ಕಳೆದ ವರ್ಷ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಖ್ಯಾತಿ ಗಳಿಸಿದ್ದ ಐಐಟಿ-ವಾಲೆ ಬಾಬಾ ವಿವಾಹವಾಗಿದ್ದಾರೆ. ಬೆಂಗಳೂರಿನ ಹುಡುಗಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐಐಟಿ ವಾಲೆ ಬಾಬಾರ ನಿಜವಾದ ಹೆಸರು ಅಭಯ್ ಸಿಂಗ್. ಹರಿಯಾಣದ ಜಜ್ಜರ್ ಜಿಲ್ಲೆಯವರು. ಬೆಂಗಳೂರಿನ ಎಂಜಿನಿಯರ್ ಪ್ರತೀಕಾ ಎಂಬವರನ್ನು ವರಿಸಿದ್ದಾರೆ. ತನ್ನ ತಂದೆಯನ್ನು ಭೇಟಿಯಾಗಲು ಜಜ್ಜರ್‌ಗೆ ಐಐಟಿ ವಾಲೆ ಬಾಬಾ ಭೇಟಿ ಕೊಟ್ಟಿದ್ದರು. ವಕೀಲರಾಗಿರುವ ತಮ್ಮ ತಂದೆಯನ್ನು ಭೇಟಿ ಮಾಡಲು ತಹಸಿಲ್ ಸಂಕೀರ್ಣಕ್ಕೆ ತೆರಳಿದ್ದರು. ಈ ವೇಳೆ ಪತ್ನಿ ಪ್ರತೀಕಾ ಕೂಡ ಜೊತೆಗಿದ್ದರು.
ಕಳೆದ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ಸಂದರ್ಭದಲ್ಲಿ ಐಐಟಿ-ವಾಲೆ ಬಾಬಾ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದರು. ಅವರು ತಪಸ್ವಿಯಂತೆ ವೇಷ ಧರಿಸಿ ಮೇಳದಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿತ್ತು.
‘ನಾನು ಐಐಟಿಯ ಪದವೀಧರ’ ಎಂದು ಅವರು ಹೇಳಿಕೊಂಡಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದರು. ‘ಐಐಟಿ-ವಾಲೆ ಬಾಬಾ’ ಎಂಬ ವಿಶಿಷ್ಟ ಗುರುತಿನೊಂದಿಗೆ ಜನಪ್ರಿಯರಾದರು. ಐಐಟಿ-ಬಾಂಬೆಯ ಹಿರಿಯ ವಿದ್ಯಾರ್ಥಿ ಮತ್ತು ಮಾಜಿ ಏರೋಸ್ಪೇಸ್ ಎಂಜಿನಿಯರ್ ಆಗಿದ್ದ ಅವರು, ‘ನಾನು ಹರಿಯಾಣದಿಂದ ಬಂದಿದ್ದೇನೆ. ಐಐಟಿಗೆ ಹೋಗಿದ್ದೆ, ನಂತರ ಎಂಜಿನಿಯರಿಂಗ್‌ನಿಂದ ಆರ್ಟ್ಸ್‌ಗೆ ಬದಲಾದೆ. ಅದು ಕೂಡ ಕೆಲಸ ಮಾಡಲಿಲ್ಲ. ಆದ್ದರಿಂದ ನಾನು ಬದಲಾಗುತ್ತಲೇ ಇದ್ದೆ. ನಂತರ ನಾನು ಅಂತಿಮ ಸತ್ಯವನ್ನು ತಲುಪಿದೆ’ ಎಂದು ಹೇಳಿಕೊಂಡಿದ್ದಾರೆ.


















