
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಯನ್ನು ಬಾನೆತ್ತರಕ್ಕೆ ಹಾರಿಸಿದ, 2025 ರ ವಿಶ್ವ ಕಪ್ ಮಹಿಳಾ ಸೀನಿಯರ್ ಕಬಡ್ಡಿಯಲ್ಲಿ ಭಾರತ ತಂಡದ ಪರವಾಗಿ ಪ್ರತಿನಿಧಿಸಿದ ದಕ್ಷಿಣ ಭಾರತದ ಏಕೈಕ ಮಹಿಳೆ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಸುರತ್ಕಲ್ ಮೂಲದ ಧನಲಕ್ಷ್ಮಿ ಪೂಜಾರಿ ಸುರತ್ಕಲ್ ಇವರನ್ನು ಕಾರ್ಕಳ ಹಿಂ.ಜಾ.ವೇ. ಕಾರ್ಯಕರ್ತರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಬಾಂಗ್ಲಾದೇಶದ ಡಾಕಾದಲ್ಲಿ ನಡೆದ 2ನೇ ಮಹಿಳಾ ಕಬ್ಬಡಿ ವಿಶ್ವಕಪ್ ಪಂದ್ಯಾಟದಲ್ಲಿ ಚಾಂಪಿಯನ್ ಆದ ಭಾರತ ತಂಡವನ್ನು ಪ್ರತಿನಿಧಿಸಿ ವಿಜಯಗಳಿಸಿದ ಮೂಲತಃ ಕಾರ್ಕಳ ಮಿಯ್ಯಾರು ಗ್ರಾಮದವರಾದ ಇವರು, ಪ್ರಸ್ತುತ ಸುರತ್ಕಲ್ ಗುಡ್ಡೆಕೊಪ್ಪದ ನಿವಾಸಿಯಾಗಿದ್ದಾರೆ.
ಧನಲಕ್ಷ್ಮೀ ತನ್ನ ಆಲ್‌ರೌಂಡರ್ ಆಟದಿಂದ ತಂಡದಲ್ಲಿ ಬಹುಬೇಡಿಕೆಯ ಕ್ರೀಡಾಪಟುವಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯೊಂದಿಗೆ ಡಿಪ್ಲೋಮಾ ಕೋರ್ಸ್‌ಗಳನ್ನು ಸಂಪೂರ್ಣ ಕ್ರೀಡಾ ದತ್ತು ಶಿಕ್ಷಣ ಯೋಜನೆಯಲ್ಲಿ ಉಚಿತವಾಗಿ ಪಡೆದಿದ್ದಾರೆ.
ಇದುವರೆಗೆ 12 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಜೂನಿಯರ್, ಸೀನಿಯರ್, ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ದಕ್ಷಿಣಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಸಹಕಾರ ಸ್ಮರಿಸಲಾಗಿದೆ.
ಆಳ್ವಾಸ್ ಮೂಡುಬಿದಿರೆ ಕಾಲೇಜಿನ ವಿದ್ಯಾರ್ಥಿನಿ. ಅತ್ಯದ್ಬುತ ಸಾಧನೆಯನ್ನು ಮಾಡಿ ಕೋಟ್ಯಾಂತರ ಕ್ರೀಡಾಭಿಮಾನಿಗಳ ಹೃದಯ ಗೆದ್ದ ಯಶಸ್ವಿ ಸಾಧಕಿ ಎಂಬ ಹೆಗ್ಗಳಿಕೆಯನ್ನು ಇವರು ಪಡೆದಿದ್ದಾರೆ.



