ಧರೆಗೆ ಉರುಳಿದ ಅಶ್ವತ್ಥ ವೃಕ್ಷ – ಇನ್ನಾ ಉದಯಕುಮಾರ್ ಶೆಟ್ಟಿ.
ಸಂಘಟನೆಗಳ ಮೂಲಕ ಎತ್ತರಕ್ಕೇರಿದ ನಾಯಕ ಅವರು.
—————————————————————————-
ನಾನು ಅವರನ್ನು ಮೊದಲು ಭೇಟಿ ಆದದ್ದು 1988ರ ಒಂದು ದಿನ. ನನಗೆ ಅವರ ಮೊದಲ ಪರಿಚಯ ಅಂದರೆ ನಮ್ಮ ಇನ್ನಾ ಗ್ರಾಮದ ಎಂ. ವಿ. ಶಾಸ್ತ್ರೀ ಪ್ರೌಢಶಾಲೆಯ ಮೊದಲ ಬ್ಯಾಚಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ನಾಯಕ ಎಂದು!
ಇನ್ನೂ ವಿಸ್ತಾರವಾಗಿ ಹೇಳಬೇಕೆಂದರೆ ಇನ್ನಾದ ಗೋಳಿದಡಿ ಎಂಬ ಮನೆಯ ಹುಡುಗ, ತಾಳಮದ್ದಲೆ ಕಲಾವಿದ ಮತ್ತು ಕೃಷಿಕ ಲೋಕಯ್ಯ ಶೆಟ್ಟರ ಮಗ ಎಂಬುವುದು! ಒಬ್ಬ ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಹುಡುಗ ತನ್ನ ಅಸೀಮ ಧೈರ್ಯ ಮತ್ತು ನಾಯಕತ್ವದ ಗುಣಗಳಿಂದ ಹಲವು ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಮಿಂಚಿದ್ದು ಖಂಡಿತ ಒಂದು ರೋಚಕವಾದ ಅಧ್ಯಾಯ.
ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಅತೀವವಾದ ಪ್ರೀತಿಯನ್ನು ಹೊಂದಿದ್ದ ಉದಯಕುಮಾರರು ಇಂದು ಅಗಲಿದ್ದು ನನಗೆ ಅತ್ಯಂತ ನೋವಿನ ಸಂಗತಿ. ಅವರು ಮತ್ತು ಅವರ ಪತ್ನಿ ರೇಷ್ಮಾ ನನ್ನ ಮೇಲಿಟ್ಟ ಅಗಾಧ ಪ್ರೀತಿ ಮತ್ತು ನಂಬಿಕೆಗಳನ್ನು ನೆನಪು ಮಾಡಿಕೊಂಡಾಗ ಹೃದಯ ತುಂಬಾ ಭಾರವಾಗುತ್ತದೆ. ಮನಸ್ಸು ಭಾವುಕವಾಗುತ್ತದೆ.
ಒಂದು ಸಣ್ಣ ಆರಂಭ, ದೊಡ್ಡ ಮುಕ್ತಾಯ!
——————————————————————-
ಇನ್ನಾ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಕಲಿತು ಇನ್ನು ಶಾಲೆ ಸಾಕು ಎಂದು ಅಪ್ಪನ ಆಣತಿಯಂತೆ ನೇಗಿಲು ಹಿಡಿದು ಗದ್ದೆಯಲ್ಲಿ ದುಡಿಯುತ್ತಿದ್ದ ಹುಡುಗನಿಗೆ ಶಾಲೆ ಮರೆತೇ ಹೋಗಿತ್ತು! ಆಗ ಇನ್ನಾ ಗ್ರಾಮದಲ್ಲಿ ಹೊಸದಾಗಿ ಹೈಸ್ಕೂಲ್ ಆರಂಭವಾಗಿತ್ತು. ಶಾಲೆಗೆ ಮಕ್ಕಳು ಬೇಕಾಗಿತ್ತು. ಆಗ ಶಾಲೆಯ ಸಂಚಾಲಕರಾಗಿದ್ದ ನಿವೃತ್ತ ಶಿಕ್ಷಕ ದಿನೇಶ್ ರಾಯರು ಮಳೆಗಾಲದಲ್ಲಿ ಕೊಡೆ ಹಿಡಿದು ಅವರ ಮನೆಗೆ ಬಂದು ‘ ಏನೋ ಹುಡುಗ, ಹೈಸ್ಕೂಲ್ ಸೇರುತ್ತೀಯಾ? ‘ ಎಂದು ಹೇಳಿ ಅಪ್ಪನನ್ನು ಒಪ್ಪಿಸಿ ಅವರನ್ನು ನಮ್ಮ ಹೈಸ್ಕೂಲಿಗೆ ಸೇರಿಸಿದ್ದರು. ಹಾಗೆ ಅವರ ಬದುಕಿಗೆ ಒಂದು ನಿರ್ಣಾಯಕವಾದ ತಿರುವು ಕೊಟ್ಟ ನಮ್ಮ ಶಾಲೆಯನ್ನು ಅವರು ಕೊನೆಯವರೆಗೂ ಮರೆಯಲಿಲ್ಲ.
ನಾವು ಯಾವಾಗ ಕರೆದರೂ ಬಂದು ನಮ್ಮ ನೆರವಿಗೆ ಬಂದು ನಿಲ್ಲುತ್ತಿದ್ದರು ಅವರು. ಉದಯ ನನ್ನ ಸ್ಟೂಡೆಂಟ್ ಆಗಿರಲಿಲ್ಲ. ಆದರೆ ಅವರು ನನ್ನನ್ನು ಅವರ ಗುರುಗಳಿಗಿಂತ ಹೆಚ್ಚು ಪ್ರೀತಿ ಮಾಡಿದರು. ಮುಂದೆ ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪದವಿ ಮುಗಿಸಿ ಪಡುಬಿದ್ರಿಯಲ್ಲಿ ಸನ್ ಶೈನ್ ಟಯರ್ಸ್ ಎಂಬ ಉದ್ಯಮ ಆರಂಭಿಸಿದರು. ಹಂತ ಹಂತವಾಗಿ ಉದ್ಯಮದಲ್ಲಿ ಬೆಳೆದರು.
ರೇಷ್ಮಾ ಅವರನ್ನು ಪ್ರೀತಿ ಮಾಡಿ ಮದುವೆಯಾದರು.
———————————————————————
ಅಣೆಕಟ್ಟು, ಸೇತುವೆ ಯಾವುದೂ ಇಲ್ಲದೆ ಅಮೆಜಾನ್ ನದಿಯ ಹಾಗೆ ಹರಿಯುತ್ತಿದ್ದ ಉದಯ ಅವರ ಬದುಕಿನಲ್ಲಿ ರೇಷ್ಮಾರ ಪ್ರವೇಶ ಆದದ್ದು ಅದೊಂದು ಅದ್ಭುತವಾದ ತಿರುವು. ರೇಷ್ಮಾ ನಮ್ಮ ಪ್ರೌಢಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಆಗಿದ್ದವರು. ರಾಜಕೀಯದಲ್ಲಿ ದೊಡ್ಡದಾಗಿ ಬೆಳೆಯಬೇಕು ಎಂಬ ಆಕಾಂಕ್ಷೆ ಹೊತ್ತವರು. ಉದಯ ಅವರು ರೇಷ್ಮಾ ಅವರನ್ನು ಪ್ರೀತಿಸಿ ಮದುವೆಯಾಗಲು ಹೊರಟಾಗ ರೇಷ್ಮಾ ನನಗೆ ಹೇಳಿದ ಮಾತು ಇನ್ನೂ ನೆನಪಿದೆ – ನನಗೆ ಉದಯರ ಮೇಲೆ ನಂಬಿಕೆ ಇದೆ!
ರೇಷ್ಮಾ ಅವರ ಪ್ರೀತಿಯಿಂದ ಜ್ವಾಲಾಮುಖಿ ತಣಿಯಿತು!
———————————————————————–
ರೇಷ್ಮಾ ಅವರ ಉತ್ಕಟ ಪ್ರೀತಿಯು ನಮ್ಮ ಉದಯರನ್ನು ಪೂರ್ತಿಯಾಗಿ ಬದಲಾಯಿಸಿಬಿಟ್ಟಿತು. ಜ್ವಾಲಾಮುಖಿಯೇ ಆಗಿದ್ದ ಉದಯರು ತಣ್ಣಗಾದದ್ದು ರೇಷ್ಮಾ ಅವರ ಪ್ರೀತಿಯಿಂದ ಎಂದು ನನಗೆ ಗೊತ್ತು. ರೇಷ್ಮಾ ಅವರ ಪ್ರೀತಿಗಾಗಿ ಉದಯರು ಏನು ಬೇಕಾದರೂ ಮಾಡಲು ರೆಡಿ ಇದ್ದರು ಅನ್ನುವುದು ನನಗೆ ಅರ್ಥವಾದ ಸತ್ಯ. ಉದಯ ಅವರು ಸಿಟ್ಟುಮಾಡಿಕೊಂಡಾಗ ಅವರ ಸಿಟ್ಟನ್ನು ಹೇಗೆ ತಣಿಸಬೇಕು ಎಂದು ರೇಷ್ಮಾ ಅವರಿಗೆ ಚೆನ್ನಾಗಿ ಗೊತ್ತಿತ್ತು.
ಮಗಳು ಭಾಗ್ಯದೇವತೆ ಮನು.
———————————————-
ಮದುವೆಯಾಗಿ ತುಂಬಾ ವರ್ಷಗಳ ನಂತರ ಅವರ ಬದುಕಿನಲ್ಲಿ ಬಂದ ಭಾಗ್ಯದೇವತೆ ಮನು ಎಂಬ ಪುಟ್ಟ ಮಗಳು. ಉದಯರು ಅತೀ ಹೆಚ್ಚು ಪ್ರೀತಿ ಮಾಡಿದ್ದು ಮಗಳನ್ನು. ಎಲ್ಲಿ ಸಿಕ್ಕಿದರೂ ತನ್ನ ಮಗಳ ಗುಣಗಾನವನ್ನು ಮಾಡದೇ ಅವರ ಮಾತುಗಳು ಮುಗಿಯುತ್ತಿರಲಿಲ್ಲ. ಮೊನ್ನೆ ಮೊನ್ನೆ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಮಗಳು ಮನು ಭಾರತವನ್ನು ರೆಪ್ರೆಸೆಂಟ್ ಮಾಡಿಬಂದಾಗ ಉದಯರ ಕಾಲು ನೆಲದ ಮೇಲೆ ಇರಲೇ ಇಲ್ಲ! ಮಗಳು ಹುಟ್ಟಿದ ನಂತರ ನನಗೆ ನಿಜವಾದ ಜವಾಬ್ದಾರಿಯು ತಿಳಿಯಿತು, ಆಕೆ ನನ್ನ ಅದೃಷ್ಟ ದೇವತೆ, ನಾನು ಒಳ್ಳೆಯ ಅಪ್ಪನಾಗಬೇಕು ಎಂದು ನನಗೆ ಉದಯರು ನೂರಾರು ಬಾರಿ ಹೇಳಿದ್ದು ನೆನಪಿದೆ. ಅಪ್ಪನ ಕನಸಿನ ಪ್ರಕಾರವೇ ಮನು ಬೆಳೆಯುತ್ತಿರುವುದು ನಿಜಕ್ಕೂ ಅದ್ಭುತವೇ ಹೌದು.
ನೂರಾರು ಸಂಘಟನೆಗಳು, ನಾಯಕತ್ವಕ್ಕೆ ಅವರೇ ಮಾದರಿ.
—————————————————————————
ಇನ್ನಾ, ಪಡುಬಿದ್ರೆ, ಬೆಳ್ಮಣ್ ಇವೆಲ್ಲಾ ಗ್ರಾಮಗಳ ಹತ್ತು ಹಲವು ಸಂಘಟನೆಗಳಲ್ಲಿ ದುಡಿದು ನಾಯಕತ್ವದ ಅನನ್ಯವಾದ ಮಾದರಿ ಆದವರು ಅವರು. ಇನ್ನಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವವು ನಡೆದಾಗ ಊರಿನ ಹತ್ತಾರು ಹಿರಿಯರನ್ನೆಲ್ಲ ಮುಂದಿಟ್ಟುಕೊಂಡು ಮೂರು ದಿನಗಳ ಅದ್ಭುತ ಮಹೋತ್ಸವ ನಡೆಸಿಕೊಟ್ಟವರು ನಮ್ಮ ಉದಯ ಅವರೇ! ಆಗ ಇನ್ನಾ ಗ್ರಾಮದ ಹಿರಿಯ ಸೋದರರಾದ ಕಾಚೂರು ಪಡುಮನೆ ಶೇಖರ್ ಶೆಟ್ಟಿ ಮತ್ತು ಸೀತಾರಾಮ ಶೆಟ್ಟಿಯವರ ನೇತೃತ್ವದಲ್ಲಿ ಒಳ್ಳೆಯ ಕಾರ್ಯಕ್ರಮ ಸಂಘಟನೆ ಅವರು ಮಾಡಿದ್ದರು.
ಶತಮಾನದ ಅಂಗವಾಗಿ ಶಾಲೆಯಲ್ಲಿ ನೂತನ ರಂಗಮಂದಿರ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಕಂಪ್ಯೂಟರ್ ಶಿಕ್ಷಣಗಳು ಆರಂಭವಾದದ್ದು ಅವರ ಮುತುವರ್ಜಿಯಿಂದ. ಹಾಗೆಯೇ ನಮ್ಮ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅವರು ದೀರ್ಘ ಅವಧಿಗೆ ಕೆಲಸ ಮಾಡಿದ್ದನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ನಮ್ಮ ಶಾಲೆಯ ಎಲ್ಲ ಅಧ್ಯಾಪಕರ ಮೇಲೆ ಅವರು ಇರಿಸಿದ ಪ್ರೀತಿಯನ್ನು ನಾನು ಉಲ್ಲೇಖ ಮಾಡಬೇಕು. ನಮ್ಮ ಶಾಲೆಯಲ್ಲಿ ಯಾವ ಅಧ್ಯಾಪಕರ ನಿವೃತ್ತಿ ಕಾರ್ಯಕ್ರಮ ನಡೆದಾಗಲೂ ನಮ್ಮ ಉದಯರು ಬಂದು ಪ್ರೀತಿಯಿಂದ ಅಭಿನಂದನಾ ಭಾಷಣ ಮಾಡುತ್ತಿದ್ದರು. ನಮ್ಮಲ್ಲಿ ತಾಲೂಕು ಕ್ರೀಡಾಕೂಟ, ತಾಲ್ಲೂಕು ಪ್ರತಿಭಾ ಕಾರಂಜಿ, ವಿವಿಧ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆದಾಗ ಅವರು ಬಂದು ನೀಡಿದ ಸಹಕಾರಗಳನ್ನು ನಾವು ಮರೆಯುವುದಿಲ್ಲ. ಹಾಗೆಯೇ ಮುಂಬಯಿಯ ಹಿರಿಯರಾದ ಶೇಖರ್ ಶೆಟ್ಟಿ ಅವರು ಸ್ಥಾಪನೆ ಮಾಡಿದ ಯಕ್ಷ ಮಾನಸ ಸಂಸ್ಥೆ, ಇನ್ನಾದ ಬಂಟರ ಸಂಘ, ಪಡುಬಿದ್ರಿಯ ಬಂಟರ ಸಂಘ…. ಹೀಗೆ ಹತ್ತಾರು ಸಂಸ್ಥೆಗಳಲ್ಲಿ ಉದಯರು ಪದಾಧಿಕಾರಿಯಾಗಿ, ನಾಯಕರಾಗಿ ದುಡಿದಿದ್ದಾರೆ. ಅವರ ನೇತೃತ್ವದಲ್ಲಿ ನಮ್ಮ ಇನ್ನಾ ಗ್ರಾಮದಲ್ಲಿ ಹತ್ತಾರು ಉತ್ತಮ ಕಾರ್ಯಕ್ರಮಗಳು ನಡೆದಿವೆ. ಇನ್ನಾ ಮತ್ತು ಮುಂಬಯಿಯಲ್ಲಿ ಇರುವ ನೂರಾರು ಇನ್ನಾದ ತುಳುವರ ನಡುವಿನ ಕೊಂಡಿಯಾಗಿ ಅವರು ನೀಡಿದ ಸೇವೆ ಅದು ನಿಜವಾಗಿಯೂ ಗ್ರೇಟ್. ಅವರ ಜೊತೆ ಮುಂಬಯಿಗೆ ಟ್ರೈನಿನಲ್ಲಿ ಹಲವು ಬಾರಿ ಮಾಡಿದ ಪ್ರಯಾಣ, ಅವರ ಜೊತೆ ಮಾತುಕತೆ, ಹಾಸ್ಯ, ಪ್ರೀತಿ ನನಗೆ ಸ್ಮರಣೀಯ ಅನುಭವ ನೀಡಿತ್ತು.
ಜೆಸಿಐ ಮತ್ತು ಲಯನ್ಸ್ ಅಂತಾರಾಷ್ಟ್ರೀಯ ಸಂಘಟನೆಗಳ ಸಾರಥ್ಯ.
———————————————————————–
ಪಡುಬಿದ್ರೆ ಜೇಸಿಐ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಸಂಘಟನೆಗಳ ವೇದಿಕೆಗೆ ಬಂದ ಉದಯರು ಅಲ್ಲಿ ತುಂಬಾ ಉತ್ತಮವಾಗಿ ಮಾತನಾಡಲು ಕಲಿತರು. ಅವರ ತುಳು ಮತ್ತು ಕನ್ನಡದ ಪ್ರಭಾವೀ ಭಾಷಣಗಳು ಯುವಜನತೆಯನ್ನು ಪ್ರೇರಣಾದಾಯಕವಾಗಿ ಬಡಿದೆಬ್ಬಿಸುವ ಪವರ್ ಹೊಂದಿದ್ದವು. ಅವರು ಮತ್ತು ರೇಷ್ಮಾ ಇಬ್ಬರೂ ಜೇಸಿಐ ಸಂಸ್ಥೆಯ ಮೂಲಕ ಬಹಳ ಎತ್ತರಕ್ಕೆ ಬೆಳೆದರು. ರೇಷ್ಮಾ ಒಳ್ಳೆಯ ತರಬೇತುದಾರರೂ ಆದರು. ಹಾಗೆಯೇ ಬೆಳ್ಮಣ್ ಲಯನ್ಸ್ ಕ್ಲಬ್ ಸೇರಿದ ಉದಯ ಅಲ್ಲಿ ಅತ್ಯುತ್ತಮ ಅಧ್ಯಕ್ಷರು ಆಗಿ ಮಿಂಚಿದರು. ಆದರೆ ಅವರ ನಾಯಕತ್ವ ಮತ್ತು ಮಾತಿನ ಕಲೆಗಳಿಗೆ ಜೇಸಿಐ ಅತ್ಯುತ್ತಮವಾಗಿ ಸಾಣೆ ಹಿಡಿಯಿತು ಎಂದು ನನ್ನ ಅಭಿಪ್ರಾಯ.
2010 ಅವರ ಜೀವನದ ಮರೆಯಲಾಗದ ವರ್ಷ!
——————————————————————-
ಜೆಸಿಐ ಸಂಘಟನೆಯಲ್ಲಿ ಹಲವಾರು ಪ್ರಭಾವೀ ಹುದ್ದೆಗಳನ್ನು ಪ್ರಭಾವಶಾಲಿಯಾಗಿ ಮುನ್ನಡೆಸಿದ ಉದಯ ಶೆಟ್ಟಿಯವರು 2010ರಲ್ಲಿ ಅತ್ಯುನ್ನತ ಹುದ್ದೆಯಾದ ವಲಯಾಧ್ಯಕ್ಷರಾಗಿ ಆಯ್ಕೆ ಆದರು. ಆ ವರ್ಷದ ಮೊದಲ ಕಾರ್ಯಕ್ರಮವು ಹುಟ್ಟೂರು ಇನ್ನಾದಲ್ಲಿಯೇ ಆಗಬೇಕು ಎಂದವರು ಆಸೆಯನ್ನು ಪಟ್ಟು
‘ಗಂಗಾವತರಣ ‘ಎಂಬ ಶೀರ್ಷಿಕೆಯ ಒಂದು ಕಾರ್ಯಕ್ರಮವು ಇನ್ನಾ ಮುದ್ದಾಣು ದೇವಸ್ಥಾನದ ಎದುರು ವೇದಿಕೆಯೇರಿತು. ಆ ವರ್ಷ ಉದಯರು ನನಗೆ ಇನ್ನಷ್ಟು ಹತ್ತಿರವಾದರು. ವರ್ಷವಿಡೀ ನೂರಾರು ಸುಂದರ ಕಾರ್ಯಕ್ರಮಗಳು, ಸಮ್ಮೇಳನಗಳು…. ಇವೆಲ್ಲ ವೇದಿಕೆಗಳಲ್ಲಿ ಉದಯ ಶೆಟ್ಟರು ತುಂಬಾ ಅದ್ಭುತವಾಗಿ ಮಿಂಚಿದರು. ವರ್ಷದ ಕೊನೆಗೆ ಕುಂದಾಪುರದಲ್ಲಿ ನಡೆದ ಬಹು ದೊಡ್ಡ ‘ಪಾಂಚಜನ್ಯ’ ಎಂಬ ಬ್ಯಾನರಿನ ವಲಯ ಸಮ್ಮೇಳನವು ಒಂದು ಮಾದರಿಯಾಗಿ ಮೂಡಿಬಂದಿತು. ಉದಯ ಶೆಟ್ಟರು ಜೇಸಿಸ್ ಸದಸ್ಯರ ಮತ್ತು ಕುಟುಂಬಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದರು. 2010 ಭಾರತೀಯ ಜೇಸಿಐ ವಲಯ 15ರ ಇತಿಹಾಸದಲ್ಲಿ ಒಂದು ಸ್ಮರಣೀಯ ವರ್ಷವಾದರೆ ಅದಕ್ಕೆ ಕಾರಣ ಉದಯ ಶೆಟ್ಟರ ಶ್ರೇಷ್ಟವಾದ ನಾಯಕತ್ವ ಮತ್ತು ಬಹು ಸ್ಟ್ರಾಂಗ್ ಆದ ಇಚ್ಛಾಶಕ್ತಿ.
ರೇಷ್ಮಾಗೆ ಬೇಕಾಗಿ ರಾಷ್ಟ್ರಪ್ರಶಸ್ತಿ ನಿರಾಕರಿಸಿದ ಉದಯಣ್ಣ!
—————————————————————————-
ಜೆಸಿಐ ವರ್ಷದ ಕೊನೆಯಲ್ಲಿ ಉದಯರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿ ಘೋಷಣೆ ಆಗಿತ್ತು! ಅದನ್ನು ಸ್ವೀಕರಿಸಲು ಉದಯ ರಾಷ್ಟ್ರೀಯ ಅಧಿವೇಶನಕ್ಕೆ ಹೋಗಲೇ ಬೇಕಾಗಿತ್ತು. ಆದರೆ ಅದೇ ಹೊತ್ತಿಗೆ ರೇಷ್ಮಾ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧೆಯನ್ನು ಮಾಡಿದ್ದರು. ತನಗೆ ಅರ್ಹತೆಯ ಆಧಾರದಲ್ಲಿ ಸಿಕ್ಕಿದ ದೊಡ್ಡ ರಾಷ್ಟ್ರಪ್ರಶಸ್ತಿಯನ್ನು ಉದಯರು ನಿರಾಕರಿಸಿ ರೇಷ್ಮಾ ಅವರ ಪ್ರಚಾರಕ್ಕೆ ನಿಂತರು! ಹಾಗೆಯೇ ರೇಷ್ಮಾ ಜಿಲ್ಲಾ ಪಂಚಾಯತ್ ಸದಸ್ಯರಾದಾಗ, ಇನ್ನಾ ಗ್ರಾಮ ಪಂಚಾಯತನಲ್ಲಿ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಾಗ ಉದಯರು ತನ್ನ ಹೆಂಡತಿಯ ರಾಜಕೀಯದ ಬೆಂಬಲಕ್ಕೆ ನಿಂತದ್ದು ಒಂದು ಅತ್ಯುತ್ತಮ ಮಾದರಿ. ಹಾಗೆಯೇ ರೇಷ್ಮಾ ಬಿಜೆಪಿಯ ಜಿಲ್ಲಾ ಮಟ್ಟದ ವಿವಿಧ ಹೊಣೆ ಹೊತ್ತಾಗ ಉದಯರು ಆಕೆಯ ಬೆನ್ನಿಗೆ ನಿಂತು ಸಪೋರ್ಟ್ ಮಾಡಿದ್ದು ನಿಜವಾಗಿಯೂ ಗ್ರೇಟ್! ರಾಜಕೀಯದಲ್ಲಿ ಅವರೇ ಮಿಂಚುವ ಅವಕಾಶ ಮತ್ತು ಅರ್ಹತೆ ಇದ್ದರೂ ಎಲ್ಲವನ್ನೂ ತ್ಯಾಗ ಮಾಡಿ ಹೆಂಡತಿಯನ್ನು ಬೆಳೆಸಿದ್ದು ಉದಯರ ದೊಡ್ಡತನ!
ಅವರು ಒಳ್ಳೆಯ ರಂಗನಟ ಮತ್ತು ಕಲಾವಿದ.
———————————————————-
ಉದಯರಿಗೆ ಕಾಲೇಜು ದಿನಗಳಿಂದಲೂ ತೀವ್ರ ಆಸಕ್ತಿಯ ಕ್ಷೇತ್ರವಾದದ್ದು ರಂಗಭೂಮಿಯೇ. ಕನ್ನಡ ಮತ್ತು ತುಳು ರಂಗಭೂಮಿಯಲ್ಲಿ ಅವರು ನೂರಾರು ನಾಟಕಗಳಲ್ಲಿ ಅಭಿನಯ ಮಾಡಿದ್ದನ್ನು ನಾನು ನೋಡಿದ್ದೇನೆ. ಹಲವು ಪ್ರಯೋಗಾತ್ಮಕ ನಾಟಕಗಳಲ್ಲಿ ಕೂಡ ಅವರದ್ದು ಪ್ರಮುಖ ಪಾತ್ರ. ಅದರ ಮುಂದಿನ ಭಾಗವಾಗಿ ಅವರು ಹಲವು ಟಿವಿ ಧಾರಾವಾಹಿ ಮತ್ತು ಸಿನೆಮಾಗಳಲ್ಲಿ ಕೂಡ ಕಾಣಿಸಿಕೊಂಡರು. ಡಿಡಿ ಚಂದನದಲ್ಲಿ ದೀರ್ಘಕಾಲ ಪ್ರಸಾರವಾದ ಜನಪ್ರಿಯ ‘ ಕೋಟಿ ಚೆನ್ನಯ ‘ ಧಾರಾವಾಹಿಯಲ್ಲಿ ಅವರದ್ದು ನೆನಪಲ್ಲಿ ಉಳಿಯುವ ಕೇಮರ ಬಲ್ಲಾಳರ ಪಾತ್ರ! ತಮ್ಮ ವ್ಯವಹಾರದ ಒತ್ತಡಗಳ ನಡುವೆ ಅವರು ಬಿಡುವು ಮಾಡಿಕೊಂಡು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು. ಕಲೆಯನ್ನು ಗೌರವಿಸಿ ಒಬ್ಬ ಒಳ್ಳೆಯ ನಟನಾಗಿ ಅವರು ಮಿಂಚಿದ್ದು ಒಂದು ಒಳ್ಳೆಯ ಸಂಗತಿ.
ನನ್ನ ಅಂತರಂಗದ ಗೆಳೆಯ ಮತ್ತು ಫ್ಯಾಮಿಲಿ ಫ್ರೆಂಡ್.
————————————————————————–
ಅವರ ನಿಧನದ ಸುದ್ದಿಯನ್ನು ಇಂದು ಕೇಳಿದ ನಂತರ ನಾನು ನಿಜವಾಗಿಯೂ ಹೂತು ಹೋಗಿದ್ದೇನೆ! ಮಾತು ಬರುತ್ತಿಲ್ಲ! ಅದಕ್ಕೆ ಕಾರಣವಾದದ್ದು ಉದಯ ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಹೊಂದಿದ್ದ ಪ್ರೀತಿ. ನನ್ನ ಕುಟುಂಬದ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಇದುವರೆಗೆ ಉದಯ ಮತ್ತು ರೇಷ್ಮಾರು ಮಿಸ್ ಆದ ಉದಾರಣೆಯೇ ಇಲ್ಲ. ‘ಎನ್ನ ಬೊಕ್ಕ ರೇಷ್ಮಾನ ಗುರು ಆರ್ ‘ ಎಂದು ಬಾಯಿ ತುಂಬಾ ಹೊಗಳುತ್ತಾ ಆ ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಂಡ ಉದಯರ ಪ್ರೀತಿಯನ್ನು ನೆನೆದಾಗ ಕಣ್ಣು ತುಂಬಿ ಬರುತ್ತದೆ. ತಾನು ನಂಬಿದವರ ಪರವಾಗಿ ಯಾರನ್ನು ಎದುರು ಹಾಕಿಕೊಳ್ಳಲು ಉದಯರು ಹಿಂದೆ ಮುಂದೆ ನೋಡುತ್ತಲೆ ಇರಲಿಲ್ಲ! ಹಾಗೆ ಇನ್ನಾ ಗ್ರಾಮದ ಪರವಾಗಿ ಅವರ ಪ್ರೀತಿ ಕೊನೆಯವರೆಗೂ ಕಡಿಮೆ ಆಗಲಿಲ್ಲ.
ಎಲ್ಲಾದರೂ ಅವರ ಭಾಷಣವು ಚೆನ್ನಾಗಿ ಬಂದಾಗ ‘ಯಾನ್ ರಾಜೇಂದ್ರ ಮಾಷ್ಟ್ರೆನ ಶಿಷ್ಯೆ ‘ಎಂದು ಎದೆಯುಬ್ಬಿಸಿ ಹೇಳಿ ಹಿಂದೆ ಬರುತ್ತಿದ್ದ ಅವರನ್ನು ನಾನು ಹ್ಯಾಗೆ ತಾನೇ ಮರೆಯೋದು?
ನೂರಾರು ಹಕ್ಕಿಗಳಿಗೆ ಆಶ್ರಯ ಕೊಡುತ್ತಿದ್ದ ಒಂದು ಅಶ್ವತ್ಥದ ಮರ ಬುಡ ಸಹಿತ ಉರುಳಿ ಬಿದ್ದ ಫೀಲಿಂಗ್ ಇವತ್ತು! ನಾನು ಈ ಫೀಲಿಂಗಿನಿಂದ ಹೊರಬರಲು ತುಂಬಾ ದಿನ ಬೇಕು. ನನ್ನ ಹಲವು ತರಬೇತಿಗಳಲ್ಲಿ ಭಾಗವಹಿಸಿದ್ದ ಅವರ ಮಗಳು ಮನು ಮುಂದೆ ಅಪ್ಪನ ಹೆಸರನ್ನು ಎತ್ತರಕ್ಕೆ ಬೆಳೆಸುತ್ತಾಳೆ ಎಂಬ ನಿರೀಕ್ಷೆ ನನ್ನದು.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂಬ ಹಾರೈಕೆ.




















