
ಕಾರ್ಕಳ ಟೈಗರ್ಸ್ ಮತ್ತು ಹೊಸಸಂಜೆ ಬಳಗದ ಆಶ್ರಯದಲ್ಲಿ ಸಾಲ್ಮರ ಇಂದ್ರಪಸ್ಥ ಸಭಾಂಗಣದಲ್ಲಿ ಸಹಕಾರ ರತ್ನ ಕಡಾರಿ ರವೀಂದ್ರ ಪ್ರಭು ಅವರಿಗೆ ಸನ್ಮಾನ
ಸಮುದಾಯದ ಆಧಾರದಲ್ಲಿ ನಮ್ಮ ಸಂಸ್ಥೆ ಸ್ಥಾಪನೆಯಾಗಿದ್ದರೂ, ನಮ್ಮ ಚಟುವಟಿಕೆ ಇಡೀ ಸಮಾಜಕ್ಕೆ ಸೇರಿದ್ದಾಗಿದೆ. ಸ್ವಸಮಾಜದ ಜೊತೆ ಅನ್ಯಸಮಾಜದ ಪ್ರೀತಿ ವಿಶ್ವಾಸ ಗಳಿಸಲು ಯಶಸ್ವಿಯಾಗಿದ್ದೇವೆ.
ಸರ್ವ ಸಮುದಾಯಕ್ಕೆ ಸೇವೆ ಸಲ್ಲಬೇಕೆಂಬ ಆದರ್ಶದೊಂದಿಗೆ ವಿದ್ಯಾರ್ಥಿ ವೇತನ ವಿತರಣೆ, ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ , ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಪರಿಕರಗಳ ವಿತರಣೆ ದೊಡ್ದ ಮಟ್ಟದಲ್ಲಿ ಮಾಡಿದ್ದೇವೆ. ನಮ್ಮ ಸಂಸ್ಥೆಯ ಸೇವೆಯನ್ನು ಸಮಾಜಕ್ಕೆ ಅರ್ಪಿಸುವಲ್ಲಿ ಸಫಲರಾಗಿದ್ದೇವೆ ಎಂದು ರಾಜಾಪುರ ಸಾರಸ್ವತ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಲಿ. ಕಾರ್ಕಳ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ತಿಳಿಸಿದರು.
ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆಯ ರಾಜ್ಯ ಮಟ್ಟದ ಪ್ರತಿಷ್ಠಿತ “ಸಹಕಾರ ರತ್ನ ” ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಕಾರ್ಕಳ ಟೈಗರ್ಸ್ ಮತ್ತು ಹೊಸಸಂಜೆ ಬಳಗದ ಆಶ್ರಯದಲ್ಲಿ ಸಾಲ್ಮರ ಇಂದ್ರಪಸ್ಥ ಸಭಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನ್ಯಾಯವಾದಿ ರವೀಂದ್ರ ಮೊಯ್ಲಿ ಶುಭ ಹಾರೈಸಿ ಮಾತನಾಡಿ ‘ಸದಸ್ಯರ ಸರ್ವತೋಮುಖ ಏಳಿಗೆ ಬಯಸುವ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳಿಗೂ ಸ್ಪಂದಿಸುವ ಸಹಕಾರಿ ಸಂಸ್ಥೆ ಸರ್ವಮಾನ್ಯವಾಗಿ ಶಾಶ್ವತವಾಗಿ ಉಳಿದು ಬೆಳೆಯುತ್ತವೆ. ಒತ್ತಡಗಳನ್ನು ನಿಭಾಯಿಸಿ ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾರ್ಯದಲ್ಲಿ ಯಶಸ್ವಿಯಾದವರು ಅರ್ಹವಾಗಿಯೇ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ’ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಕಮಲಾಕ್ಷ ನಾಯಕ್ ಜಾರ್ಕಳ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಆಯುರ್ವೇದಿಕ್ ವೈದ್ಯ ಡಾ. ರವಿರಾಜ ಶೆಟ್ಟಿ, ಶಿವಾ ಜಾಹೀರಾತು ಸಂಸ್ಥೆಯ ಮಾಲಕ ಆರ್. ವರದರಾಯ ಪ್ರಭು, ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ್ ಕಾಮತ್, ಹೊಸ ಸಂಜೆ ಬಳಗ ಅಧ್ಯಕ್ಷ ಆರ್. ದೇವರಾಯ ಪ್ರಭು ಉಪಸ್ಥಿತರಿದ್ದರು.
ಶ್ರೀನಾಥ್ ಆಚಾರ್ಯ ನೆಕ್ಲಾಜೆ ಸ್ವಾಗತಿಸಿದರು. ಪ್ರೀತಿ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಮೂಲ್ಯ ಪೆಲತ್ತಿಜೆ ಕಾರ್ಯಕ್ರಮ ನಿರೂಪಿಸಿದರು. ರಮ್ಯಾ ಕೋಟ್ಯಾನ್ ವಂದಿಸಿದರು.












