ಆದರೆ ಈ ಜಾಹೀರಾತು ಓದುಗರಿಗೆ ತಲುಪಿದ ಕೆಲವೇ ಕ್ಷಣಗಳ ಬಳಿಕ ನೈಜ ದುರಂತವೊಂದು ನಡೆಯಿತು. ಅಹ್ಮದಾಬಾದ್ ನ ಸರ್ದಾರ್ ವಲ್ಲಭಾಯಿ ಪಟೇಲ್ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾದ ಎಐ171 ಬೋಯಿಂಗ್ ವಿಮಾನವು ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡು, ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್ ಕಟ್ಟಡದ ಮೇಲೆ ಅಪ್ಪಳಿಸಿತ್ತು.
ಪತನಗೊಂಡ ವಿಮಾನದ ಹಿಂಭಾಗವು ಕಟ್ಟಡದ ಮೇಲೆ ಹರಡಿಬಿದ್ದಿರುವ ದೃಶ್ಯವು ಈ ಜಾಹೀರಾತನ್ನೇ ಹೋಲುತ್ತಿದೆ. ಕಿಡ್ ಝಾನಿಯಾ ಜಾಹೀರಾತಿನಲ್ಲಿರುವ ಚಿತ್ರಕ್ಕೂ ಏರ್ಇಂಡಿಯಾದ ನೈಜ ದುರಂತದ ದೃಶ್ಯಕ್ಕೂ ಸಾದೃಶತೆ ಇರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.