ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಪಿಜಿ ಮಾಲೀಕ (PG Owner) ಅತ್ಯಾಚಾರ ಎಸಗಿದ್ದ ಕೇಸ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಅಲ್ಲದೇ ಕೃತ್ಯ ಸಂಬಂಧ ಪ್ರಾಮಾಣಿಕ, ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಡಿಜಿಪಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
ತನ್ನದೇ ಪಿಜಿಯಲ್ಲಿ ಇದ್ದ ಕೇರಳ ಮೂಲದ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕ ಅಶ್ರಫ್ ಅತ್ಯಾಚಾರ ಎಸಗಿದ್ದ ಘಟನೆ ಕಳೆದ ಶುಕ್ರವಾರ ಸೋಲದೇವನಹಳ್ಳಿಯಲ್ಲಿ ನಡೆದಿತ್ತು. ಹೀಗಾಗಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಜೊತೆಗೆ ಸಂತ್ರಸ್ತೆಗೆ ಅಗತ್ಯ ನೆರವು ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಪಿಜಿ ಮಾಲೀಕ ಅಶ್ರಫ್ ಬಂಧಿತ ರೇಪ್ ಆರೋಪಿ. ವಿದ್ಯಾರ್ಥಿನಿ ಪಿಜಿ ಸೇರಿ ಕೇವಲ 10 ದಿನಗಳು ಕಳೆದಿತ್ತು. ಕಳೆದ ಶುಕ್ರವಾರ ಆಕೆಯನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿರುವುದು ಕಂಡುಬಂದಿತ್ತು. ಘಟನೆ ಬಳಿಕ ಸಂತ್ರಸ್ತೆ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಆಗಸ್ಟ್ 3ರಂದು ಆರೋಪಿಯನ್ನ ಬಂಧಿಸಲಾಗಿತ್ತು.



































