ಸಾಮೂಹಿಕ ಅ*ಚಾರ ಆರೋಪ: ಶಾಸಕ ಮುನಿರತ್ನ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

0

 

ಸಾಮೂಹಿಕ ಅ*ಚಾರ ನಡೆಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ವಿಚಾರಣಾಧೀನ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿರುವುದನ್ನು ಪರಿಗಣಿಸಿರುವ ಹೈಕೋರ್ಟ್‌, ಎಸ್‌ಐಟಿಯು 42ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿರುವ ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಒಪ್ಪಿಕೊಂಡಿರುವುದರಿಂದ ಅರ್ಜಿಯು ವಿಚಾರಣಾ ಮಾನ್ಯತೆ ಕಳೆದುಕೊಂಡಿದ್ದು, ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.

ಬೆಂಗಳೂರಿನ ಯಶವಂತಪುರದ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಮುನಿರತ್ನ, ವಸಂತ ಕುಮಾರ್‌, ಚನ್ನಕೇಶವ್‌ ಮತ್ತು ಕಮಲ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳು, ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಸಿಒಡಿ-ಎಸ್‌ಐಟಿ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕರು, ಎಸ್‌ಐಟಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣದ ಸಂಬಂಧ ಬಿ ರಿಪೋರ್ಟ್‌ ಸಲ್ಲಿಸಿದ್ದು, ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.

ಆದರೆ, ಅರ್ಜಿದಾರರ ಪರ ವಕೀಲರು, ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ವಿಶೇಷ ಸರ್ಕಾರಿ ಅಭಿಯೋಜಕರ ಹೇಳಿಕೆಯ ಅನ್ವಯ ಅರ್ಜಿ ವಜಾಗೊಳಿಸಬಹುದು ಎಂಬ ಮಾತನ್ನು ಪುರಸ್ಕರಿಸಿದ ನ್ಯಾಯಾಲಯ ಅರ್ಜಿಗಳನ್ನು ವಜಾಗೊಳಿಸಿತು.

   

LEAVE A REPLY

Please enter your comment!
Please enter your name here