ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನೂತನ ಇಂಟರ್ಯಾಕ್ಟ್ ಕ್ಲಬ್‍ನ ಪದಗ್ರಹಣ ಸಮಾರಂಭ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್‍ನ ಅಧ್ಯಕ್ಷರಾದ ರೋ. ನವೀನ್‍ಚಂದ್ರ ಶೆಟ್ಟಿ ಮಾತನಾಡಿ, ನಮ್ಮ ಸಣ್ಣ ಸೇವೆಗಳಿಂದ ದೊಡ್ಡ ಬದಲಾವಣೆ ತರಬಹುದು. ವಿದ್ಯಾರ್ಥಿಗಳು ಕೂಡಾ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಇಂಟರ್ಯಾಕ್ಟ್ ಕ್ಲಬ್‍ನಂತಹ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಕಳ ಇಂಟರ್ಯಾಕ್ಟ್ ಕ್ಲಬ್‍ನ ಅಧ್ಯಕ್ಷ ರೋ. ಬಾಲಕೃಷ್ಣ ದೇವಾಡಿಗ ಅವರು ಇಂಟರ್ಯಾಕ್ಟ್ ಕ್ಲಬ್‍ನ ಸ್ಥಾಪನೆ, ಅದರ ಬೇರೆ ಬೇರೆ ವಿಭಾಗಗಳು ಮತ್ತು ಸಂಘದ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು. ರೋ. ಇಕ್ಬಾಲ್ ಅಹಮದ್ ಅವರು ಮಾತನಾಡಿ “ಇಂಟರ್ಯಾಕ್ಟ್ ಕ್ಲಬ್ ಮಕ್ಕಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಒಂದು ಅದ್ಭುತ ವೇದಿಕೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಕ್ರೀಯಾಶೀಲತೆ, ತಂಡದ ಕೆಲಸ ಹಾಗೂ ಸಮಾಜದ ಕಡೆಗೆ ಒಲವು ಬೆಳೆಸಿಕೊಳ್ಳಲು ಸಹಕಾರಿ. ಇಂತಹ ಕ್ಲಬ್‍ಗಳಲ್ಲಿ ಭಾಗವಹಿಸುವುದು ಅವರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ ಇಂಟರ್ಯಾಕ್ಟ್ ಕ್ಲಬ್‍ನ ನೂತನ ಸದಸ್ಯರಿಗೆ ಶುಭ ಹಾರೈಸಿದರು. ರೋಟರಿ ಕ್ಲಬ್‍ನ ಕಾರ್ಯದರ್ಶಿಗಳಾದ ರೋ. ಚೇತನ್ ಕುಮಾರ್, ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್‍ನ ಸಂಯೋಜಕಿ ಶ್ರೀಮತಿ ಶೈಲಿ ಹೆಗ್ಡೆ ಹಾಗೂ ಕಾರ್ಕಳ ರೋಟರಿ ಕ್ಲಬ್‍ನ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.