ಸಾಮಾಜಿಕ ಸೌಹಾರ್ದತೆ ಕದಡುವ ಜಾತಿಗಣತಿ. ಜನರೇ ಬಹಿಷ್ಕರಿಸುವ ಮುನ್ನ, ಅವೈಜ್ಞಾನಿಕ ಜಾತಿಗಣತಿಯನ್ನು ತಕ್ಷಣವೇ ನಿಲ್ಲಿಸಿ- ಕಾರ್ಕಳ ಬಿಜೆಪಿ ಆಗ್ರಹ

0

 

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಜಾತಿ ಜನಗಣತಿ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಜನಗಣತಿ ಸಂಪೂರ್ಣವಾಗಿ ರಾಜಕೀಯ ಉದ್ದೇಶಗಳನ್ನು ಪೂರೈಸುವ ಸಲುವಾಗಿ ಸರ್ಕಾರದ ಮೂಲಕ ನಡೆಸಲ್ಪಡುತ್ತಿದೆ. ಈ ಜನಗಣತಿ ವೈಜ್ಞಾನಿಕವಾಗಿಲ್ಲ, ಸಮಾಜದ ಹಿತಾಸಕ್ತಿಯ ದೃಷ್ಟಿಯಿಂದಲೂ ಇದು ಸರಿಯಿಲ್ಲ; ಈ ಸರ್ಕಾರಕ್ಕೆ ಜನರ ಹಿತಾಸಕ್ತಿ ಮುಖ್ಯವಾಗಿದ್ದರೆ, ಸರಿಯಾದ ಸಮಯದಲ್ಲಿ, ಸೂಕ್ತ ಸಿದ್ಧತೆಗಳೊಂದಿಗೆ ಜನಗಣತಿ ನಡೆಸಬಹುದಾಗಿತ್ತು. ಆದರೆ, ತರಾತುರಿಯಲ್ಲಿ ಹಾಗೂ ಹಬ್ಬದ ಕಾಲದಲ್ಲಿ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ಸರ್ಕಾರದ ನಿಜಸ್ವಭಾವವನ್ನು ಬಹಿರಂಗಪಡಿಸುತ್ತದೆ.

ನವರಾತ್ರಿ ಹಬ್ಬದ ಪವಿತ್ರ ಕಾಲದಲ್ಲಿ ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ಬಲವಂತವಾಗಿ ತೊಡಗಿಸುವ ಮೂಲಕ, ಅವರ ಧಾರ್ಮಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಶಿಕ್ಷಕರನ್ನು ಹಬ್ಬದಿಂದ ದೂರವಿಟ್ಟು ಆಡಳಿತಾತ್ಮಕ ಒತ್ತಡಕ್ಕೆ ಒಳಪಡಿಸಿರುವುದು ಹಿಂದು ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ.

ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರವು ಉದ್ದೇಶಪೂರ್ವಕವಾಗಿ ಈ ಪವಿತ್ರ ಹಬ್ಬದ ಸಮಯವನ್ನು ಗುರಿಯಾಗಿಸಿಕೊಂಡು, ಸಮಾಜದ ಶಾಂತಿಕದಡಲು ಪ್ರಯತ್ನಿಸುತ್ತಿದೆ. ಜನರನ್ನು ಜಾತಿ ಆಧಾರದ ಮೇಲೆ ವಿಭಜಿಸಿ ಸಮುದಾಯಗಳ ನಡುವೆ ಭಿನ್ನತೆ ಹೆಚ್ಚಿಸಲು ಹಾಗೂ ಮತ ಬ್ಯಾಂಕ್‌ ರಾಜಕೀಯಕ್ಕಾಗಿ ಜನಗಣತಿ ಎಂಬ ಸೂಕ್ಷ್ಮ ವಿಚಾರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಅಷ್ಟೇ ಅಲ್ಲದೇ,

1. ಈಗ ನಡೆಸುತ್ತಿರುವ ಜಾತಿಗಣತಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ, ಪಾರದರ್ಶಕತೆಯೂ ಇಲ್ಲ.
2. ಶಿಕ್ಷಕರು ಈ ರೀತಿಯ ಸೂಕ್ಷ್ಮ ಸಮೀಕ್ಷೆಗೆ ತಯಾರಾಗಿಲ್ಲ, ಅವರಿಗೆ ಅಗತ್ಯವಾದ ತರಬೇತಿಯನ್ನೂ ನೀಡಲಾಗಿಲ್ಲ.
3. ಕ್ಷೇತ್ರದ ಭೌಗೋಳಿಕ ಮಾಹಿತಿಯೆ ಇಲ್ಲದ ಕಡೆ ಶಿಕ್ಷಕರನ್ನು ಜಾತಿಗಣತಿಗೆ ನಿಯೋಜಿಸಲಾಗಿದೆ. ಇದರಿಂದ ಸಾಕಷ್ಟು ಕಷ್ಟ ಪಡುವಂತಾಗಿದೆ ಮಾತ್ರವಲ್ಲದೆ ಮನೆಗಳು ಗಣತಿಗೆ ಸಿಗದೇ ಇರುವ ಸಾಧ್ಯತೆಗಳಿವೆ.
4. ನೆಟ್ವರ್ಕ್ ಸಮಸ್ಯೆ ಬಹಳಷ್ಟು ಕಡೆಗಳಲ್ಲಿದೆ, ಅಂತಹ ಕ್ಷೇತ್ರಗಳಲ್ಲಿ ಜಾತಿಗಣತಿ ಡೇಟಾ ಎಂಟ್ರಿ ಅಸಾಧ್ಯ. ಪರ್ಯಾಯ ಮಾರ್ಗವನ್ನು ಸರ್ಕಾರ ಸೂಚಿಸಿದೆಯೇ? ಹಾಗಾಗಿ ಸಂಗ್ರಹಿಸಲಾಗುತ್ತಿರುವ ಮಾಹಿತಿಯ ನಿಖರತೆಯ ಬಗ್ಗೆ ಗ್ಯಾರಂಟಿ ಇಲ್ಲ.
6. ಈ ಹಬ್ಬದ ಸಮಯದಲ್ಲಿ, ಹಬ್ಬದ ಒತ್ತಡದಲ್ಲಿ ಸಂಗ್ರಹವಾಗುತ್ತಿರುವ ಮಾಹಿತಿಯ ನಿಖರತೆ ಅನುಮಾನಾಸ್ಪದವಾಗಿದೆ.

ಒಟ್ಟಾರೆಯಾಗಿ ಈ ಜಾತಿಗಣತಿ ಸಮಾಜದಲ್ಲಿ ಜಾತ್ಯಾತೀತ ಭಿನ್ನತೆಗಳನ್ನು ಹೆಚ್ಚಿಸಿ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯುಂಟುಮಾಡಲಿದೆ.

ಆದ್ದರಿಂದ, ಸಮಾಜದ ಹಿತದೃಷ್ಟಿಯಿಂದ ಈ ಅವೈಜ್ಞಾನಿಕ, ಸೂಕ್ತ ಸಿದ್ಧತೆಗಳಿಲ್ಲದೆ, ಮತ ಬ್ಯಾಂಕ್ ರಾಜಕೀಯಕ್ಕಾಗಿ ನಡೆಸಲಾಗುತ್ತಿರುವ ಜಾತಿ ಜನಗಣತಿಯನ್ನು ಜನರೇ ಬಹಿಷ್ಕರಿಸುವ ಮುನ್ನ, ಜಾತಿಗಣತಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಕಾರ್ಕಳ ಬಿಜೆಪಿ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

   

LEAVE A REPLY

Please enter your comment!
Please enter your name here