ಅಜೆಕಾರು ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ, ಪ. ಪೂ. ಕಾಲೇಜುವಿನ ಉದ್ಘಾಟನೆ ಹಾಗೂ ಪದ್ಮ ನಗರದಲ್ಲಿ ನಿರ್ಮಾಣಗೊಂಡ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ಎ.10 ರಿಂದ ಎ.14 ರ ವರೆಗೆ ನಡೆಯಲಿದೆ.
ಎ.10ರಂದು ಕುಕ್ಕುಂದೂರು ಗಣಿತನಗರ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಪ್ರತಿಷ್ಠಾಪನೆಗೊಳ್ಳಲಿರುವ ದೇವರ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 5 ರಿಂದ ಅಜೆಕಾರು ರಾಮಮಂದಿರದಿಂದ ವಿಗ್ರಹ ಹಾಗೂ ಹಸುರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಅನಂತರ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ಧಾರ್ಮಿಕ ಕಾರ್ಯಗಳು ಎಣ್ಣೆಹೊಳೆ ಅರುಣ್ ಭಟ್ ನೇತೃತ್ವದಲ್ಲಿ ನಡೆಯಲಿವೆ.
ಎ.11ರಂದು ನವಗ್ರಹ ಯಾಗ, ಅಥರ್ವಶಿರ್ಷ ಮಹಾಗಣಯಾಗ, ಗಣಪತಿ ದೇವರ ಬಿಂಬ ಶುದ್ದಿ ಸಂಜೆ 5 ರಿಂದ ಬ್ರಹ್ಮಕಲಶ ಮಂಡಲ ರಚನೆ, ಮಂಡಲ ಪೂಜೆ, ಮಹಾಗಣಪತಿ ದೇವರ ಬಿಂಬ ಶಯ್ಯಾದಿವಾಸ ನಡೆಯಲಿದೆ. ಎ.12ರಂದು ತತ್ವಹೋಮ, ಪ್ರತಿಷ್ಠಾಹೋಮ, ಪ್ರಧಾನಹೋಮ, ಶಿಖರಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಕಲೋಕ್ತ ಪೂಜೆ, ಮಹಾಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ನಡೆಯಲಿದೆ. ಬೆಳಗ್ಗೆ 11ರಿಂದ ಶ್ರೀ ವಿಷ್ಣುಸಹಸ್ರನಾಮ ಪಠಣ ನಡೆಯಲಿದೆ.
ಮಧ್ಯಾಹ್ನ 1ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಈ ಸಂದರ್ಭ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಆಶ್ರೀವಚನ ನೀಡಲಿದ್ದಾರೆ. ಫಲಪುಷ್ಪ ಸಮರ್ಪಣೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೋಹನ್ ಆಳ್ವ ನೇರವೇರಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಮಾಜಿ ಸಚಿವ ಶಾಸಕ ಸುನೀಲ್ ಕುಮಾರ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಗೌರವಾಧ್ಯಕ್ಷ ಶಿವರಾಮ್ ಶೆಟ್ಟಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಬಳ್ಳಾರಿ ಮರ್ಚಡ್ ಟ್ರಸ್ಟ್ ಅಧ್ಯಕ್ಷ ಎಮ್. ಜಿ. ಗೌಡ, ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಉದ್ಯಮಿ ಶಶಿಧರ್ ಶೆಟ್ಟಿಅಜೆಕಾರ್ ಪದ್ಯಗೋಪಾಲ್ ಎಜುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿ ಸದಸ್ಯ ಡಾ| ಸಂತೋಷ್ ಕುಮಾರ್‌ಶೆಟ್ಟಿ ಅಜೆಕಾರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಎ.11 ರ ಸಂಜೆ 7ಕ್ಕೆ ಜಗದೀಶ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಭಕ್ತಿ ಗಾನ ವೈಭವ. ಎ.12 ಕ್ಕೆ ಆಧ್ಯಾಮಲ್ಯ ಅಜೆಕಾರು ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಸಂಜೆ 7ಕ್ಕೆ ಯಕ್ಷಗಾನ ನಡೆಯಲಿದೆ. ಎ.13 ಹಾಗೂ ಎ14 ರಂದು ಭಜನ ಸುಧಾ ಕಾರ್ಯಕ್ರಮ ನಡೆಯಲಿದೆ.
ಎ.14 ರ ಸಂಜೆ 5.30 ಕ್ಕೆ ಪದ್ಮ ಜಿ. ಶೆಟ್ಟಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಅಜೆಕಾರು ಜ್ಞಾನ ಸುಧಾ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಲೋಕಾರ್ಪಣೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಶಾಸಕ ಸುನಿಲ್ ಕುಮಾರ್ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಪದವಿ ಪೂರ್ವ ಕಾಲೇಜು ಉದ್ಘಾಟಿಸಲಿದ್ದಾರೆ. ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ| ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ನಿಟ್ಟೆ ಡಾ| ವಿಶಾಲ್ ಹೆಗ್ಡೆ ಹಾಗೂ ಉದ್ಯಮಿ ಶಿವರಾಮ್ ಜಿ. ಶೆಟ್ಟಿ ಪ್ರಯೋಗಶಾಲೆ ಉದ್ಘಾಟಿಸಲಿದ್ದಾರೆ.


























