ರಾಜ್ಯದಲ್ಲಿ ಹಲವು ಪ್ರಾದೇಶಿಕ ಪಕ್ಷಗಳ ಸ್ಥಾಪನೆಯಾಗಿದ್ದರೂ ಹೋರಾಡಿ ಉಳಿದಿರುವುದು ಜೆಡಿಎಸ್ ಪಕ್ಷ ಮಾತ್ರ. ಹಿರಿಯರಾದ ದೇವೆಗೌಡರ ಶ್ರಮ, ಸ್ಪಷ್ಟ ನಿಲುವು, ಜನಪರ ಹೋರಾಟ, ಕಲ್ಯಾಣ ಯೋಜನೆಗಳ ಕೊಡುಗೆ, ಕೃಷಿಕರಿಗೆ ಹಲವು ಶಾಶ್ವತ ಯೋಜನೆ ಮತ್ತು ಹಿಂದುಳಿದ ವರ್ಗಗಳ ಜೊತೆಗೆ ನಿಂತಿರುವುದರಿಂದಲೇ 2 ರಾಷ್ಟ್ರೀಯ ಪಕ್ಷದ ಮಧ್ಯೆ ಇಂದು ಜೆಡಿಎಸ್ ರಜತ ಸಂಭ್ರಮವನ್ನು ಆಚರಿಸುವುದಾಗಿದೆ. ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಮಾಜಿ ಶಾಸಕ ಜೆ.ಕೆ.ಕೃಷ್ಣ ರೆಡ್ಡಿ ಹೇಳಿದರು.
ಅವರು ಹೆಬ್ರಿಯ ಮದಗ ಪರಿಮಳ ಲೇಔಟ್ ನಲ್ಲಿ ಶನಿವಾರ ರಾತ್ರಿ ಜೆಡಿಎಸ್ ಕಾರ್ಕಳ ವಿಧಾನಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತ್ರತ್ವದಲ್ಲಿ ನಡೆದ ಜೆಡಿಎಸ್ – 25 ರಜತ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ವಾಸ್ತವ್ಯವನ್ನು ನಾಡಿಗೆ ಪರಿಚಯಿಸಿ ಸ್ಥಳದಲ್ಲೇ ಜನರ ಕಷ್ಟ ಆಲಿಸಿ ಪರಿಹಾರ ಕಂಡುಕೊಳ್ಳುವ ಮೂಲಕ ಕುಮಾರಸ್ವಾಮಿಯವರು ಜನಮನ ಗೆದ್ದಿದ್ದಾರೆ. ಅಂತಹ ಜೆಡಿಎಸ್ ಪಕ್ಷವನ್ನು ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಹೋರಾಟಗಾರ ಯುವ ನಾಯಕ ಕುಚ್ಚೂರು ಶ್ರೀಕಾಂತ್ ಪೂಜಾರಿ ಕಟ್ಟುತ್ತಿರುವುದು ಶ್ಲಾಘನೀಯ, ಪಕ್ಷದ ರಾಜ್ಯದ ನಾಯಕರು ನಿಮ್ಮ ಇರಲಿದ್ದಾರೆ, ನಿಖಿಲ್ ಕುಮಾರಸ್ವಾಮಿ ನೇತ್ರತ್ವದಲ್ಲಿ ಜೆಡಿಎಸ್ ಮುನ್ನಡೆಯಲಿದೆ ಎಂದು ಜೆ.ಕೆ.ಕೃಷ್ಣ ರೆಡ್ಡಿ ಹೇಳಿದರು.
ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಮಾತನಾಡಿ ಗ್ರಾಮಸ್ವರಾಜ್ ಕಲ್ಪನೆಯನ್ನು ಸಾಕಾರಗೊಳಿಸಲು ಜನರ ಬಳಿಗೆ ಸರ್ಕಾರವನ್ನು ಕೊಂಡುಹೋಗಿ ಜನರ ಕೆಲಸ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಸರಾಯಿ ನಿಷೇಧ ಮಾಡಿ ಮಹಿಳೆಯರ ಕಣ್ಣೀರು ಒರೆಸಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಹೈನುಗಾರಿಕೆ, ಕೃಷಿಗೆ ಹಲವು ಯೋಜನೆ, ಬಿಸಿಯೂಟ, ರೈತರ ಕಲ್ಯಾಣ ಸೇರಿ ಹಲವು ಯೋಜನೆ ರೂಪಿಸಿದ್ದಾರೆ. ಕಾರ್ಕಳದ ಎಣ್ಣೆಹೊಳೆ ಡ್ಯಾಂ ಕೂಡ ಕುಮಾರಸ್ವಾಮಿ ಕೊಡುಗೆ, ಮುಂದಿನ 2024 ರಲ್ಲಿ ಎನ್ ಡಿಎ ಸರ್ಕಾರ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯಕ್ಕೆ ಒಳ್ಳೇಯ ದಿನಗಳು ಬರಲಿದೆ ಎಂದರು.
ಜೆಡಿಎಸ್ ಕಾರ್ಕಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಮಾತನಾಡಿ ಸರ್ವ ನಾಯಕರ ಸಹಕಾರದಲ್ಲಿ ಶ್ರಮವಹಿಸಿ ಹಂತಹಂತವಾಗಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವ ಸಂಕಲ್ಪ ಮಾಡಿದರು. ರಜತಸಂಭ್ರಮ ಯಶಸ್ವಿಗೊಳಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಹೆಬ್ರಿಯ ಪೌರ ಕಾರ್ಮಿಕರಾದ ಬಾಬಣ್ಣ ಬಡಾಗುಡ್ಡೆ ಮತ್ತು ಹರೀಶ ಬಡಾಗುಡ್ಡೆ ಹಾಗೂ ಕಾಮಿಡಿ ಕಿಲಾಡಿಗಳು ವಿಜೇತರಾದ ಮಡೇನೂರು ಮನು ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು.
ಕಾಮಿಡಿ ಕಿಲಾಡಿಗಳು ವಿಜೇತರಾದ ಮಡೇನೂರು ಮನು ಬೆಂಗಳೂರು ಅವರ ತಂಡದಿಂದ ರಸಸಂಜೆ ಕಾರ್ಯಕ್ರಮ ನಡೆಯಿತು.
ಜೆಡಿಎಸ್ ಉತ್ತರಕನ್ನಡ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ್ ಸೋನಿ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ ವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ವಿವಿಧ ಪ್ರಮುಖರಾದ ಯೋಗೀಶ ಶೆಟ್ಟಿ ಜಕ್ಕೂರು, ಉದಯ ಶೆಟ್ಟಿ ಕಾಪು, ರಮೇಶ್ ಕುಂದಾಪುರ, ಪ್ರಕಾಶ ಶೆಟ್ಟಿ ಬೆಳ್ಳಂಪಳ್ಳಿ, ಸುರೇಶ್ ಬಜಗೋಳಿ, ದೇವರಾಜ್ ಕಾಪು, ಜೀವನ್ ಕೃಷ್ಣ, ಹರೀಶ್ ಮುದ್ರಾಡಿ ಮುಂತಾದವರು ಉಪಸ್ಥಿತರಿದ್ದರು. ಯೋಗೀಶ ಶೆಟ್ಟಿ ಸ್ವಾಗತಿಸಿ ಕುಚ್ಚೂರು ಶ್ರೀಕಾಂತ್ ಪೂಜಾರಿ ವಂದಿಸಿ ದೀಕ್ಷಿತ್ ಪೆರ್ಡೂರು ನಿರೂಪಿಸಿದರು.

















