
ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದ್ದು, ಆಕರ್ಷಣೆಯನ್ನು ಹೆಚ್ಚಿಸಲು 200 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತೀಯ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟದ 55ನೇ ಸಮ್ಮೇಳನ ‘ಪ್ಯೂಚರ್ ಸ್ಟೇಪ್-2047’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ 320 ಕಿ.ಮೀ. ಕರಾವಳಿಯುದ್ದಕ್ಕೂ ಪ್ರಶಾಂತ ಕರಾವಳಿ ಪ್ರವಾಸೋದ್ಯಮ, ಪಶ್ಚಿಮ ಘಟ್ಟಗಳಲ್ಲಿನ ರೋಮಾಂಚಕ ಪಯಣ, ಬೆಂಗಳೂರಿನ ಐಷಾರಾಮಿ ಆತಿಥ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ನಮ್ಮ ಪ್ರವಾಸಿ ಮಿತ್ರ ಕಾರ್ಯಕ್ರಮದ ಮೂಲಕ 1 ಸಾವಿರ ಪ್ರವಾಸಿ ಸುಗಮಕಾರರಿಗೆ ತರಬೇತಿ ನೀಡುತ್ತಿದ್ದೇವೆ. 2026ರ ವೇಳೆಗೆ ಆತಿಥ್ಯ ವಲಯಕ್ಕೆ 50 ಸಾವಿರ ಯುವಕರನ್ನು ಕೌಶಲಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. 54 ಹೊಸ ಹೊಟೇಲ್‌ಗಳು ಮತ್ತು ರೆಸಾರ್ಟ್‌ಗಳಿಗೆ ಸಬ್ಸಿಡಿಗಳನ್ನು ಅನುಮೋದಿಸಿದ್ದೇವೆ. ರಸ್ತೆಬದಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಕ್ರೂಸ್ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅನ್ವೇಷಿಸಲಾಗುತ್ತಿದೆ ಎಂದರು.
ದೇಶದಲ್ಲೇ ನಂ.1 ಪ್ರವಾಸೋದ್ಯಮ ತಾಣ ಮಾಡುವ ಗುರಿ
ಕಳೆದ ಫೆಬ್ರವರಿಯಲ್ಲಿ 2024-29ರ ನಮ್ಮ ಹೊಸ ಕರ್ನಾಟಕ ಪ್ರವಾಸೋ ದ್ಯಮ ನೀತಿ ಅನಾವರಣಗೊಳಿಸಿದ್ದೇವೆ. 2029ರ ವೇಳೆಗೆ 1.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ 8 ಸಾವಿರ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ಗುರಿ ಹೊಂದಿದ್ದೇವೆ. ಕರ್ನಾಟಕದಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆ 2024ರಲ್ಲಿ ಸ್ಥಿರವಾಗಿ 30.46 ಕೋಟಿಗೆ ಏರಿಕೆಯಾಗಿದೆ. ಆತಿಥ್ಯ ವಲಯ ನಮ್ಮ ಆರ್ಥಿಕತೆಗೆ ಸುಮಾರು 25 ಸಾವಿರ ಕೋಟಿ ರೂ.ಗಳ ಕೊಡುಗೆ ನೀಡುತ್ತದೆ. ಕಳೆದ ವರ್ಷವೊಂದರಲ್ಲೇ 500ಕ್ಕೂ ಹೆಚ್ಚು ಹೊಸ ‘ಹೋಂಸ್ಟೇಗಳು ಮತ್ತು 50 ಮಧ್ಯಮ ಪ್ರಮಾಣದ ಹೊಟೇಲ್‌ಗಳನ್ನು ಅನುಮೋದಿಸಿದ್ದೇವೆ ಎಂದು ಹೇಳಿದರು.
ಹೂಡಿಕೆಗೆ ಕರ್ನಾಟಕ ಉತ್ತಮ ತಾಣ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ನೀತಿ ತರಲು ಮುಂದಾಗಿದ್ದು, ಇದಕ್ಕೆ ಸೂಕ್ತ ರೂಪುರೇಷೆ ಸಿದ್ಧಪಡಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು. ಕರ್ನಾಟಕವು ಹೂಡಿಕೆಗೆ ಉತ್ತಮ ತಾಣವಾಗಿದೆ. ಪ್ರವಾಸೋದ್ಯಮಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಹೊಟೇಲ್ ನಿರ್ಮಾಣಕ್ಕೂ ಹೆಚ್ಚಿನ ಅನುಕೂಲವಿದೆ ಎಂದರು.












