ಪ್ರವಾಸಿ ಅಥವಾ ವ್ಯಾಪಾರ ವೀಸಾದ ಮೂಲಕ ಅಮೇರಿಕಾ ಪ್ರವೇಶಿಸುವ ವಿದೇಶಿ ಸಂದರ್ಶಕರು, 13 ಲಕ್ಷ ರೂ.ವರೆಗೆ ಬಾಂಡ್ ನೀಡಬೇಕು ಎಂಬಂಥ ಪ್ರಾಯೋಗಿಕ ಕಾರ್ಯಕ್ರಮ ಜಾರಿಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಚಿಂತಿಸುತ್ತಿದೆ ಎಂದು ವರದಿಯಾಗಿದೆ.
ಅಮೆರಿಕಕ್ಕೆ ಬರುವವರು ತಮ್ಮ ವೀಸಾಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಆದಾಗ್ಯೂ ಈ ಉಪಕ್ರಮದಲ್ಲಿ ಯಾವ್ಯಾವ ದೇಶಗಳನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂಬ ಗುಟ್ಟನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. B1/B2 ವೀಸಾ ಪಡೆದ ವಿದೇಶಿಗರು, ತಮ್ಮ ವೀಸಾ ಅವಧಿ ಮುಗಿದ ಬಳಿಕವೂ ಅಮೆರಿಕಾದಲ್ಲೇ ನೆಲೆಸುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮ ಜಾರಿಗೊಳಿಸಲಾಗುತ್ತದೆ ಎನ್ನಲಾಗಿದೆ. ಈ ಕಾರ್ಯಕ್ರಮವನ್ನು ಮೊದಲಿಗೆ ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ಅದರ ಪರಿಣಾಮವನ್ನು ನೋಡಿಕೊಂಡು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.



































