ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔಟ್ ಗೋಯಿಂಗ್ ಸಿಎಂ. ಅವರು ರಾಜೀನಾಮೆಗೆ ಸಿದ್ಧವಾಗುತ್ತಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕಾರಣವನ್ನೇ ಮೈಗೂಡಿಸಿಕೊಂಡು ಬಂದವರು. ತಮ್ಮ ಉಸಿರು ಇರುವವರೆಗೆ ರಾಜಕೀಯದಲ್ಲಿ ಇರುತ್ತೇನೆಂದು ಹೇಳುತ್ತಾರೆ. ಅವರಿಗೆ ರಾಜಕೀಯವೇ ಜೀವನ ಆಗಿತ್ತು. ಆದರೆ ನಿಮಗೆ ರಾಜಕೀಯ ಜೀವ ಕೊಟ್ಟ ಈ ರಾಜ್ಯದ ಜನರಿಗೆ ನೀವು ಕೊಟ್ಟಿದ್ದು ಏನು? ಎಂದು ಪ್ರಶ್ನಿಸಿದರು.
ನನ್ನ ರೀತಿ ಪುತ್ರ ಯತೀಂದ್ರರನ್ನು ಆಶೀರ್ವದಿಸಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರ ರಾಜಕೀಯ ಆಯಿತು. ಈಗ ಮಗನನ್ನು ರಕ್ಷಿಸಿ ಎನ್ನುತ್ತಾರೆ. ವಂಶಪಾರಂಪರ್ಯಕ್ಕೆ ಅವರು ಜೋತು ಬಿದ್ದಿದ್ದಾರೆ. ಅವರು ತಮ್ಮ ಮಗನ ಪರವಾಗಿ ಮಾತನಾಡುವುದನ್ನು ಬಿಟ್ಟು ರಾಜ್ಯದ ಜನತೆ ಪರ ಮಾತನಾಡಬೇಕಿತ್ತು. ಇದು ಅವರ ರಾಜಕೀಯ ಜೀವನದ ಅಂತ್ಯದ ದಿನಗಳ ಮಾತು ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ಯಾರು ಮುಖ್ಯಮಂತ್ರಿಯಾಗಲಿದ್ದಾರೆಂದು ಅವರ ಪಕ್ಷ ತೀರ್ಮಾನಿಸಲಿದೆ. ಆದರೆ, ದಲಿತರನ್ನು ಸಿಎಂ ಮಾಡಲ್ಲ ಎಂದರು.
ಪ್ಲಿಪ್‌ಕಾಟ್‌ರ್ನಲ್ಲಿ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಜಾಹೀರಾತು ವಿರುದ್ಧ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಈ ಜಾಹೀರಾತು ರೈತರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಅನ್ನದಾತರಿಗೆ ತೊಂದರೆ ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಲಾಭದ ದೃಷ್ಟಿಯಿಂದ ಒಂದು ದಿನಕ್ಕಾಗಿ ಕೊಡುವ ಇಂಥ ಜಾಹೀರಾತುಗಳಿಂದ ಸಹಜವಾಗಿ ಜನರಗೆ ತೊಂದರೆಯಾಗಲಿದೆ. ಒಂದು ರೂಪಾಯಿಗೆ ಒಂದು ಲೀಟರ್ ಹಾಲನ್ನು ಒಂದು ದಿನ ಕೊಡಬಹುದು. ಆದರೆ ಪ್ರತಿದಿನ ಕೊಡಲು ಸಾಧ್ಯವಿಲ್ಲ. ಜನರನ್ನು ವಂಚಿಸುವ, ರೈತರಿಗೆ ತೊಂದರೆ ಕೊಡುವ ಜಾಹೀರಾತುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದು ಆಗ್ರಹಿಸಿದರು.

















