Home Blog Page 21

ಕ್ರೈಸ್ಟ್ ಕಿಂಗ್: ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

0

 

ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಸೈಂಟ್ ಮೇರಿಸ್ ಪ.ಪೂ ಕಾಲೇಜು ಶಿರ್ವ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕಿಯರ ವಿಭಾಗದ ಫುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ರವೀನಾ ಕನ್ವರ್ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ಸುಪ್ರಭಾ ದ್ವಿತೀಯ ಸ್ಥಾನ ಪಡೆದರೆ ಬಾಲಕರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಮೊಹಮ್ಮದ್ ರಿಫಾಝ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಕರಾವಳಿ ಆಕರ್ಷಣೆ ಹೆಚ್ಚಿಸಲು 200 ಕೋಟಿ ರೂ.: ಸಿಎಂ ಸಿದ್ದರಾಮಯ್ಯ

0

 

ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದ್ದು, ಆಕರ್ಷಣೆಯನ್ನು ಹೆಚ್ಚಿಸಲು 200 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತೀಯ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟದ 55ನೇ ಸಮ್ಮೇಳನ ‘ಪ್ಯೂಚರ್ ಸ್ಟೇಪ್-2047’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ 320 ಕಿ.ಮೀ. ಕರಾವಳಿಯುದ್ದಕ್ಕೂ ಪ್ರಶಾಂತ ಕರಾವಳಿ ಪ್ರವಾಸೋದ್ಯಮ, ಪಶ್ಚಿಮ ಘಟ್ಟಗಳಲ್ಲಿನ ರೋಮಾಂಚಕ ಪಯಣ, ಬೆಂಗಳೂರಿನ ಐಷಾರಾಮಿ ಆತಿಥ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ನಮ್ಮ ಪ್ರವಾಸಿ ಮಿತ್ರ ಕಾರ್ಯಕ್ರಮದ ಮೂಲಕ 1 ಸಾವಿರ ಪ್ರವಾಸಿ ಸುಗಮಕಾರರಿಗೆ ತರಬೇತಿ ನೀಡುತ್ತಿದ್ದೇವೆ. 2026ರ ವೇಳೆಗೆ ಆತಿಥ್ಯ ವಲಯಕ್ಕೆ 50 ಸಾವಿರ ಯುವಕರನ್ನು ಕೌಶಲಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. 54 ಹೊಸ ಹೊಟೇಲ್‌ಗಳು ಮತ್ತು ರೆಸಾರ್ಟ್‌ಗಳಿಗೆ ಸಬ್ಸಿಡಿಗಳನ್ನು ಅನುಮೋದಿಸಿದ್ದೇವೆ. ರಸ್ತೆಬದಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಕ್ರೂಸ್ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅನ್ವೇಷಿಸಲಾಗುತ್ತಿದೆ ಎಂದರು.

ದೇಶದಲ್ಲೇ ನಂ.1 ಪ್ರವಾಸೋದ್ಯಮ ತಾಣ ಮಾಡುವ ಗುರಿ

ಕಳೆದ ಫೆಬ್ರವರಿಯಲ್ಲಿ 2024-29ರ ನಮ್ಮ ಹೊಸ ಕರ್ನಾಟಕ ಪ್ರವಾಸೋ ದ್ಯಮ ನೀತಿ ಅನಾವರಣಗೊಳಿಸಿದ್ದೇವೆ. 2029ರ ವೇಳೆಗೆ 1.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ 8 ಸಾವಿರ ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ಗುರಿ ಹೊಂದಿದ್ದೇವೆ. ಕರ್ನಾಟಕದಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆ 2024ರಲ್ಲಿ ಸ್ಥಿರವಾಗಿ 30.46 ಕೋಟಿಗೆ ಏರಿಕೆಯಾಗಿದೆ. ಆತಿಥ್ಯ ವಲಯ ನಮ್ಮ ಆರ್ಥಿಕತೆಗೆ ಸುಮಾರು 25 ಸಾವಿರ ಕೋಟಿ ರೂ.ಗಳ ಕೊಡುಗೆ ನೀಡುತ್ತದೆ. ಕಳೆದ ವರ್ಷವೊಂದರಲ್ಲೇ 500ಕ್ಕೂ ಹೆಚ್ಚು ಹೊಸ ‘ಹೋಂಸ್ಟೇಗಳು ಮತ್ತು 50 ಮಧ್ಯಮ ಪ್ರಮಾಣದ ಹೊಟೇಲ್‌ಗಳನ್ನು ಅನುಮೋದಿಸಿದ್ದೇವೆ ಎಂದು ಹೇಳಿದರು.

ಹೂಡಿಕೆಗೆ ಕರ್ನಾಟಕ ಉತ್ತಮ ತಾಣ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ನೀತಿ ತರಲು ಮುಂದಾಗಿದ್ದು, ಇದಕ್ಕೆ ಸೂಕ್ತ ರೂಪುರೇಷೆ ಸಿದ್ಧಪಡಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು. ಕರ್ನಾಟಕವು ಹೂಡಿಕೆಗೆ ಉತ್ತಮ ತಾಣವಾಗಿದೆ. ಪ್ರವಾಸೋದ್ಯಮಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಹೊಟೇಲ್ ನಿರ್ಮಾಣಕ್ಕೂ ಹೆಚ್ಚಿನ ಅನುಕೂಲವಿದೆ ಎಂದರು.

ಕ್ರೈಸ್ಟ್ ಕಿಂಗ್: ವಾಲಿಬಾಲ್ ಪಂದ್ಯಾಟದಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

 

ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲೆ ಹಾಗೂ ಪೂರ್ಣಪ್ರಜ್ಞಾ ಪ.ಪೂ ಕಾಲೇಜು ಅದಮಾರು, ಕಾಪು ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಮತ್ತು ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ತಂಡ ಪ್ರತಿನಿಧಿಸಿದ್ದ ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಶ್ರಾವ್ಯ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ತಂಡ ದ್ವಿತೀಯ ಸ್ಥಾನ ಪಡೆದಿದ್ದು ತಂಡವನ್ನು ಪ್ರತಿನಿಧಿಸಿದ್ದ ದ್ವಿತೀಯ ವಿಜ್ಞಾನ ವಿಭಾಗದ ಶಶಾಂಕ್ ಕೆ ಕುಮಾರ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

 

 

ಅಂತಾರಾಷ್ಟ್ರೀಯ ಕ್ರೀಡೆ – ಮರಿಯಾ ಗೊರಟ್ಟಿ ಹಿರ್ಗಾನಕ್ಕೆ ಚಿನ್ನದ ಗರಿ

0

 

ಕಾರ್ಕಳ ತಾಲೂಕಿನ ಜೋಡುರಸ್ತೆ ಸಾಯಿಪಂಚಮಿಯ ಪ್ರೀತಿ ಮಧುಕರ್ ಶೆಟ್ಟಿ ದಂಪತಿಗಳ ಮಗನಾದ ಮೇಧಾನ್ಶ್ ಮಧುಕರ್ ಶೆಟ್ಟಿ ಹೈದರಾಬಾದಿನಲ್ಲಿ ನಡೆದ ಓಪನ್ ಅಂತರಾಷ್ಟ್ರೀಯ ಮಟ್ಟದ ಟೆಕ್ವ್ಯಾಂಡೋ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕವನ್ನು ಪಡೆದು ಸಾಧನೆಗೈದಿದ್ದಾನೆ.

ಈತ ಮರಿಯಾ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆ ಹಿರ್ಗಾನ ಸಂಸ್ಥೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸಂಸ್ಥೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿದ್ದಾನೆ.

ಇವನ ಸಾಧನೆಗೆ ವಿದ್ಯಾ ಸಂಸ್ಥೆ, ಹಾಗೂ ಕುಕ್ಕುಂದೂರು ಬಂಟರ ಸಂಘ,ಹಾಗೂ ಊರಿನ ಸರ್ವರೂ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

ನಿಟ್ಟೆ: ಅಂತರರಾಷ್ಟ್ರೀಯ 3 ನಿಮಿಷಗಳ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ 2ನೇ ಬಹುಮಾನ ಪಡೆದ ನಿಟ್ಟೆ ಸಹಾಯಕ ಪ್ರಾಧ್ಯಾಪಕ

0

 

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ (ಎಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪರ್ವೀಜ್ ಷರೀಫ್ ಬಿ.ಜಿ., ಅವರು ಅಂತಾರಾಷ್ಟ್ರೀಯ ಮೈಕ್ರೋವೇವ್ ವಿಶ್ವ ನಾಯಕರ ಸಮ್ಮೇಳನ (ಐಎಂಡಬ್ಲ್ಯುಎಲ್ಸಿ) 2025 ರಲ್ಲಿ ಪಿಎಚ್ಡಿ ವಿಭಾಗದ ಅಡಿಯಲ್ಲಿ ಪ್ರತಿಷ್ಠಿತ ಮೂರು ನಿಮಿಷಗಳ ಥಿಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಕಠಿಣ ಮಾನದಂಡಗಳಿಗೆ ಹೆಸರುವಾಸಿಯಾದ ಈ ಸ್ಪರ್ಧೆಯು ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಸಂಕ್ಷಿಪ್ತ ಮತ್ತು ಆಕರ್ಷಕ ರೀತಿಯಲ್ಲಿ ಸಂಶೋಧನಾ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತದೆ. ಷರೀಫ್ ಅವರ ಅತ್ಯುತ್ತಮ ಪ್ರಸ್ತುತಿ ಕೌಶಲ್ಯ, ಚಿಂತನೆಯ ಸ್ಪಷ್ಟತೆ ಮತ್ತು ಸಂಶೋಧನಾ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಸಂವಹನ ಮಾಡುವ ಸಾಮರ್ಥ್ಯಕ್ಕಾಗಿ ಗುರುತಿಸಲಾಗಿದೆ. ಐಇಇ, ಎಂಟಿಟಿ-ಎಸ್, ಎಪಿಎಸ್ ಸೊಸೈಟಿಗಳು, ಐಇಇಇ ಕೇರಳ, ಐಇಇಇ ಬೆಂಗಳೂರು ವಿಭಾಗ ಮತ್ತು ಎಇಎಸ್ಎಸ್ ಬೆಂಗಳೂರು ಚಾಪ್ಟರ್ ನಡಿಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಮೈಕ್ರೊವೇವ್ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಸಂಶೋಧಕರು ಮತ್ತು ವೃತ್ತಿಪರರನ್ನು ಭಾಗವಹಿಸುವಂತಹ ವೇದಿಕೆಯಾಯಿತು.

 

ಪೋಕ್ಸೋ ಪ್ರಕರಣ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಕೇಸ್ ವಿಚಾರಣೆಗೆ ಅರ್ಹ: ಹೈಕೋರ್ಟ್ ಅಭಿಪ್ರಾಯ

0

 

ಪೋಕ್ಸೋ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ನ್ಯಾಯಾಲಯದ ವಿಚಾರಣೆಗೆ ಅರ್ಹವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣವನ್ನುವಿಚಾರಣೆಗೆ ಪರಿಗಣಿಸಿದ ಅಧೀನ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆಯ ವೇಳೆ ಯಡಿಯೂರಪ್ಪ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು, ಪ್ರಕರಣದ ಕಡತ ನೋಡಿದ್ದು, ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣ ಎನ್ನುವುದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಪೋಕ್ಸೋ ಪ್ರಕರಣದಲ್ಲಿ ಕೆಲವೊಮ್ಮ ಸಂತ್ರಸ್ತೆಯ ಹೇಳಿಕೆಯೊಂದೇ ಆರೋಪಿಗೆ ಶಿಕ್ಷೆ ವಿಧಿಸಲು ಸಾಕಾಗುತ್ತದೆ. ಸಂತ್ರಸ್ತೆಯ ತಾಯಿ ಏಕೆ ಯಡಿಯೂರಪ್ಪ ಮನೆಗೆ ಬಂದಿದ್ದರು? ಯಡಿಯೂರಪ್ಪ ಸಂತ್ರಸ್ತೆಗೆ ನೀಡಲು ಹಣ ನೀಡಲು ಮುಂದಾಗಿದ್ದೇಕೆ? ಎಂಬೆಲ್ಲಾ ಅಂಶಗಳು ವಿಚಾರಣೆಗೆ ಅರ್ಹವಾಗಿದೆ ಎಂದು ತಿಳಿಸಿದರು.

ಅಲ್ಲದೆ, ಪ್ರಕರಣ ರದ್ದತಿ ಆಗಿಯೇ ಆಗುತ್ತದೆ ಎಂಬ ಸ್ಪಷ್ಟತೆ ನಿಮಗೆ ಇದ್ದರೆ, ನಾವು ನಿಮ್ಮ ವಾದ ಆಲಿಸುತ್ತೇವೆ. ಈ ಪ್ರಕರಣಕ್ಕೆ ಕನಿಷ್ಠ ಐದು ದಿನಗಳ ಮಧ್ಯಾಹ್ನದ ಸಂಪೂರ್ಣ ಕಲಾಪ ವಿನಿಯೋಗವಾಗುತ್ತದೆ. ಇಲ್ಲಿ ಆರೋಪವೇ ಇಲ್ಲ ಎಂಬ ಪ್ರಕರಣ ಇದಾಗಿಲ್ಲ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ವಿರೋಧ ಪಕ್ಷದಲ್ಲಿದ್ದಾರೆ. ಅನಗತ್ಯವಾಗಿ ಕಿರುಕುಳ ನೀಡುತ್ತಾರೆ ಎಂಬ ಆತಂಕ ನಿಮಗಿದ್ದರೆ ಆ ಕಿರುಕುಳ ತಪ್ಪಿಸಿ, ನ್ಯಾಯಯುತ ವಿಚಾರಣೆಗೆ ಸಂಬಂಧಿಸಿದಂತೆ ರಕ್ಷಣಾತ್ಮಕ ಆದೇಶ ಮಾಡಬಹುದು.ಈ ಬಗ್ಗೆ ನಿಮ್ಮ ನಿಲುವು ಹೇಳಬಹುದು ಎಂದು ಯಡಿಯೂರಪ್ಪ ಅವರ ಪರ ವಕೀಲರಿಗೆ ಸೂಚಿಸಿದರು. ಇದಕ್ಕೆ ಯಡಿಯೂರಪ್ಪ ಪರ ವಕೀಲರು ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬುದು ಅರ್ಥವಾಗುತ್ತದೆ. ಈ ಕುರಿತು ಚರ್ಚಿಸಿ ತಿಳಿಸಲಾಗುವುದು ಎಂದು ನುಡಿದರು. ಈ ಹೇಳಿಕೆ ಪರಿಗಣಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.

 

 

ಧರ್ಮಸ್ಥಳದ ಬಂಗ್ಲೆ ಗುಡ್ಡೆಯ ಕಾಡಿನಲ್ಲಿ ಮರುಶೋಧ; ಹಲವು ಮಾನವ ಅವಶೇಷಗಳು ಸಿಕ್ಕಿರುವ ಬಗ್ಗೆ ಮಾಹಿತಿ

0

 

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಲ್ಲಿ ಬುಧವಾರ ಶೋಧ ಕಾರ್ಯವನ್ನು ಮತ್ತೊಮ್ಮೆ ಆರಂಭಿಸಿದೆ.

ಕಾಡಿನಲ್ಲಿ ಬುಧವಾರ ನಡೆದ ಶೋಧ ಕಾರ್ಯದಲ್ಲಿ ಒಂಬತ್ತು ಕಡೆ ಮೃತದೇಹಗಳ ಅವಶೇಷಗಳು ಸಿಕ್ಕಿವೆ. ಆರು ತಲೆಬುರುಡೆಗಳು ಸಿಕ್ಕಿವೆ ಎಂಬ ಮಾಹಿತಿ ಇದೆ. ಆದರೆ ಇದನ್ನು ಎಸ್‌ಐಟಿ ಖಚಿತಪಡಿಸಿಲ್ಲ.

‘ಶೋಧ ಕಾರ್ಯದ ವೇಳೆ ಮೃತದೇಹಗಳ ಅವಶೇಷಗಳು ಸಿಕ್ಕಿರುವುದು ನಿಜ. ಆದರೆ, ಇನ್ನೂ ಶೋಧ ಕಾರ್ಯ ಪೂರ್ಣಗೊಂಡಿಲ್ಲ. ಹಾಗಾಗಿ ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಎಸ್‌ಐಟಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮೃತದೇಹಗಳ ಅವಶೇಷ ಸಿಕ್ಕಿರುವ ಐದು ಸ್ಥಳಗಳ ಮಹಜರು ಪೂರ್ಣ ಗೊಳಿಸಿರುವ ಎಸ್‌ಐಟಿ, ಅಲ್ಲಿ ಸಿಕ್ಕ ಮೂಳೆಗಳು ಹಾಗೂ ತಲೆ ಬುರುಡೆಗಳನ್ನು ವಶಕ್ಕೆ ಪಡೆದಿದೆ. ಇನ್ನುಳಿದ ಕಡೆ ಮಹಜರು ಕಾರ್ಯ ಗುರುವಾರವೂ ಮುಂದುವರಿಯಲಿದೆ ಎಂದು ಗೊತ್ತಾಗಿದೆ.

ಎಸ್‌ಐಟಿಯ ಎಸ್.ಪಿ.ಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಶೋಧ ಕಾರ್ಯದ ನೇತೃತ್ವ ವಹಿಸಿದ್ದರು.

ಎಸ್‌ಐಟಿ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಒಳಗೊಂಡು 40ಕ್ಕೂ ಹೆಚ್ಚು ಮಂದಿ ಇದ್ದ ತಂಡವು ಶೋಧ ಕಾರ್ಯದಲ್ಲಿ ಭಾಗವಹಿಸಿತ್ತು. ಬೆಳಿಗ್ಗೆ 11.30ರ ಸುಮಾರಿಗೆ ತಂಡವು ಕಾಡಿನೊಳಗೆ ತೆರಳಿತು. ಮಧ್ಯಾಹ್ನದ 2.30ರ ಸುಮಾರಿಗೆ ಊಟದ ವಿರಾಮಕ್ಕಾಗಿ ಕಾಡಿನಿಂದ ಹೊರ ಬಂದ ತಂಡವು ಒಂದು ತಾಸಿನ ಬಳಿಕ ಮತ್ತೆ ಕಾಡಿನೊಳಗೆ ತೆರಳಿತು. ತಂಡವು ಕಾಡಿನಿಂದ ಹೊರ ಬರುವಾಗ ಸಂಜೆ 7 ಗಂಟೆ ದಾಟಿ, ಕತ್ತಲಾವರಿಸಿತ್ತು.
ಮೃತದೇಹಗಳ ಅವಶೇಷಗಳನ್ನು ಎಸ್‌ಐಟಿ ಸಿಬ್ಬಂದಿ ಏಳೆಂಟು ಬಕೆಟ್‌ಗಳಲ್ಲಿ ಹಾಗೂ ಗೋಣಿಚೀಲ ಗಳಲ್ಲಿ ತುಂಬಿಕೊಂಡು ಒಯ್ದದ್ದು ಕಂಡು ಬಂತು.
ಈ ಪ್ರಕರಣದ ಸಾಕ್ಷಿ ದೂರುದಾರ ಪೊಲೀಸರಿಗೆ ತಲೆಬುರುಡೆಯನ್ನು ಒಪ್ಪಿಸಿದ್ದ. ಆದರೆ, ಅದನ್ನು ಹೊರತೆಗೆದದ್ದು ‘ನಾನಲ್ಲ’ ಎಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು. ಆ ತಲೆಬುರುಡೆ ಇದ್ದ ಆ ಜಾಗವನ್ನು ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ತೋರಿಸಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಎಸ್‌ಐಟಿ ಅಧಿಕಾರಿಗಳು ವಿಠಲ ಗೌಡ ಅವರನ್ನು ಕೆಲ ದಿನಗಳ ಹಿಂದೆ ಕಾಡಿನ ಒಳಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ವೇಳೆ ನೆಲದ ಮೇಲೆಯೇ ಕೆಲವೆಡೆ ಮೃತದೇಹಗಳ ಅವಶೇಷ ಕಂಡು ಬಂದಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಕಾಡಿನಲ್ಲಿ ಬುರುಡೆ ಸಿಕ್ಕಿದ್ದ ಸ್ಥಳದ ಮಹಜರಿಗೆ ತೆರಳಿದ್ದಾಗ ಮತ್ತಷ್ಟು ಮೃತದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಕಾಣಿಸಿದ್ದು, ಎಸ್‌ಐಟಿ ಅಧಿಕಾರಿಗಳೂ ಅವುಗಳನ್ನು ನೋಡಿದ್ದಾರೆ’ ಎಂದು ವಿಠಲ ಗೌಡ ಅವರು ವಿಡಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚಿಸಿದ್ದ ಎಸ್‌ಐಟಿ ಅಧಿಕಾರಿಗಳು ಆ ಕಾಡಿನಲ್ಲಿ ಶೋಧ ಕಾರ್ಯ ನಡೆಸಲು ತೀರ್ಮಾನಿಸಿದ್ದರು.

ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ ಉತ್ತಮ ಗುಣಮಟ್ಟದ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ-ಶುಭದರಾವ್

0

ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ

ಉತ್ತಮ ಗುಣಮಟ್ಟದ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ

ಶುಭದರಾವ್

ರಾಜ್ಯದ ಅಭಿವೃದ್ಧಿ ಚಿಂತನೆಯೊಂದಿಗೆ ಪಕ್ಷ ಬೇದವಿಲ್ಲದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಬಿಡುಗಡೆಗೊಂಡ ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ ಎನ್ನುವುದು ಕಾಂಗ್ರೆಸ್ ಬಯಸುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ತಿಳಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಯ ಬದುಕಿಗೆ ಅಮೂಲ್ಯ ಕೊಡುಗೆಗನ್ನು ನೀಡುತ್ತಾ ಬಂದಿರುವ ರಾಜ್ಯ ಸರಕಾರವು ಇತರ ಅಭಿವೃದ್ಧಿ ಕೆಲಸಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸುವ ಬರವಸೆಯನ್ನು ನೀಡುವ ಮೂಲಕ ಅಭಿವೃದ್ಧಿ ಶೂನ್ಯ ಸರಕಾರ ಎಂದು ಅಪಪ್ರಚಾರ ಮಾಡುತ್ತಿದ್ದ ಬಿಜೆಪಿ ಶಾಸಕರಿಗೆ ತಕ್ಕ ಉತ್ತರ ನೀಡಿದಂತಾಗಿದೆ ಎಂದರು.

ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಜನರು ನೇರವಾಗಿ ಸವಲತ್ತುಗಳನ್ನು ಪಡೆಯುವುದರಿಂದ 40 ಶೇಕಡಾ ಕಮಿಷನ್ ಆರೋಪದ ಹೊತ್ತಿರುವ ಬಿಜೆಪಿ ಶಾಸಕರಿಗೆ ಬೇರೆ ದಾರಿ ಇಲ್ಲದೆ ಸರಕಾರವನ್ನು ದೂರುವುದೇ ಕೆಲಸವಾಗಿದೆ ಒಂದು ಕಡೆ ಸರಕಾರ ಅನುಧಾನ ಬಿಡುಗಡೆ ಮಾಡವುದಿಲ್ಲ ಎಂದು ಆರೋಪಿಸುವ ಶಾಸಕರು ಕ್ಷೇತ್ರದಲ್ಲಿ ನಿರಂತರ ಉದ್ಘಾಟನಾ ಕಾರ್ಯಕ್ರಮಗಳನ್ನು ನೆಡೆಸಿ ಇದು ನನ್ನ ವಿಶೇಷ ಪ್ರಯತ್ನ ಎಂದು ಬಿಂಬಿಸುವುದು ಹಾಸ್ಯಾಸ್ಪದವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅನುದಾನ ಎಷ್ಟು ಬಿಡುಗಡೆಯಾಗಿದೆ ಎನ್ನುವುದು ಮುಖ್ಯವಲ್ಲ ಅದನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಲಾಗಿದೆ ಎನ್ನುವುದೇ ಮುಖ್ಯ, ನಗರದ ರಥಬೀದಿಯ ಒಳಚರಂಡಿ ಕಾಮಗಾರಿ, ಪರಶುರಾಮ ಥೀಮ್ ಪಾರ್ಕ್, ನೀರಾವರಿ ಯೋಜನೆ, ಹೀಗೆ ಅನೇಕ ಕಾಮಗಾರಿಗಳು ಕಮಿಷನ್ ಆಸೆಗೆ ಬಲಿಯಾಗಿ ಕಳಪೆ ಕಾಮಗಾರಿ ಎಂದು ಸಾಬೀತಾಯಿತಾಗಿದೆ ಆದರೆ ಮುಂದೆ ನಡೆಯುವ ಕಾಮಗಾರಿಗಳೂ ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಎಚ್ಚರವಹಿಸುವಂತೆ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಸಾಮೂಹಿಕ ಅ*ಚಾರ ಆರೋಪ: ಶಾಸಕ ಮುನಿರತ್ನ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

0

 

ಸಾಮೂಹಿಕ ಅ*ಚಾರ ನಡೆಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ವಿಚಾರಣಾಧೀನ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿರುವುದನ್ನು ಪರಿಗಣಿಸಿರುವ ಹೈಕೋರ್ಟ್‌, ಎಸ್‌ಐಟಿಯು 42ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿರುವ ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಒಪ್ಪಿಕೊಂಡಿರುವುದರಿಂದ ಅರ್ಜಿಯು ವಿಚಾರಣಾ ಮಾನ್ಯತೆ ಕಳೆದುಕೊಂಡಿದ್ದು, ವಜಾಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.

ಬೆಂಗಳೂರಿನ ಯಶವಂತಪುರದ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಮುನಿರತ್ನ, ವಸಂತ ಕುಮಾರ್‌, ಚನ್ನಕೇಶವ್‌ ಮತ್ತು ಕಮಲ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳು, ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಸಿಒಡಿ-ಎಸ್‌ಐಟಿ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕರು, ಎಸ್‌ಐಟಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣದ ಸಂಬಂಧ ಬಿ ರಿಪೋರ್ಟ್‌ ಸಲ್ಲಿಸಿದ್ದು, ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.

ಆದರೆ, ಅರ್ಜಿದಾರರ ಪರ ವಕೀಲರು, ಬಿ ರಿಪೋರ್ಟ್‌ ಅನ್ನು ನ್ಯಾಯಾಲಯ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ವಿಶೇಷ ಸರ್ಕಾರಿ ಅಭಿಯೋಜಕರ ಹೇಳಿಕೆಯ ಅನ್ವಯ ಅರ್ಜಿ ವಜಾಗೊಳಿಸಬಹುದು ಎಂಬ ಮಾತನ್ನು ಪುರಸ್ಕರಿಸಿದ ನ್ಯಾಯಾಲಯ ಅರ್ಜಿಗಳನ್ನು ವಜಾಗೊಳಿಸಿತು.

ಬಾಸ್ಕೆಟ್ ಬಾಲ್ : ಕ್ರಿಯೇಟಿವ್ ವಿದ್ಯಾರ್ಥಿ ಹ್ಯಾನ್ಸೆಲ್ ಇಮ್ಯಾನುಯೆಲ್ ರಾಜ್ಯಮಟ್ಟಕ್ಕೆ ಆಯ್ಕೆ

0

 

ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯು 15 ಸೆಪ್ಟೆಂಬರ್ 2025ರಂದು ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯಲ್ಲಿ ಜರುಗಿತು. ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿ ಈ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮುಂಬರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಇವರು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಯ ಸಾಧನೆಯನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವೃಂದದವರು ಅಭಿನಂದಿಸಿ, ಶುಭಹಾರೈಸಿದ್ದಾರೆ.