
ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪದವಿಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ್ ಜಿಲ್ಲಾಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಪರ್ಧೆ ‘ಅನ್ವೇಷಣೆ 2025’ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಂಗಭೂಮಿ ಮತ್ತು ಚಲನಚಿತ್ರ ನಟ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು “ಇಂದಿನ ವಿದ್ಯಾರ್ಥಿಗಳಿಗೆ ಅನ್ವೇಷಣೆಯಂತಹ ಕಾರ್ಯಕ್ರಮಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರಕಟಿಸಲು ವೇದಿಕೆಯಾಗುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಕಳ ಜೆಸಿಐ ರೂರಲ್‌ನ ಅಧ್ಯಕ್ಷ ಅರುಣ್ ಮಾಂಜ ಮಾತನಾಡಿ “ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕಾರವು ಅತ್ಯಗತ್ಯವಾಗಿ ಬೇಕಾಗಿದೆ. ಈ ವಿದ್ಯಾಸಂಸ್ಥೆಯು ಸಂಸ್ಕಾರದ ಜೊತೆಗೆ ಉತ್ತಮ ಶಿಕ್ಷಣವನ್ನು ಕೂಡಾ ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕೂಡಾ ಕೌಶಲ್ಯಗಳು ಇದ್ದೇ ಇರುತ್ತದೆ. ಆ ಕೌಶಲ್ಯಗಳಿಗೆ ಹೊರ ಹೊಮ್ಮಲು ಅವಕಾಶ ನೀಡಿದಾಗ ಆ ವಿದ್ಯಾರ್ಥಿ ಉನ್ನತ ಹಂತಕ್ಕೆ ಏರಲು ಸಾಧ್ಯ” ಎಂದರು.
ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಶ್ರೀ ಲಕ್ಷ್ಮಿ ನಾರಾಯಣ ಕಾಮತ್ ಪ್ರಸ್ತಾವನೆಗೈದರು. ಶೈಲಿ ಹೆಗ್ಡೆ ಸ್ವಾಗತಿಸಿ, ದೀಪಕ್ ಕೆ. ಅವರು ನಿರೂಪಿಸಿ ವಂದಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಕಳ, ಕ್ಷೇತ್ರ ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯ್ಕ್, ಸಂಸ್ಥೆಯ ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸೈಂಟ್ ಜೋಸೆಫ್ ಪ್ರೌಢ ಶಾಲೆ, ಬೆಳ್ಮಣ್ ಇಲ್ಲಿಯ ಮುಖ್ಯ ಶಿಕ್ಷಕ ಡೋಮಿನಿಕ್ ಅಂದ್ರಾದೆ ಹಾಗೂ ಸಂಸ್ಥೆಯ ಪದವಿ ಪೂರ್ವ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಯಾನಂದರವರು ಅತಿಥಿಗಳಾಗಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಬಹುಮಾನ ವಿತರಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಲಕ್ಷ್ಮಿ ನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರುಢಾಲ್ಫ್ ಕಿಶೋರ್ ಲೋಬೋ, ಸಂಸ್ಥೆಯ ಆಡಳಿತಾಧಿಕಾರಿ ಕಿರಣ್ ಕ್ರಾಸ್ತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಸುಂದರ ಪುರಾಣಿಕ ಸರ್ಕಾರಿ ಪ್ರೌಢ ಶಾಲೆ, ಪೆರ್ವಾಜೆ ಹಾಗೂ ಪದವಿ ಪೂರ್ವ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಡಾ. ಎನ್.ಎಸ್.ಎ.ಎಮ್ ಪದವಿ ಪೂರ್ವ ಕಾಲೇಜು, ನಿಟ್ಟೆ ಪಡೆದುಕೊಂಡಿತು. ಉಪನ್ಯಾಸಕಿ ಪಾವನ ಹಾಗೂ ದೀಪಕ್ ಕೆ. ಇವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.













