ಯುವ ಸಂಘಟಕ ನವೀನ್ ಎಮ್. ಪೂಜಾರಿ ಪಡು ಇನ್ನ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

0

 

ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ನ. 1ರ ಶನಿವಾರದಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಮಾಜ ಸೇವಕ ಕಲಾಪೋಷಕ ಸರಳ ಸಜ್ಜನ ಸಹೃದಯವಂತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ನವೀನ್ ಪಡುಇನ್ನರವರ ಪರಿಚಯ ಬದುಕು ಒಂದು ರೀತಿಯಲ್ಲಿ ಅಪರಿಚಿತವಾದುದು, ಎಷ್ಟೇ ತಿಳಿದಿದ್ದರೂ ನಾಳೆಗೆ ಎಲ್ಲವೂ ಅದಲು ಬದಲು. ಬದುಕಿನ ಕನಸಿನ ಮೂಟೆ ಕಟ್ಟುವುದು ಬಹಳ ಸುಲಭ, ಆದರೆ ಅದನ್ನು ಹೊರುವುದು ಕಷ್ಟ ಎಂಬ ವಾಕ್ಯವನ್ನು ಸವಾಲುಗಳಾಗಿ ತೆಗೆದುಕೊಂಡು, ಬದುಕಿನ ಮಜಲುಗಳನ್ನು ದಾಟುವಾಗ ಅದರ ನಡುವೆ ಸಿಗುವ ಸವಾಲುಗಳಿಗೆ ಎದೆಯೊಡ್ಡಿ ನಿಂತು ಕಷ್ಟಗಳನ್ನು ಸ್ವೀಕರಿಸಿ ಅದಕ್ಕೆ ಸಾಧನೆಯ ಉತ್ತರವನ್ನು ನೀಡುವವನೇ ನಿಜವಾದ ಸಾಧಕ. ಅಂತಹ ಸಾಧಕರ ಸಾಲಿನಲ್ಲಿ ಮೊದಲಲ್ಲಿ ಮಿಂಚುತ್ತಿರುವವರು ನಮ್ಮ ಯುವ ಸಂಘಟಕ ನವೀನ್ ಪಡುಇನ್ನ.

ಸಾಧನೆ ಎನ್ನುವ ಸರಳವಾದ ಪದದಲ್ಲಿ ಸಾವಿರ ಕಷ್ಟಗಳಿರುತ್ತದೆ. ಕಷ್ಟದಲ್ಲಿ ನಿಷ್ಠೆ ಇದ್ದರೆ, ಮಾತಿನಲ್ಲಿ ಪ್ರತಿಷ್ಠೆ ಇದ್ದರೆ ಸೃಷ್ಟಿ ಕೂಡ ಸುಮ್ಮನಿರುವುದು. ನಿಮ್ಮ ಸಾಧನೆ ನೋಡುತ ಎನ್ನುವ ಮಾತಿನಂತೆ ಅವಮಾನದ ಮಾತುಗಳಿಗೆ ಕಿವಿಕೊಡದೆ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಇವರು. ದೈವ ದೇವರುಗಳಿಗೆ ಹೆಸರುವಾಸಿಯಾದ, ಸರ್ವಧರ್ಮವನ್ನು ಗೌರವಿಸುವ ಬೆರ್ಮೆರೆ ಸೃಷ್ಟಿಯ ತುಳುನಾಡಿನ ಪಡು ಇನ್ನ ಗ್ರಾಮದಲ್ಲಿ ಮೋಹನದಾಸ್ ಮತ್ತು ಸುಜಾತ ದಂಪತಿಯ ಸುಪುತ್ರರಾಗಿ ದಿನಾಂಕ 11.08.1989 ರಲ್ಲಿ ನವೀನ್ ಪಡು ಇನ್ನಾರವರು ಜನಿಸಿದರು. ಇವರು ಹೃದಯಮಾತೆ ಕಮಲಜ್ಜಿಯ ಮಮತೆಯಲ್ಲಿ ಬಾಲ್ಯವನ್ನು ಕಳೆದರು. ಅಣ್ಣನಾದ ಕಿರಣ್ ಕುಮಾರ್, ತಂಗಿ ಪೂರ್ಣಿಮಾಳ ಸದಾ ಬೆಂಬಲದೊಂದಿಗೆ ಬೆಳೆದವರು. ಅತ್ತೆಯರಾದ ರೂಪಾ ಮತ್ತು ದಿವ್ಯಾರವರ ಪ್ರೀತಿಯಲ್ಲಿ ಬೆಳೆದರು. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆ ಇನ್ನಾ, ಪ್ರೌಢಶಿಕ್ಷಣವನ್ನು ಯಂ.ವಿ. ಶಾಸ್ತ್ರೀ ಹೈಸ್ಕೂಲ್ ಇನ್ನಾದಲ್ಲಿ ಪಡೆದು ಮುಂದೆ 10ನೇ ತರಗತಿಯನ್ನು ಮುಗಿಸಿ ಜೀವನದ ಬಂಡಿಯನ್ನು ಸಾಗಿಸಲು ಮುಂಬಯಿಯತ್ತ ಪಯಣ ಬೆಳೆಸಿದರು. ಮುಂಬಯಿಯಲ್ಲಿ ದಿನದ ಹೊತ್ತು ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿ ರಾತ್ರಿ ಕನ್ನಡ ಭವನ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ನವೀನ್ ಇನ್ನಾರವರು ಮುಂದುವರಿಸಿದರು.

ಸಾಧನೆ ಸಾಧಕನ ಸೊತ್ತೆ ಹೊರತು ಸೋಮರಿಯದಲ್ಲ ಎಂಬ ಮಾತಿಗೆ ಸ್ಪೂರ್ತಿಯಾದ ಇವರು, ಹಗಲಲ್ಲಿ ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ಕನ್ನಡ ಭವನ ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತ ಹೊಸತನದ ಬದುಕಿಗೆ ಮುನ್ನುಡಿಯಾಗಿರುವರು. ಇವರು ಮಾಡುವ ಕೆಲಸದಲ್ಲಿ ದೇವರನ್ನು ಕಾಣುತ್ತ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತ ಅನ್ನಪೂರ್ಣ ಕ್ಯಾಟರರ್ಸ್ ಇದರ ಮಾಲಕರಾದ ಆನಂದ್ ಶ್ರೀಯಾನ್, ಸುರೇಶ್ ಶ್ರೀಯಾನ್ ಇವರ ಪ್ರೀತಿ ವಿಶ್ವಾಸ ಗಳಿಸುತ್ತ ಮುಂದೆ ಸಾಗಿದರು. ಮಾವಂದಿರಾದ ರಮೇಶ್ ಕೋಟ್ಯಾನ್, ಸುಧಾಕರ ಪೂಜಾರಿ ಮತ್ತು ಹರೀಶ್ ಕೋಟ್ಯಾನ್, ಚಿಕ್ಕಮ್ಮ ಸುನೀತಾ ಪೂಜಾರಿ ಇವರ ಸೂಕ್ತ ಸಲಹೆಗಳನ್ನು ತೆಗೆದುಕೊಂಡು ಮಾಯಾನಗರಿ ಮುಂಬೈನಲ್ಲಿ ಅದ್ವಿಕ್ ಪುಡ್ ಎಂಡ್ ಹಾಸ್ಪಿಟಲಿಟಿ ಸರ್ವಿಸ್, ಅದ್ವಿಕ್ ಫ್ರುಟ್ಸ್ & ವೆಜಿಟೇಬಲ್ ಉದ್ಯಮ ಸಂಸ್ಥೆಯನ್ನು ಆರಂಭಿಸಿ ಯಶಸ್ವಿ ಯುವ ಉದ್ಯಮಿ ಎಂದೆನಿಸಿಕೊಂಡರು.

ಇವರು ನಡೆದ ದಾರಿಯನ್ನು ಗಮನಿಸುವಾಗ ಅದೃಷ್ಟ ಎಂದರೆ ಅವಕಾಶ ಪಡೆಯುವವನು ಬುದ್ದಿವಂತ ಎಂದರೆ ಅವಕಾಶ ಸೃಷ್ಟಿಸುವವನು ಎಂಬ ವಿವೇಕಾನಂದರ ನುಡಿಯೊಂದು ನೆನಪಾಗುತ್ತದೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಾಯಕತ್ವದ ಗುಣ ಮತ್ತು ಸಂಘಟನ ಚತುರತೆಯನ್ನು ಮೈಗೂಡಿಸಿಕೊಂಡ ಇವರು ಕ್ರೀಡಾ, ಸಾಮಾಜಿಕ ಹಾಗೂ ಕಲಾ ಕ್ಷೇತ್ರಗಳಲ್ಲಿನ ಸಾಧಕರನ್ನು ಒಗ್ಗೂಡಿಸಿಕೊಂಡು ಸಮರ್ಥ ಸಂಘಟಕರಾಗಿ ಬೆಳೆದವರು ಎನ್ನಲು ಖುಷಿಯಾಗುತ್ತದೆ. ಕಳೆದ ಇಪ್ಪತ್ತು ವರ್ಷಗಳಿಂದ ಉದಯೊನ್ಮುಖ ಪ್ರತಿಭೆಗಳಿಗೆ ವೇದಿಕೆಯನ್ನು ನಿರ್ಮಿಸಿಕೊಡುವ ಜೊತೆಗೆ ಸಮಾಜದ ಉತ್ತಮ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅವರ ಸಾಧನೆಯ ಗೌರವವನ್ನು ಹೆಚ್ಚಿಸಿದವರು ನವೀನ್ ಪಡು ಇನ್ನಾರವರು.
ಒಬ್ಬ ನಾಯಕ ಸಮರ್ಥನಾಗಿ ಬೆಳೆಯಬೇಕಾದರೆ, ಸಮಾಜದ ಉತ್ತಮ ಕಾರ್ಯಗಳು ನಡೆಯಬೇಕಾದರೆ ಒಂದು ಸಂಸ್ಥೆಯ ಅಗತ್ಯತೆ ಇದೆ ಎಂಬುದನ್ನು ಮನಗೊಂಡ ಇವರು ಅವರ ಪ್ರೀತಿಯ ಅಜ್ಜಿ ಕಮಲ ಪೂಜಾರ್ತಿಯವರ ಸ್ಮರಣೀಯವಾಗಿ ಕಮಲ ಕಲಾ ವೇದಿಕೆ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ರೂವಾರಿಯಾಗಿ ಆ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ಮುಂಬೈ ನಗರದಲ್ಲಿ ಸೈ ಎನಿಸಿಕೊಂಡಿರುವರು. ಅದರ ಮೂಲಕ ಸಮಾಜಪರ ಕಾರ್ಯಗಳನ್ನು ನೆರವೇರಿಸುತ್ತಾ ಸುಮಾರು ನೂರಕ್ಕೂ ಹೆಚ್ಚು ಕಲಾವಿದರನ್ನು ಸತ್ಕರಿಸಿ ಗೌರವಿಸಿದ ಕೀರ್ತಿ ಇವರಿಗಿದೆ. ಕೊರೋನ ಸಮಯದಲ್ಲಿ ಅಂತಾರಾಷ್ಟ್ರೀಯ ವಾಸ್ತು ತಜ್ಞರಾದ ಅಶೋಕ್ ಪೊರೋಹಿತ್ ರವರ ಆಶೀರ್ವಾದ, ಸಹಕಾರದ ಜೊತೆಗೆ ಇವರ ಗೆಳೆಯರ ಸಹಕಾರದಿಂದ ಕಮಲಾ ಕಲಾ ವೇದಿಕೆ ಸಂಸ್ಥೆಯ ಮೂಲಕ 400 ಮನೆಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಬಡವರ ಕಣ್ಣೀರು ಒರೆಸಿದವರು ನವೀನ್ ಪಡು ಇನ್ನಾ. ಸುಮಾರು ಮುನ್ನೂರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿರುವರು.

ಆರೋಗ್ಯ ಶಿಕ್ಷಣ ಮತ್ತು ಕಲಾ ಸೇವೆಗೆ ತನ್ನ ಕೈಯಿಂದ ಆಗುವಷ್ಟು ಮತ್ತು ಇತರರ ಜೊತೆಗೂಡಿ ಮಾಡುವ ಸಹಾಯ ಅನನ್ಯ. ಶಿವಾಯ ಫೌಂಡೇಶನ್ ಇದರ ಗೌರವ ಸಲಹೆಗಾರರಾಗಿ, ಶ್ರೀ ಕೃಷ್ಣವಿಠ್ಠಲ ಪ್ರತಿಷ್ಠಾನ ಮುಂಬಯಿ ಇದರ ಜೊತೆ ಕಾರ್ಯದರ್ಶಿಯಾಗಿ, ರಂಗ ಮಿಲನ ಮುಂಬಯಿ ಇದರ ಉಪಾಧ್ಯಕ್ಷರಾಗಿ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಮುಂಬಯಿ ವ್ಯವಸ್ಥಾಪಕರಾಗಿ, ನಮ್ಮ ಕಲಾವಿದರು ಬೆದ್ರ ತಂಡ ಮುಂಬಯಿ ಇದರ ಸಂಚಾಲಕರಾಗಿ, ಶ್ರೀ ನಾರಾಯಣ ಗುರು ಭಕ್ತ ವೃಂದ ಇನ್ನ ಇದರ ಮುಂಬಯಿ ಸಮಿತಿಯ ಕಾರ್ಯದರ್ಶಿಯಾಗಿ, ಇನ್ನ ಹಿತವರ್ಧಕ ಸಂಘ ಮುಂಬಯಿ ಇದರ ಜೊತೆ ಕಾರ್ಯದರ್ಶಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೆ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಸಮಿತಿಯ ಚುನಾವಣೆಯಲ್ಲಿ ಭರ್ಜರಿ ವಿಜಯ ಪಡೆದು ಸಮಿತಿ ಸದಸ್ಯರಾಗಿ ಪುನರಾಯ್ಕೆಗೊಂಡು ಅದರ ಸಾಂಸ್ಕೃತಿಕ ಉಪಸಮಿತಿ ಕಾರ್ಯದರ್ಶಿಯಿಂದ ಕಾರ್ಯಾಧ್ಯಕ್ಷರಾಗಿ ಭಡ್ತಿ ಪಡೆದದ್ದು ಇವರದು ದೊಡ್ಡ ಸಾಧನೆ.

ಕಲಾ ಸೇವೆ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವ ಇವರು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದ ಹಿರಿಯರನ್ನು ಕಿರಿಯರನ್ನು ಗುರುತಿಸಿ ಮತ್ತು ಯಕ್ಷಗಾನ ನಾಟಕದ ಕಲಾವಿದರನ್ನು ಸರಿಸುಮಾರು 250 ಕ್ಕೂ ಹೆಚ್ಚು ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿದವರು ನವೀನ್ ಪಡು ಇನ್ನಾರವರು.
ಇವರು ಹೆಸರಿಗಾಗಿ ಕೆಲಸ ಮಾಡಿದವರು ಅಲ್ಲ ಆದರೆ ಇವರ ಕೆಲಸವನ್ನು ಕಂಡ ಸಮಾಜವೇ ಇವರನ್ನು ಗುರುತಿಸಿದೆ. ಕಾರಣ ಇವರ ಸಾಧನೆ ಅಂತದ್ದು. ಇವರ ಈ ಸಾಧನೆಗೆ 2018-19ನೇ ಸಾಲಿನ “ಆರ್ಯ ಭಟ” ಪ್ರಶಸ್ತಿ, ಇವರು ಕಲಿತ ಯಂ. ವಿ. ಶಾಸ್ತ್ರಿ ಶಾಲೆಯಲ್ಲಿ “ಯುವರತ್ನ ಪ್ರಶಸ್ತಿ”, ಮಾತ್ರವಲ್ಲದೆ ಚತುರ ಸಂಘಟಕ, ನಿಸ್ವಾರ್ಥ ಸಮಾಜ ಸೇವಕ, ಹಲವಾರು ಬಿರುದುಗಳ ಜೊತೆ ಸರಿಸುಮಾರು 30 ಕ್ಕಿಂತಲೂ ಹೆಚ್ಚು ಸನ್ಮಾನ ಪುರಸ್ಕಾರವನ್ನು ಇವರು ಪಡೆದು ಸಮಾಜದಲ್ಲಿ ಗುರುತಿಸಿಕೊಂಡು ಕಲಾ ರತ್ನ ಪ್ರಶಸ್ತಿ ಪಡೆದಿದ್ದಾರೆ.
ಇವರು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸುವ ದೊಡ್ಡ ಗುಣವನ್ನು ಹೊಂದಿದವರು ಅದಕ್ಕಾಗಿ ಯೆ ಯಂಗ್ ಫ್ರೆಂಡ್ಸ್ ಮತ್ತು ಕಮಲಾ ಕಲಾ ವೇದಿಕೆಯ ಮೂಲಕ ಮುಂಬೈಯಲ್ಲಿ ಹಲವಾರು ಕಲಾವಿದರಿಗೆ ಸಮಾಜ ಸೇವಾಕರಿಗೆ ಕಲಾ ಪೋಷಕರಿಗೆ ಸರಿಸುಮಾರು 400 ಕ್ಕೂ ಹೆಚ್ಚು ಜನರಿಗೆ ಸನ್ಮಾನ ಮಾಡಿದ ಕೀರ್ತಿ ಇವರದು.

ಅದರಲ್ಲಿ ಮುಖ್ಯವಾಗಿ ಕಣ್ಣು ಕಿವಿ ಬಾಯಿ ಬಾರದ ವಿನೋದ ಪೂಜಾರಿ, ದಿಟ್ಟ ಮಹಿಳೆ ವಾರಿಜಕ್ಕ, ವಿಶೇಷ ಚೇತನರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿ ಪ್ರಶಸ್ತಿ ಪಡೆದ ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಅವರನ್ನು ಮುಂಬೈಗೆ ಕರೆದು ಸನ್ಮಾನಿಸಿ ಅವರ ಸಾಧನೆಗೆ ಮುನ್ನುಡಿ ಬರೆದವರು ನವೀನ್ ಪಡು ಇನ್ನಾರವರು.

ಬಿಲ್ಲವರ ಎಸೋಸಿಯೇಶನ್ ಸಂಸ್ಥೆಯಲ್ಲಿ ಸಾಂಸ್ಕೃತಿಕ ಉಪಸಮಿತಿಯ ಕಾರ್ಯದರ್ಶಿ ಮತ್ತು ಕಾರ್ಯಾಧ್ಯಕ್ಷ ಆದ ನಂತರ ಯಶಸ್ವಿ ಯಕ್ಷಗಾನ ಪ್ರಯೋಗ, ಶನಿಪೂಜೆ, ತಾಳಮದ್ದಳೆ, ನಾಟಕ ಮುಂತಾದ ಹಲವು ಕಾರ್ಯಕ್ರಮಗಳನ್ನು ಮಾಡಿರುವರು. ಇವರ ಕಾರ್ಯಾವಧಿಯಲ್ಲಿ ಯಕ್ಷಗಾನ ಸಂಭ್ರಮ, ಯಕ್ಷಗಾನ ಅಷ್ಟಕ, ಯಕ್ಷಗಾನ ನವಮಿ, ಯಕ್ಷದಶಮಿ ಕಾರ್ಯಕ್ರಮ ಮಾಡಿರುವರು. ಇವರು ತನ್ನ ಉದ್ಯಮದ ಒಟ್ಟಿಗೆ ಎಷ್ಟೋ ಸಂಘಟನೆ ಮಾಡಲು ಎಷ್ಟೋ ಕಷ್ಟ ಆದರೂ ಇವರು ಛಲವನ್ನು ಬಿಡಲಿಲ್ಲ. ಇವರ ಸಮಾಜ ಸೇವೆಗೆ ಸದಾ ಬೆನ್ನೆಲುಬಾಗಿ ಕೈ ಜೋಡಿಸಿ ಸಹಕರಿಸುವ ಇವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಮತ್ತು ಪುತ್ರರಾದ ಅದ್ವಿಕ್ ಮತ್ತು ಆದ್ಯಾಂತ್ ರೊಂದಿಗೆ ಸುಖ ಸಂಸಾರ ಇವರದು. ಸಮಾಜದಲ್ಲಿ ಇನ್ನೂ ಹೆಚ್ಚು-ಹೆಚ್ಚು ಹೆಸರು ಬಿರುದು, ಪ್ರಶಸ್ತಿಗಳು ಇವರಿಗೆ ಒಲಿಯಲಿ.

ವೇದಿಕೆಯಲ್ಲಿ ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲ್ ಉದಯಕುಮಾರ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

   

LEAVE A REPLY

Please enter your comment!
Please enter your name here