ಗೌರಿ ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದ್ದು, ಮಾರುಕಟ್ಟೆಯಲ್ಲಿ ಗಣೇಶ ವಿಗ್ರಹಗಳ ಮಾರಾಟ ಆರಂಭವಾಗಿದೆ. ಈ ನಡುವೆ ಪರಿಸರಕ್ಕೆ ಮಾರಕವೆನಿಸಿರುವ ಪ್ಲಾಸ್ಟರ್ ಒಫ್ ಪ್ಯಾರಿಸ್ ಮಾತ್ತು ಭಾರ ಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ತಯಾರಿಸಿದ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಪ್ರತಿಷ್ಠಾಪನೆಯನ್ನು ರಾಜ್ಯಾದ್ಯಂತ ಸಂಪೂರ್ಣ ನಿಷೇಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.
ಗಣೇಶ ಮೂರ್ತಿಗಳನ್ನು ಸಾಮಾನ್ಯವಾಗಿ ಪ್ಲಾಸ್ಟರ್ ಒಫ್ ಪ್ಯಾರಿಸ್ ನಿಂದ ತಯಾರಿಸುವುದು ಕಂಡುಬಂದಿದ್ದು, ಇದು ಜೈವಿಕ ವಿಘಟನೀಯವಲ್ಲ, ವಿಷಕಾರಿ ಮತ್ತು ಅಪಾಯಕಾರಿ ಬಣ್ಣಗಳಿಂದ ಮಾಡಲ್ಪಟ್ಟಿದ್ದು, ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸುವುದರಿಂದ ಜಲಮೂಲಗಳು ಕಲುಷಿತಗೊಳ್ಳಲಿದೆ. ಜತೆಗೆ ಅರೋಗ್ಯ ಮತ್ತು ಪರಿಸರದ ಮೇಲೆಯೂ ದುಷ್ಪರಿಣಾಮ ಬೀರಲಿದೆ.
ಹಾಗಾಗಿ ಗೌರೀ ಮತ್ತು ಗಣೇಶ ಹಬ್ಬದ ಸಂಧರ್ಭದಲ್ಲಿ ರಾಜ್ಯವ್ಯಾಪಿ ಯಾವುದೇ ಕಾರಣಕ್ಕೂ ಭಾರಲೋಹ ಮಿಶ್ರಿತ ಬಣ್ಣ ಸಹಿತ ಪ್ಲಾಸ್ಟರ್ ಒಫ್ ಪ್ಯಾರಿಸ್ ನಿಂದ ಗಣೇಶ ಮೂರ್ತಿಯನ್ನು ತಯಾರಿಸುವುದು, ಪ್ರತಿಷ್ಠಾಪಿಸುವುದು, ಸಾಗಿಸುವುದು, ಮಾರಾಟ ಮಾಡುವುದು, ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಸರ್ಕಾರದ ಆದೇಶವನ್ನು ಉಲ್ಲಂಘಿಸಿದಲ್ಲಿ ಪರಿಸರ ಸಂರಕ್ಷಣೆ ಕಾಯ್ದೆ 1986 ಅಡಿ ಶಿಕ್ಷೆಗೆ ಗುರಿಪಡಿಸಲಾಗುವುದು. ಪರಿಸರ ಸಂರಕ್ಷಣೆಗೆ ಪೂರಕವಾಗುವ ಬಣ್ಣರಹಿತ ಜೇಡಿ ಮಣ್ಣಿನಿಂದ ತಯಾರಿಸಿದ ವಿಗ್ರಹಗಳನ್ನು ಮಾತ್ರ ಬಳಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.