ಗೂಗಲ್ ಸರ್ಚ್ ಮತ್ತು ಸಾಮಾಜಿಕ ಸಂಘಟನೆಯ ಶತ ಪ್ರಯತ್ನದ ಮೂಲಕ ಕರ್ನಾಟಕದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಒಂದೂವರೆ ವರ್ಷದ ನಂತರ ಕುಟುಂಬವನ್ನು ಸೇರಿದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸ್ನಾತಕೋತ್ತರ ಪಧವೀಧರ ಮಹಿಳೆಯೊಬ್ಬರು ಕಳೆದ 2024ರ ಫೆಬ್ರವರಿಯಲ್ಲಿ ದಕ್ಷಿಣ ಗೋವಾ ಜಿಲ್ಲೆಯ ವೆರ್ನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಆಕೆಯನ್ನು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪಂಡೂರು ಎಂಬಲ್ಲಿ ಸವಿತಾ ಆಶ್ರಮಕ್ಕೆ ಸೇರಿಸಲಾಗಿತ್ತು. ಅಲ್ಲಿ ಆಕೆಗೆ ವೈದ್ಯಕೀಯ ಚಿಕಿತ್ಸೆ ಜೊತೆಗೆ ಕೌನ್ಸಿಲಿಂಗ್ ನಡೆಸಲಾಗಿತ್ತು. ಚೇತರಿಕೆ ಬಳಿಕ ಮಹಿಳೆ ತನ್ನ ಗುರುತು ಮತ್ತು ಊರನ್ನು ಸ್ಪಷ್ಟವಾಗಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಗೂಗಲ್ ಸರ್ಚ್ ನಲ್ಲಿ ಹುಡುಕಿದ ಆಶ್ರಮದ ಟ್ರಸ್ಟಿ ಕಾರವಾರ ನಗರ ಪೊಲೀಸರನ್ನು ಸಂಪರ್ಕಿಸಿದ್ದರು. ಕಾಕತಾಳೀಯ ಎಂಬಂತೆ ಮಹಿಳೆಯ ಕುಟುಂಬ ಅಲ್ಲಿ ಮುಂಚೆಯೇ ನಾಪತ್ತೆ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬ ಸದಸ್ಯರು ಕಾರವಾರ ಪೊಲೀಸರೊಂದಿಗೆ ಆಶ್ರಮಕ್ಕೆ ತೆರಳಿ ಮಹಿಳೆಯನ್ನು ಮನೆಗೆ ಕರೆದೊಯ್ದರು.



































