ಕಾರ್ಕಳ: ಆಚರಣೆಯ ಮೂಲಕ ತುಳುನಾಡ ಸಂಸ್ಕೃತಿಯು ಉಳಿಯಲು ಸಾಧ್ಯ-ಆಶೀತಾ ಕಡಂಬ

0

 

‘ತುಳುನಾಡ ಮಣ್ಣಲ್ಲಿ ಹುಟ್ಟಿದ ನಾವು ತುಳುನಾಡ ಸಂಸ್ಕೃತಿಯನ್ನು ಉಳಿಸುವುದು ಅತ್ಯವಶ್ಯಕ’ ಎಂದು ಕೆ.ಎಮ್.ಇ.ಎಸ್. ವಿದ್ಯಾಸಂಸ್ಥೆ ಆಯೋಜಿಸಿದ ‘ಆಟಿಡೊಂಜಿ ದಿನ ‘ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಆಶೀತಾ ಕಡಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿಪ್ರಾಯಪಟ್ಟರು.

‘ತುಳುನಾಡಿನಲ್ಲಿ ಆಟಿ ತಿಂಗಳು ತನ್ನದೇ ಆದ ವೈಶಿಷ್ಟವನ್ನು ಹೊಂದಿದೆ. ತುಳುನಾಡಿನಲ್ಲಿ ಕೃಷಿಯೇ ಪ್ರಧಾನವಾಗಿದ್ದ ಕಾಲವೊಂದಿತ್ತು. ಆಟಿ ತಿಂಗಳಿನಲ್ಲಿ ರೈತರು ತಮ್ಮ ತಮ್ಮ ಮನೆಯಲ್ಲಿದ್ದು, ವಿಶ್ರಾಂತಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಚೆನ್ನಮಣೆ, ಚದುರಂಗ ಮೊದಲಾದ ಆಟಗಳನ್ನು ಆಡುತ್ತಿದ್ದರು. ಆಟಿಕಳಂಜ ವೇಷಧಾರಿಗಳು ವಿಶಿಷ್ಟ ವೇಷ ಧರಿಸಿ ಮನೆ ಮನೆಗೆ ಬರುತ್ತಿದ್ದರು. ಮನೆಯವರು ಆಟಿಕಳಂಜರನ್ನು ಬರಮಾಡಿಕೊಂಡು ಅವರಿಗೆ ದವಸ ಧಾನ್ಯ ನೀಡಿ ಗೌರವಿಸುತ್ತಿದ್ದರು. ಆಟಿಮಾವಾಸ್ಯೆಯ ದಿನ ಬೆಳಿಗ್ಗೆ ಬೇಗನೆ ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಬಡಿದ್ದೆಬ್ಬಿಸಿ, ಚೆನ್ನಾಗಿ ಅರೆದು ಅದರ ಕಷಾಯ ಮಾಡಿ ಕುಡಿಯುವುದು ತುಳುವರ ಪದ್ದತಿ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ರೋಗಗಳು ಬರುವುದಿಲ್ಲ. ಆಟಿ ಸಮಯದಲ್ಲಿ ಬೇರೆ ಬೇರೆ ಸೊಪ್ಪುಗಳ ಪದಾರ್ಥಗಳನ್ನು ಮಾಡಿ ತಿನ್ನುವುದರಿಂದ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಸಿಕ್ಕಿ ನಮ್ಮ ದೇಹ ಆರೋಗ್ಯವಾಗಿರುತ್ತದೆ’ ಎಂದರು.

ಪ್ರೌಢ ಶಾಲಾ ಮುಖ್ಯಸ್ತೆ ಶ್ರೀಮತಿ ಯವರು ಮಾತನಾಡಿ ‘ಆಟಿಡೊಂಜಿ ದಿನ ಕಾರ್ಯಕ್ರಮದ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ತುಳುನಾಡ ಸಂಸ್ಕೃತಿಯ ಪರಿಚಯವಾಗುತ್ತದೆ. ಮಾನವೀಯ ಸಂಬಂಧಗಳು ಬೆಸೆಯುವುದರಲ್ಲಿ ಯಾವುದೇ ಸಂಶಯ ಬೇಡ’ ಎಂದರು.

ಕಾಲೇಜಿನ ಪ್ರಿನ್ಸಿಪಾಲ್ ಕೆ. ಬಾಲಕೃಷ್ಣ ರಾವ್ ಮಾತನಾಡಿ ‘ತುಳುನಾಡ ಸಂಸ್ಕೃತಿಯ ಉಳಿವಿಗೆ ಆಶೀತಾ ಕಡಂಬರ ಸೇವೆ ಶ್ಲಾಘನೀಯ. ತುಳುನಾಡ ಜನರು ಉಪಯೋಗಿಸುತ್ತಿದ್ದ ಪುರಾತನ ವಸ್ತುಗಳ ಸಂಗ್ರಹಣೆ ನಿಜಕ್ಕೂ ಪ್ರಶಂಸನೀಯ. ನಾಗರ ಪಂಚಮಿಯ ಹಬ್ಬ, ಭೂತ ಕೋಲ, ಬ್ರಹ್ಮಕಲಶೋತ್ಸವ, ಡಕ್ಕೆ ಬಲಿ, ನಾಗಮಂಡಲೋತ್ಸವ ಇತ್ಯಾದಿ ಉತ್ಸವಗಳು ಮಾನವೀಯ ಸಂಬಂಧಗಳನ್ನು ಬೆಸೆಯುತ್ತವೆ. ಪಾಡ್ದನಗಳು ನಮ್ಮ ತುಳುನಾಡನ್ನು ಬಿಂಬಿಸುವ ಜಾನಪದ ಹಾಡುಗಳು. ಇವುಗಳು ತುಳುನಾಡಿನ ನಾಡಿಮಿಡಿತಗಳು’ ಎಂದು ಅಭಿಪ್ರಾಯಪಟ್ಟರು.

ಪ್ರಾಥಮಿಕ ಶಾಲೆಯ ಮುಖ್ಯಸ್ತೆ ಲೋಲಿಟ್ ಡಿಸಿಲ್ವ ರವರು ‘ಆಟಿ ಡೊಂಜಿ ದಿನ’ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಶ್ರುತಿ ಧನ್ಯವಾದಗೈದರು. ಸಂಗೀತರವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ತುಳುನಾಡಿನ ಜಾನಪದ ನೃತ್ಯ, ಯಕ್ಷಗಾನ ನೃತ್ಯ, ತುಳುನಾಡ ರೈತರನ್ನು ಪ್ರತಿಬಿಂಬಿಸುವ ರೂಪಕಗಳು ಪ್ರದರ್ಶನಗೊಂಡವು. ವಿದ್ಯಾರ್ಥಿಗಳು ಆಟಿ ತಿಂಗಳಿನಲ್ಲಿ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಆಶೀತಾ ಕಡಂಬರು ಆಯೋಜಿಸಿದ ತುಳುನಾಡಿನ ಪುರಾತನ ವಸ್ತುಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸಿದರು.

 

LEAVE A REPLY

Please enter your comment!
Please enter your name here