ಡಾ.ಎನ್.ಎಸ್.ಎ.ಎಮ್.ಪ್ರಥಮದರ್ಜೆ ಕಾಲೇಜು: ಸಿಎ ಉತ್ತೀರ್ಣ ವಿದ್ಯಾರ್ಥಿಗಳಿಗೆ ಸನ್ಮಾನ
ನಿಟ್ಟೆ: ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು, 2025 ರ ಮೇ ಸಾಲಿನ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಎಸ್.ಮೂಡಿತ್ತಾಯ ಮತ್ತು ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷರಾದ ಪ್ರೊ.ಗೋಪಾಲ ಮುಗೇರಾಯ ಸನ್ಮಾನಿಸಿದರು.
ಡಾ.ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನ 2017-2020 ರ ಬ್ಯಾಚ್ ನ ಪದವಿ ವಿದ್ಯಾರ್ಥಿಗಳಾದ ಕುಮಾರಿ ರಚನಾ ಎಸ್.ಡಿ(ಮೂಡಬಿದ್ರೆಯ ಶ್ರೀಧೀರಜ್ ಎಸ್ ಎಮ್ ಮತ್ತು ಶ್ರೀಮತಿ ಪದ್ಮಜಾ ಶೆಟ್ಟಿಯವರ ಸುಪುತ್ರಿ) ಮತ್ತು ಶೇಕ್ ಮೊಹಮ್ಮದ್ ಅಮಾನ್(ಶ್ರೀ ಶೇಖ್ ಜಹೀರ್ ಮತ್ತು ಶ್ರೀಮತಿ ಶಾನಾಝ್ ಭಾನು ಅವರ ಪುತ್ರ) ಇವರು ಹೊಸದಿಲ್ಲಿ ಲೆಕ್ಕಪರಿಶೋಧಕರ ಸಂಸ್ಥೆ(ಐಸಿಎಐ) ಮೇ 2025 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಎ ಪದವಿಯನ್ನು ಪಡೆದಿರುತ್ತಾರೆ. ಇವರನ್ನು 2025-26ನೇ ಸಾಲಿನ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಪ್ರೊ.ಗೋಪಾಲ ಮುಗೇರಾಯ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನಗಳ ಕಡೆಗೂ ಗಮನ ನೀಡಬೇಕು, ಈ ಕ್ಷೇತ್ರಗಳಲ್ಲಿಯೂ ಕೂಡ ಅಪಾರವಾದ ಉದ್ಯೋಗಾವಕಾಶಗಳು ಇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮಾತನಾಡಿ ಪ್ರತಿಯೊಬ್ಬ ಸಾಧಕ ವಿದ್ಯಾರ್ಥಿಯ ಹಿಂದೆ ತಮ್ಮ ಬದುಕು ಮತ್ತು ಆಸೆಗಳನ್ನು ಮುಡಿಪಿಟ್ಟ ತಂದೆ ತಾಯಿಯರ ಶ್ರಮವಿದೆ, ಅದರ ಪ್ರತಿಫಲವೇ ಈ ಸಾಧನೆ ಎಂದು ತಿಳಿಸಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮಾತನಾಡಿ ಪ್ರತಿಯೊಬ್ಬ ಸಾಧಕ ವಿದ್ಯಾರ್ಥಿಯ ಹಿಂದೆ ತಮ್ಮ ಬದುಕು ಮತ್ತು ಆಸೆಗಳನ್ನು ಮುಡಿಪಿಟ್ಟ ತಂದೆ ತಾಯಿಯರ ಶ್ರಮವಿದೆ, ಅದರ ಪ್ರತಿಫಲವೇ ಈ ಸಾಧನೆ ಎಂದು ತಿಳಿಸಿ ಅಭಿನಂದಿಸಿದರು.
ಹಾಗೆಯೇ 2025-26ನೇ ಸಾಲಿನಲ್ಲಿ ಸೇರ್ಪಡೆಯಾದ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಾವು ನಮ್ಮ ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಅನ್ವಯಿಸಬೇಕು ಆಗ ಮಾತ್ರ ನಮ್ಮ ಆಲೋಚನೆಗಳು ಪರಿಣಾಮಕಾರಿಯಾಗುತ್ತವೆ, ನಿಟ್ಟೆ ವಿಶ್ವವಿದ್ಯಾಲಯ ಅಂತಹ ಹೊಸ ಕನಸುಗಳಿಗೆ, ಆಲೋಚನೆಗಳಿಗೆ ಚಿಮ್ಮುಹಲಗೆಯಾಗಿದ್ದು ವಿದ್ಯಾರ್ಥಿಗಳು ನಿಟ್ಟೆ ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಸಿಎಸ್ ಮತ್ತು ಎಸಿಸಿಎ ಪರೀಕ್ಷೆಗಳ ಮೊದಲ ಹಂತವನ್ನು ಪೂರೈಸಿದ ವಿದ್ಯಾರ್ಥಿಗಳನ್ನು ಕೂಡ ಅಭಿನಂದಿಸಲಾಯಿತು. ಡಾ.ಎನ್.ಎಸ್.ಎಮ್. ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ನಿಶ್ಮಿತಾ ಶೆಟ್ಟಿ ವಂದಿಸಿದರು. ಐಕ್ಯೂಎಸಿ ಸಂಯೋಜಕ ಶ್ರೀ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.