ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಹಾಗೂ ಸಿಬಂದಿಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಐವರ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.27 ರಂದು ಮಧ್ಯಾಹ್ನ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಂಚಿಕಟ್ಟೆ ಬಳಿ ಘಟನೆ ಸಂಭವಿಸಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಮತ್ತು ಸಿಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬಂಗ್ಲೆಗುಡ್ಡೆ ವೃತ್ತದ ಕಡೆಯಿಂದ ಬರುತ್ತಿದ್ದ ಕಾರನ್ನು ನಿಲ್ಲಿಸುವಂತೆ ಅವರು ಸೂಚನೆ ನೀಡಿದ್ದರು.
ಆಗ ಕಾರಿನಲ್ಲಿದ್ದ ಸುದರ್ಶನ್, ಕರ್ತವ್ಯ ಶೆಟ್ಟಿ ಅರುಣ್, ಶ್ರೀಕಾಂತ್ ಮತ್ತು ಶಶಿಕಾಂತ್ ಪೊಲೀಸರ ಸೂಚನೆ ಧಿಕ್ಕರಿಸಿ ಅಧಿಕಾರಿಗಳನ್ನು ಕೊಲ್ಲುವ ಉದ್ದೇಶದಿಂದ ಅವರ ಮೇಲೆ ಕಾರನ್ನು ಚಲಾಯಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.



















