ಕಾರ್ಕಳ, ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಜನರಲ್ಲಿ ಗೊಂದಲ ಮೂಡಿಸುವ ಯೂಟ್ಯೂಬ್ ಮತ್ತು ವೆಬ್ ಚಾನೆಲ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಎಚ್ಚರಿಸಿದ್ದಾರೆ.
ತಾ. ಪಂ. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಗೆ ಜೀವಿತಾವಧಿ ಪ್ರಮಾಣ ಪತ್ರ ಕಡ್ಡಾಯ ಎಂಬಂತಹ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಸರಕಾರ ಇಂತಹ ಯಾವುದೇ ನಿಯಮ ಜಾರಿಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸಮಿತಿಯ ಸದಸ್ಯರು ಈ ಬಗ್ಗೆ ಕೆಲವು ಯೂಟ್ಯೂಬ್ ಮತ್ತು ವೆಬ್ ಚಾನೆಲ್‌ಗಳಲ್ಲಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾ. ಪಂ. ಇಒ ಪ್ರಶಾಂತ್ ರಾವ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ತಾಲೂಕಿನಲ್ಲಿ 36,092 ಫಲಾನುಭವಿಗಳಿಗೆ ಹಣ ಪಾವತಿಯಾಗಿದ್ದು, ಹೊಸ ಅರ್ಜಿಗಳ ಪರಿಶೀಲನೆ ಪ್ರಗತಿಯಲ್ಲಿದೆ.
ಪ್ರಸ್ತುತ 639 ಮಂದಿಗೆ ಯೋಜನೆಯ ಲಾಭ ಸಿಗುತ್ತಿದೆ. ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳಲ್ಲಿ ಈ ಬಗ್ಗೆ ಹೆಚ್ಚಿನ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸಲು ಇಒ ಸೂಚಿಸಿದರು. ಕಳೆದ ತಿಂಗಳು 5754 ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ. ಪಡಿತರ ಅಂಗಡಿಗಳಲ್ಲಿ ಯೋಜನೆಯ ವಿವರವುಳ್ಳ ಬ್ಯಾನರ್ ಅಳವಡಿಸಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಗೆ ಮಾತ್ರ ಹೊಸ ಕಾರ್ಡ್ ನೀಡಲಾಗುತ್ತಿದ್ದು, ರೆಂಜಾಳ, ಈದು ಮತ್ತು ದುರ್ಗಾ ಗ್ರಾಮಗಳಲ್ಲಿ ವಿತರಿಸಲಾಗಿದೆ ಆಯಾ ಇಲಾಖೆ ಸಿಬಂದಿ ಮಾಹಿತಿ ನೀಡಿದರು. ಹೊಸ ಅಂಗಡಿಗಳ ಪ್ರಸ್ತಾವನೆ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಸಮಿತಿ ಸದಸ್ಯರಾದ ರಜನಿ, ಫಿಲಿಪ್ ಮಸ್ಕರೇನ್ಹಸ್, ರಾಜೇಶ್ ನಾಯ್ಕ್, ಪ್ರಶಾಂತ್ ಪೂಜಾರಿ, ಚರಿತ್ರಾ ಎಂ., ಶೋಭಾರಾಣಿ, ಜಯ ಕುಲಾಲ್, ಸುರೇಶ್ ಆಚಾರ್ಯ, ಸಂತೋಷ್ ದೇವಾಡಿಗ, ಸಂತೋಷ್ ಶೆಟ್ಟಿ, ವಿಶ್ವನಾಥ್ ಭಂಡಾರಿ, ಹೇಮಂತ್ ಆಚಾರ್ಯ , ಯತೀಶ್ ಕೋಟ್ಯಾನ್, ಅಧಿಕಾರಿ, ಸಿಬಂದಿ ಉಪಸ್ಥಿತರಿದ್ದರು.
ಬೋಳ ಗ್ರಾಮದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ವಿದ್ಯುತ್ ಪರಿವರ್ತಕಗಳ ಸಂಪರ್ಕ ಕಡಿತಗೊಳಿಸುತ್ತಿರುವ ಬಗ್ಗೆ ಸದಸ್ಯ ಸಂತೋಷ್ ಅವರು ಗಮನ ಸೆಳೆದರು. ಈ ಬಗ್ಗೆ ಪರಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಸಿಬಂದಿಗೆ ಅಧ್ಯಕ್ಷರು ಮತ್ತು ಇಒ ಸೂಚಿಸಿದರು
ಸಭೆಗೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಗೈರಾಗಿರುವ ಬಗ್ಗೆ ಮತ್ತು ಮಾಹಿತಿ ಇಲ್ಲದ ಸಿಬಂದಿ ಕಳುಹಿಸಿರುವ ಬಗ್ಗೆ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸೂಕ್ತ ಅಧಿಕಾರಿಗಳನ್ನು ನಿಯೋಜಿಸದಿದ್ದರೆ ಈ ಬಗ್ಗೆ ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.



















