ನಲ್ಲೂರು ಶಾಲೆಯಲ್ಲಿ ಬಜಗೋಳಿ ಕಾಲೇಜಿನ ಎನ್ ಎಸ್ ಎಸ್ ಶಿಬಿರ

0

 

ಶಿಬಿರದಿಂದ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಾಸ ಸಾಧ್ಯ ಗಣೇಶ್ ಬರ್ಲಾಯ ಅಭಿಮತ

” ‘ಶಿಕ್ಷಣದೊಂದಿಗೆ ಸಮಾಜ ಸೇವೆ; ಸಮಾಜ ಸೇವೆಯೊಂದಿಗೆ ಶಿಕ್ಷಣ’ ಇದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು. ಈ ಕನಸನ್ನು ನನಸು ಮಾಡಲು ಗಾಂಧೀಜಿಯವರ ಶತಮಾನೋತ್ಸವ ವರ್ಷದಲ್ಲಿ ಆರಂಭವಾದ ಯೋಜನೆಯೇ ರಾಷ್ಟ್ರೀಯ ಸೇವಾ ಯೋಜನೆ. ಇಂತಹ ಯೋಜನಾ ಘಟಕದ ಪರಿಪೂರ್ಣ ಉದ್ದೇಶ ಈಡೇರುವುದೇ ವಾರ್ಷಿಕ ವಿಶೇಷ ಶಿಬಿರದಲ್ಲಿ. ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸ, ಹೊಂದಾಣಿಕೆಯ ಜೀವನ, ಸಮಯ ಪ್ರಜ್ಞೆ, ಪರಸ್ಪರ ಸಹಕಾರ, ಸಂವಹನ ಕಲೆ, ಶ್ರಮಜೀವನದ ಮಹತ್ವದಂತಹ ಸತ್ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ. ಆದ್ದರಿಂದ ಶಿಬಿರಾರ್ಥಿಗಳು ಈ ಶಿಬಿರದ ಮಹತ್ವವನ್ನು ಅರಿತು ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು” ಎಂದು ನಿವೃತ್ತ ಪ್ರಾಂಶುಪಾಲರಾದ ಶ್ರೀ ಗಣೇಶ್ ಬರ್ಲಾಯರು ಹೇಳಿದರು.

ಅವರು ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್ ಅವರು ವಹಿಸಿ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನದ ಮಹತ್ವವನ್ನು ತಿಳಿಸಿದರು.

ವಿಶೇಷ ಸಾಧನೆ ಮಾಡಿದ ಪೂರ್ವ ಸ್ವಯಂಸೇವಕರಾದ ಗುರುಪ್ರಸಾದ್, ನವನೀತ್, ಸುಮಂತ್ ಹಾಗು ಸುರೇಂದ್ರ, ಕೃಷ್ಣಕುಮಾರ್ ಎನ್. ಇವರನ್ನು ಎನ್.ಎಸ್.ಎಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ನಲ್ಲೂರು ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ವಸಂತ ಪೂಜಾರಿ, ಉದ್ಯಮಿ ದಿವಾಕರ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕರಾದ ನಾಗೇಶ್, ಹೊಸ್ಮಾರು ವಲಯ ಸಂಪನ್ಮೂಲ ವ್ಯಕ್ತಿ ಕೃಷ್ಣಕುಮಾರ್ ಎನ್. ಇ ಉಪಸ್ಥಿತರಿದ್ದರು.

ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಇವರು ಸಮ್ಮಾನಿತರನ್ನು ಪರಿಚಯಿಸಿದರೆ, ಶಿಬಿರದ ನಿರ್ದೇಶಕರಾದ ಪ್ರಾಂಶುಪಾಲ, ಲಕ್ಷ್ಮೀನಾರಾಯಣ ಕೆ.ಪಿ ಅಭ್ಯಾಗತರನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ವೀರೇಂದ್ರ ವಿ ಪಿ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರೆ, ಉಪನ್ಯಾಸಕ ಅಂಬರೀಷ ಭಾರದ್ವಾಜ್ ಇವರು ಕಾರ್ಯಕ್ರಮ ನಿರೂಪಿಸಿದರು.

   

LEAVE A REPLY

Please enter your comment!
Please enter your name here