
ಪೋಕ್ಸೋ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ನ್ಯಾಯಾಲಯದ ವಿಚಾರಣೆಗೆ ಅರ್ಹವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣವನ್ನುವಿಚಾರಣೆಗೆ ಪರಿಗಣಿಸಿದ ಅಧೀನ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆಯ ವೇಳೆ ಯಡಿಯೂರಪ್ಪ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು, ಪ್ರಕರಣದ ಕಡತ ನೋಡಿದ್ದು, ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣ ಎನ್ನುವುದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಪೋಕ್ಸೋ ಪ್ರಕರಣದಲ್ಲಿ ಕೆಲವೊಮ್ಮ ಸಂತ್ರಸ್ತೆಯ ಹೇಳಿಕೆಯೊಂದೇ ಆರೋಪಿಗೆ ಶಿಕ್ಷೆ ವಿಧಿಸಲು ಸಾಕಾಗುತ್ತದೆ. ಸಂತ್ರಸ್ತೆಯ ತಾಯಿ ಏಕೆ ಯಡಿಯೂರಪ್ಪ ಮನೆಗೆ ಬಂದಿದ್ದರು? ಯಡಿಯೂರಪ್ಪ ಸಂತ್ರಸ್ತೆಗೆ ನೀಡಲು ಹಣ ನೀಡಲು ಮುಂದಾಗಿದ್ದೇಕೆ? ಎಂಬೆಲ್ಲಾ ಅಂಶಗಳು ವಿಚಾರಣೆಗೆ ಅರ್ಹವಾಗಿದೆ ಎಂದು ತಿಳಿಸಿದರು.
ಅಲ್ಲದೆ, ಪ್ರಕರಣ ರದ್ದತಿ ಆಗಿಯೇ ಆಗುತ್ತದೆ ಎಂಬ ಸ್ಪಷ್ಟತೆ ನಿಮಗೆ ಇದ್ದರೆ, ನಾವು ನಿಮ್ಮ ವಾದ ಆಲಿಸುತ್ತೇವೆ. ಈ ಪ್ರಕರಣಕ್ಕೆ ಕನಿಷ್ಠ ಐದು ದಿನಗಳ ಮಧ್ಯಾಹ್ನದ ಸಂಪೂರ್ಣ ಕಲಾಪ ವಿನಿಯೋಗವಾಗುತ್ತದೆ. ಇಲ್ಲಿ ಆರೋಪವೇ ಇಲ್ಲ ಎಂಬ ಪ್ರಕರಣ ಇದಾಗಿಲ್ಲ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ವಿರೋಧ ಪಕ್ಷದಲ್ಲಿದ್ದಾರೆ. ಅನಗತ್ಯವಾಗಿ ಕಿರುಕುಳ ನೀಡುತ್ತಾರೆ ಎಂಬ ಆತಂಕ ನಿಮಗಿದ್ದರೆ ಆ ಕಿರುಕುಳ ತಪ್ಪಿಸಿ, ನ್ಯಾಯಯುತ ವಿಚಾರಣೆಗೆ ಸಂಬಂಧಿಸಿದಂತೆ ರಕ್ಷಣಾತ್ಮಕ ಆದೇಶ ಮಾಡಬಹುದು.ಈ ಬಗ್ಗೆ ನಿಮ್ಮ ನಿಲುವು ಹೇಳಬಹುದು ಎಂದು ಯಡಿಯೂರಪ್ಪ ಅವರ ಪರ ವಕೀಲರಿಗೆ ಸೂಚಿಸಿದರು. ಇದಕ್ಕೆ ಯಡಿಯೂರಪ್ಪ ಪರ ವಕೀಲರು ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬುದು ಅರ್ಥವಾಗುತ್ತದೆ. ಈ ಕುರಿತು ಚರ್ಚಿಸಿ ತಿಳಿಸಲಾಗುವುದು ಎಂದು ನುಡಿದರು. ಈ ಹೇಳಿಕೆ ಪರಿಗಣಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.












