ಅಡಿಕೆ ಬೆಳೆಗಾರರು, ಬಳಕೆದಾರರಿಗೆ ದೊಡ್ಡ ಸಮಾಧಾನ ಎಂಬಂತೆ, ಅಡಿಕೆಯಲ್ಲಿ ಅಪಾಯಕರ ಅಂಶ ಇಲ್ಲ ಎನ್ನುವುದು ಸಂಶೋಧನೆಯ ಮಧ್ಯಾಂತರ ವರದಿ ಯಲ್ಲಿ ತಿಳಿದು ಬಂದಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಮಾಹಿತಿ ನೀಡಿದ್ದಾರೆ.ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಕೃಷಿ ಸಚಿವರು ಉತ್ತರಿಸಿದರು.
ಅಡಿಕೆ ಹಾನಿಕಾರಕವಲ್ಲ ಮತ್ತು ಕ್ಯಾನ್ಸರ್ ಕಾರಕವಲ್ಲ ಎಂಬ ಬಗ್ಗೆ ಈಗಾಗಲೇ ಸಂಶೋಧನೆ ನಡೆಯುತ್ತಿದೆ. ಅಂತಿಮ ವರದಿ ಬಂದ ಅನಂತರ ಜನರಿಗೆ ಸಂದೇಶ ನೀಡಲಾಗುತ್ತದೆ. ಜನರ ಆತಂಕ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.ಅಡಿಕೆ ತಟ್ಟೆಗಳಲ್ಲಿ ಅಲ್ಕಲಾಯ್ಡ್ ಮಟ್ಟವು ಅತ್ಯಂತ ಕಡಿಮೆ ಇರುವುದು ಈ ಕುರಿತಾದ ಅಧ್ಯಯನಗಳಲ್ಲಿ ಕಂಡುಬಂದಿದೆ.ಆಹಾರಕ್ಕೆ ಈ ರಾಸಾಯನಿಕಗಳ ಸೇರ್ಪಡೆಯಾಗುವ ಸಾಧ್ಯತೆ ಕಡಿಮೆ ಇರುವುದರಿಂದ ಅವುಗಳನ್ನು ಜೈವಿಕವಾಗಿ ವಿಘಟನೆಗೊಳ್ಳುವ ಆಹಾರ ಪಾತ್ರೆಗಳಾಗಿ ಬಳಸಿದಲ್ಲಿ ಮನುಷ್ಯನ ಆರೋಗ್ಯಕ್ಕೆ ಅಪಾಯವಿಲ್ಲ ಎಂದು ತಿಳಿದು ಬಂದಿದೆ ಎಂದರು.
ಅಡಿಕೆಗೆ ಅಂಟಿದ ಕಳಂಕವನ್ನು ತೊಡೆದು ಹಾಕುವ ಹಾಗೂ ಈ ಬಗ್ಗೆ ಸಂಶೋಧನೆ ನಡೆಸುವ ಹೊಣೆಯನ್ನು ಎಂ.ಎಸ್. ರಾಮಯ್ಯ ಸಂಸ್ಥೆಗೆ ತೋಟಗಾರಿಕೆ ಇಲಾಖೆ ವಹಿಸಿದೆ. ಈಗಾಗಲೇ 31.80 ಲಕ್ಷರೂ. ವೆಚ್ಚದಲ್ಲಿ ಸಂಶೋಧನೆ ಕೈಗೊಂಡಿದೆ. ಪಾನ್ ಅಥವಾ ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಅಡಿಕೆಯನ್ನು ಒಂದು ಅಂಶವಾಗಿ ಬಳಸಿದರೂ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹಾಗೂ ತಂಬಾಕು ಸೇರಿಸದೆ ಇದ್ದರೆ ಹಾನಿಕಾರಕವಲ್ಲ ಎಂದು ಈ ಸಂಸ್ಥೆ ವರದಿ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.



















