Home Blog Page 70

ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಕಾರ್ಕಳ ಬಿಜೆಪಿ ಪ್ರತಿಭಟನೆ

0

ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಗೆ ಬಳಸಿತ್ತೇ ವಿನಹ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಪದೇಪದೇ ತಿದ್ದುಪಡಿಗೊಳಿಸಿ ಅವರನ್ನು ಅವಮಾನಿಸಿತ್ತು-ಮಣಿರಾಜ್ ಶೆಟ್ಟಿ

ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಸರ್ಕಾರಿ ಗುತ್ತಿಗೆಯಲ್ಲಿ ಶೇಕಡಾ 4 ಮೀಸಲಾತಿ ನೀಡಿದ್ದನ್ನು ಸಮರ್ಥೀಸುತ್ತಾ ಅಗತ್ಯ ಬಿದ್ದರೆ ಸಂವಿಧಾನ ಬದಲಿಸಬೇಕಾಗಬಹುದು ಎಂಬ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಕಾರ್ಕಳ ತಾಲ್ಲೂಕು ಆಫೀಸ್‌ ಸರ್ಕಲ್ ಬಳಿ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಕಾರ್ಕಳ ಬಿಜೆಪಿಯ ಮಂಡಲಾದ್ಯಕ್ಷ ನವೀನ್ ನಾಯಕ್ ನೇತೃತ್ವದಲ್ಲಿ ನಡೆಯಿತು. ನವೀನ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕಾದವರಿಂದ ಸಂವಿಧಾನಕ್ಕೆ ಅಪಮಾನವಾಗಿದೆ ಎಂದರು.

ಸಭೆಯಲ್ಲಿ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ ಸಂವಿಧಾನದ ಪುಸ್ತಕ ಹಿಡಿದು ಸಂಸತ್ ಕಲಾಪದಲ್ಲಿ ಭಾಗವಹಿಸಿದ ಕಾಂಗ್ರೆಸ್ಸಿನ ನಾಯಕರುಗಳಿಗೆ ಸಂವಿಧಾನದಲ್ಲಿ ಎಷ್ಟು ಪರಿಚ್ಛೇದಗಳಿವೆ ಗೊತ್ತಿದೆಯೇ.? ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ಸ್ ಅಂಬೇಡ್ಕರ್ ಹೆಸರು ಬಳಸುತ್ತಿದ್ದು ಅವರಿಗೆ ಯಾವುದೇ ಗೌರವ ನೀಡಿಲ್ಲ. ಷಹಭಾನು ಕೇಸ್ ನಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನೂರ್ಜಿತಗೊಳಿಸಲಾಯಿತು. ಅಂಬೇಡ್ಕರ್ ಸಂಸತ್ ಪ್ರವೇಶಿಸಲು ಕಾಂಗ್ರೆಸ್ಸ್ ಅಡ್ಡಗಾಲು ಹಾಕಿತ್ತು ಎಂದರು.

ಭಾರತೀಯ ಜನತಾಪಾರ್ಟಿಯ ವಕ್ತಾರ ರವೀಂದ್ರ ಮೊಯ್ಲಿ ಮಾತನಾಡಿ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಯವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ. 1952 ರ ಲಾಗಾಯ್ತು ಸುಮಾರು 80 ಸಲ ಸಂವಿಧಾನ ತಿದ್ದುಪಡಿಯು ಕಾಂಗ್ರೆಸ್ಸ್ ನೇತೃತ್ವದ ಸರ್ಕಾರದ ಅವಧಿಯಲ್ಲಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಕಾಂಗ್ರೆಸ್ ಸಂವಿಧಾನ ಶಿಲ್ಪಿ ಮಹಾನ್ ಮೇಧಾವಿ ಬಾಬ ಸಾಹೇಬ್ ಅಂಬೇಡ್ಕರ್ ರವರನ್ನೇ 1952 ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ಸಿನಿಂದ ಜನತೆ ಏನನ್ನು ನಿರೀಕ್ಷಿಸಬಹುದು ಎಂದರು.

ಪ್ರತಿಭಟನಾ ಸಭೆಯಲ್ಲಿ ತಿಳಿಸಿದರು ಕ್ಷೇತ್ರಾಧ್ಯಕ್ಷರಾದ ನವೀನ್‌ ನಾಯಕ್‌, ಜಿಲ್ಲಾ ಉಪಾಧ್ಯಕ್ಷರುಗಳಾದ ಮಹಾವೀರ ಹೆಗ್ಡೆ, ಉದಯ ಕೋಟ್ಯಾನ್‌, ಜಯರಾಮ್‌ ಸಾಲ್ಯಾನ್‌, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್‌ ಬೋಳ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್‌ ಶೆಟ್ಟಿ, ತಾಲೂಕು ಯುವಮೋರ್ಚಾ ಅಧ್ಯಕ್ಷರಾದ ರಾಕೇಶ್‌ ಶೆಟ್ಟಿ, ಪ್ರಕಾಶ್‌ ರಾವ್‌, ಸುಧಾಕರ್‌ ಹೆಗ್ಡೆ ಹೆಬ್ರಿ, ಲಕ್ಷ್ಮೀನಾರಯಣ್‌ ಹೆಬ್ರಿ, ಸಮೃದ್ಧಿ ಪ್ರಕಾಶ್‌, ಯೋಗಿಶ್‌ ನಾಯಕ್‌, ಪ್ರಸಾದ್ ಐಸಿರಾ ಹಾಗೂ ಪುರಸಭಾ ಸದಸ್ಯರುಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಟ್ಟೆಯಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

0

ನಿಟ್ಟೆಯಲ್ಲಿ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಸ್ಪಿಕ್-ಮೆಕೆ ಮಂಗಳೂರು ಚಾಪ್ಟರ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ ಸಹಯೋಗದೊಂದಿಗೆ ಮಾರ್ಚ್ 25 ರಂದು ಮನಮೋಹಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಂಗೀತ ಕಾರ್ಯಕ್ರಮವು ವಿದ್ವಾನ್ ವಿವೇಕ್ ಸದಾಶಿವಂ ಅವರ ಅಸಾಧಾರಣ ಗಾಯನ ಪ್ರದರ್ಶನವನ್ನು ಒಳಗೊಂಡಿತ್ತು, ಅವರ ಶ್ರೀಮಂತ ಮತ್ತು ಅಭಿವ್ಯಕ್ತಿಶೀಲ ಗಾಯನವು ಪ್ರೇಕ್ಷಕರನ್ನು ಆಕರ್ಷಿಸಿತು. ಅವರೊಂದಿಗೆ ಪಿಟೀಲು ವಾದನದಲ್ಲಿ ಪ್ರತಿಭಾನ್ವಿತ ವಿದ್ವಾನ್ ಕೇಶವ್ ಮೋಹನ್ ಕುಮಾರ್ ಇದ್ದರು. ಮೃದಂಗದಲ್ಲಿ ವಿದ್ವಾನ್ ಅದಮ್ಯ ರಮಾನಂದ ಅವರು ಲಯಬದ್ಧ ಪ್ರತಿಭೆಯನ್ನು ಒದಗಿಸಿ ಇಡೀ ಪ್ರದರ್ಶನವನ್ನು ಆಹ್ಲಾದಕರವಾಗಿಸಿದರು.

ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಾಂಗ್ ಯೂತ್ (ಸ್ಪಿಕ್ ಮೆಕೆ) ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಮತ್ತು ಪ್ರವಾಸೋದ್ಯಮ ಸಚಿವಾಲಯದ ಬೆಂಬಲದೊಂದಿಗೆ, ಸಂಗೀತ ಕಚೇರಿ ಭಾಗವಹಿಸುವವರಿಗೆ ಸ್ಪೂರ್ತಿದಾಯಕ ಸಂಗೀತ ಅನುಭವವನ್ನು ನೀಡಿತು.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮಂತ್ರಮುಗ್ಧಗೊಳಿಸುವ ಪ್ರದರ್ಶನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಎರಡನೇ ಬಾರಿ ಉಚ್ಛಾಟನೆ

0

ಬಸನಗೌಡ ಪಾಟೀಲ್ ಯತ್ನಾಳ್ ಎರಡನೇ ಬಾರಿ ಬಿಜೆಪಿಯಿಂದ ಉಚ್ಛಾಟನೆಯಾಗಿದ್ದಾರೆ.

ಈ ಮೊದಲು 2015ರಲ್ಲಿ ವಿಜಯಪುರದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.

ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆರೋಪದ ಮೇಲೆ ಪಕ್ಷ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿತ್ತು. ನಂತರ ಉಚ್ಛಾಟನೆಯನ್ನು ಹಿಂಪಡೆದ ಬಿಜೆಪಿ 2018ರ ಚುನಾವಣೆಯಲ್ಲಿ ಯತ್ನಾಳ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಈ ಚುನಾವಣೆಯಲ್ಲಿ ಯತ್ನಾಳ್‌ 6 ಸಾವಿರ ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಜಯಗಳಿದ್ದರು.

ಈಗ ಮತ್ತೆ 6 ವರ್ಷಗಳ ಕಾಲ ಬಿಜೆಪಿ ಯತ್ನಾಳ್‌ ಅವರನ್ನು ಉಚ್ಛಾಟನೆ ಮಾಡಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ 6 ವರ್ಷ ಉಚ್ಛಾಟನೆ ಮಾಡಿ ಆದೇಶ ಪ್ರಕಟಿಸಿದೆ.

ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಆಗಾಗ ವಿಧಾನಸಭೆಯಲ್ಲೇ ಸರ್ಕಾರದ ವಿರುದ್ಧ ಯತ್ನಾಳ್‌ ಅಸಮಾಧಾನ ಹೊರಹಾಕುತ್ತಿದ್ದರು. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ನೇರಾನೇರವಾಗಿ ವಾಗ್ದಾಳಿ ನಡೆಸುತ್ತಿದ್ದರು. ಈ ಸಂಬಂಧ ಶಿಸ್ತು ಸಮಿತಿ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ಗೆ ಸಮರ್ಪಕವಾದ ಉತ್ತರ ನೀಡದ ಕಾರಣ ಈಗ ಯತ್ನಾಳ್‌ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ.

2023ರ ಚುನಾವಣೆಯಲ್ಲಿ ಯತ್ನಾಳ್‌ 8,233 ಮತಗಳಿಂದ ಜಯಗಳಿಸಿದ್ದರು. ಯತ್ನಾಳ್‌ 94,211 ಮತಗಳನ್ನು ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಬ್ದುಲ್‌ ಹಮೀದ್‌ 85,978 ಮತಗಳನ್ನು ಪಡೆದಿದ್ದರು.

ವಿಕಸಿತ ಭಾರತ ಯೂತ್ ಪಾರ್ಲಿಮೆಂಟ್ 2025 – ಮನು ಶೆಟ್ಟಿ ಆಯ್ಕೆ.

0

ವಿಕಸಿತ ಭಾರತ ಯೂತ್ ಪಾರ್ಲಿಮೆಂಟ್ 2025-ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಮನು ಶೆಟ್ಟಿ ಆಯ್ಕೆ.

ಭಾರತ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಯುವ ಪಾರ್ಲಿಮೆಂಟ್ ಸ್ಪರ್ಧೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಾರ್ಚ್ 22 ಮತ್ತು 23ರಂದು ಮಂಗಳೂರು ಕೊಡಗು ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಮಟ್ಟದ ಸ್ಪರ್ಧೆಯು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡಿಯಿತು. ಮೂರು ಜಿಲ್ಲೆಗಳ ಸುಮಾರು 150 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮವಾಗಿ 10 ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಮಾರ್ಚ್ 27ರಂದು ರಾಜ್ಯಮಟ್ಟದ ವಿಕಸಿತ ಭಾರತ ಯುತ್ ಪಾರ್ಲಿಮೆಂಟ್- 2025 ಕಾರ್ಯಕ್ರಮವು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯಲಿದೆ.

ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ.ಎಂ ವೆನಿಸ್ಸಾ ಎ.ಸಿ ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು ನೆಹರು ಯುವ ಕೇಂದ್ರದ ನೋಡಲ್ ಅಧಿಕಾರಿ ಲೋಕೇಶ್ ಕುಮಾರ್ ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜಕರಾದ ಡಾ. ಶೇಷಪ್ಪ ಅಮೀನ್ ಮತ್ತು ಸೈಂಟ್ ಆಗ್ನೆಸ್ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ ಉದಯ್ ಕುಮಾರ್ ಉಪಸ್ಥಿತರಿದ್ದರು.

ಮುಡಾರು ಗ್ರಾಮ ಪಂಚಾಯತ್ ದ್ವಿತೀಯ ಗ್ರಾಮಸಭೆ

0

ಮುಡಾರು ಗ್ರಾಮ ಪಂಚಾಯತ್ ದ್ವಿತೀಯ ಗ್ರಾಮಸಭೆ

ಬಜಗೋಳಿ ಮುಡಾರು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮ ಸಭೆ ದಿನಾಂಕ 24.03.2025 ರಂದು ಗ್ರಾಮ ಪಂಚಾಯತ್ ನ ವಿ.ಎಸ್. ಆಚಾರ್ಯ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಶ್ರೀಮತಿ ಶೃತಿ ಡಿ ಅತಿಕಾರಿ ಇವರು ವಹಿಸಿದರು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡಲಾಯಿತು.ಗ್ರಾಮ ಪಂಚಾಯತ್ ನ ಶೇಕಡಾ 25 ನಿಧಿಯ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ವೈಧ್ಯಕೀಯ ಸಹಾಯಧನ ಶೈಕ್ಷಣಿಕ ಸಹಾಯಧನ, ಹಳೆ ಮನೆ ರಿಪೇರಿ, ಅಂಗವಿಕಲರ ವೈಧ್ಯಕೀಯ ಸಹಾಯಧನ ಚೆಕ್ ವಿತರಿಸಲಾಯಿತು.

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸ್ಕೂಲ್ ಬ್ಯಾಗನ್ನು ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಮುಡಾರು ಗ್ರಾಮದ ಅಂಬೇಡ್ಕರ್ ಸಮುದಾಯ ಭವನಕ್ಕೆ ಮತ್ತು ಕೊರಗರ ಸಮುದಾಯ ಭವನಕ್ಕೆ ಬೇಕಾದ ಕುರ್ಚಿ, ಫ್ಯಾನ್, ಲೈಟ್ಸ್, ಸಿಂಟೆಕ್ಸ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಯಿತು.ವಿಶೇಷ ಸಾಧನೆಗಾಗಿ ಸೃಜನಾ ಚಿಪ್ಲೂಣ್ಕರ್ ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಶೃತಿ ಡಿ ಅತಿಕಾರಿಯವರು ಗ್ರಾಮ ಪಂಚಾಯತ್ ಜನ ಸಾಮಾನ್ಯರ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸುತ್ತ ಜನಪರವಾಗಿ ಅತ್ಯಂತ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.ಗ್ರಾಮ ಸಭೆಯಲ್ಲಿ ಬಂದ ಬೇಡಿಕೆಯನ್ನು ಸಾಧ್ಯವಾಗುವ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಭೆಯಲ್ಲಿ ನೋಡೆಲ್ ಅಧಿಕಾರಿಯವರಾದ ಸಿದ್ದಪ್ಪ ತುಡುಬಿನ, ಅಧ್ಯಕ್ಷರಾದ ಶೃತಿ ಡಿ ಅತಿಕಾರಿ, ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾಲತಿ ನಾಯ್ಕ್, ಸಂತೋಷ್ ಪೂಜಾರಿ, ಸದಸ್ಯರಾದ ಸುರೇಶ್ ಶೆಟ್ಟಿ, ಶಿವ ಪ್ರಸಾದ್, ಪ್ರಶಾಂತ್ ಕುಮಾರ್, ಸರಸ್ವತಿ ಆಚಾರ್ಯ, ಅಮೃತ ಪ್ರಭು, ವಿನಯ ಡಿ ಬಂಗೇರ, ಹರೀಶ್ ಪೂಜಾರಿ, ರಜತ್ ಆರ್ ಮೋಹನ್, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಸ್ ಸ್ವಾಗತಿಸಿ ನಿರ್ವಹಿಸಿದರು, ಕಾರ್ಯದರ್ಶಿ ಜಯಕರ ಧನ್ಯವಾದವಿತ್ತರು

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಾಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ

0

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಾಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ

ನಿಟ್ಟೆ: ಮಾನವನ ಶಿಸ್ತಿನ ಬದುಕಿಗೆ ವಿ‌ದ್ಯಾರ್ಥಿ ದೆಸೆಯಲ್ಲಿ ಕ್ರೀಡೆಯಲ್ಲಿ ತೊಡಗುವುದು ಅತಿಮುಖ್ಯ ಎಂದು ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಡೈರಿಕ್ಟರ್‌ ಡಾ. ಸುಧೀರ್‌ ಎಂ ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಬಿ.ಸಿ ಅಳ್ವಾ ಕ್ರೀಡಾ ಸಂಕೀರ್ಣದಲ್ಲಿ ನಡೆದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 39ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉಪಯೋಗಗಳು ಹಲವು. ಆರೋಗ್ಯವೇ ಭಾಗ್ಯ ಎಂದು ನಂಬಿದವರಿಗೆ ಕ್ರೀಡೆ ಮತ್ತು ನಿಯಮಿತ ವ್ಯಾಯಾಮ ಬಹಳಷ್ಟು ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ. ರಮೇಶ ಐ ಮಿತ್ತಾಂತಾಯ ಮಾತನಾಡಿ ಕ್ರೀಡೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರುವುದಾದರೆ ವಿದ್ಯಾಲಯದ ವತಿಯಿಂದ ಪೂರ್ಣ ಬೆಂಬಲವಿದೆ. ನಿಟ್ಟೆ ವಿದ್ಯಾಸಂಸ್ಥೆಯು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಾ ಬರುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.

ಸಂಸ್ಥೆಯ ಪ್ರಾಂಶುಪಾಲ ಡಾ. ನಿರಂಜನ್‌ ಎನ್‌ ಚಿಪ್ಲೂಣ್ಕರ್‌, ಡೈರೆಕ್ಟರ್‌ ಪ್ರೋ. ಯೋಗಿಶ್‌ ಹೆಗ್ಡೆ, ಪರೀಕ್ಷಾ ಕಂಟ್ರೋಲರ್ ಡಾ. ಸುಬ್ರಮಣ್ಯ ಭಟ್‌, ವಿಭಾಗ ಮುಖ್ಯಸ್ಥರು, ಉಪನ್ಯಾಸಕ ವೃಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ. ಗಣೇಶ ಪೂಜಾರಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಅತಿಥಿಯನ್ನು ಪರಿಚಯಿಸಿದರು. ಸೈಬರ್ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಡಾ. ರೋಶನ್‌ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಲಹೆಗಾರ ಶ್ಯಾಮ್ ಸುಂದರ್ ವಂದಿಸಿದರು.

ಸುಮಾರು 3500 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದ ಪಥ ಸಂಚಲನ ಹಾಗೂ ಡಾ.ಎನ್.ಎಸ್.ಎ.ಎಂ ಆಂಗ್ಲ ಮಾಧ್ಯಮ ಶಾಲಾ ಬ್ಯಾಂಡ್‌ ಸೆಟ್‌ ಪಥಸಂಚಲನದೊಂದಿಗೆ ಆಕರ್ಷಣೀಯವಾಗಿತ್ತು.

ಕಾರ್ಕಳ:ಅಕ್ರಮ ಮರಳು ಸಾಗಾಟ

0

ಕಾರ್ಕಳ:ಅಕ್ರಮ ಮರಳು ಸಾಗಾಟ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಕಾರ್ಕಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಕಳ ನಗರ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಸಿಬ್ಬಂದಿಯವರೊಂದಿಗೆ ಕಾರ್ಕಳ ಕಾಬೆಟ್ಟು ಎಸಿಸಿ ಸಿಮೆಂಟ್ ಗೋಡೌನ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪರ ಲಾರಿಯಲ್ಲಿ ಲಾರಿಯ ಚಾಲಕ ಹಾಗೂ ಮಾಲೀಕ ಸೇರಿಕೊಂಡು ಅಕ್ರಮವಾಗಿ 2 ಯುನಿಟ್ ಮರಳನ್ನು ಪುಲ್ಕೆರಿ ಕಡೆಯಿಂದ ಜೋಡು ರಸ್ತೆಯ ಕಡೆಗೆ ಸಾಗಿಸುತ್ತಿದ್ದು, ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕುಕ್ಕೆ ಲಿಂಗ ವಂಶಸ್ಥರಾದ ಮಲೆಕುಡಿಯ ಜನಾಂಗದವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಶಾಶ್ವತ ಮೂಲನಿವಾಸಿ ಸ್ಥಾನಮಾನ ನೀಡುವಂತೆ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಆಗ್ರಹ.

0

ಕುಕ್ಕೆ ಲಿಂಗ ವಂಶಸ್ಥರಾದ ಮಲೆಕುಡಿಯ ಜನಾಂಗದವರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಶಾಶ್ವತ ಮೂಲನಿವಾಸಿ ಸ್ಥಾನಮಾನ ನೀಡುವಂತೆ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಆಗ್ರಹ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಲೆಕುಡಿಯ ಸಮುದಾಯಕ್ಕೆ ಅವಿನಾಭಾವ ಸಂಬಂಧ ಇದೆ. ಕುಕ್ಕೆ ಶ್ರೀ ಕ್ಷೇತ್ರದ ಸ್ಥಾಪನೆಗೆ ಮೂಲ ಕಾರಣೀಭೂತರಾದ ಕುಕ್ಕೆ ಲಿಂಗ ದೈವಿಕ ಪುರುಷರು ಮಲೆಕುಡಿಯ ಜನಾಂಗಕ್ಕೆ ಸೇರಿದವರು. ವ್ಯಪಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಸ್ಥಾನ ಒದಗಿಸುವ ಪರಂಪರೆ ಇದೆ. ಆದರೆ ಹೊಸ ವ್ಯವಸ್ಥಾಪನಾ ಸಮಿತಿಯಲ್ಲಿ ಸಮುದಾಯದ ಪ್ರತಿನಿಧಿಯವರಿಗೆ ಸ್ಥಾನ ಕಲ್ಪಿಸಲಾಗಿಲ್ಲ ಎಂದು ಮಾಹಿತಿ ಇದೆ. ಸರ್ಕಾರ ಕೂಡಲೇ ಮರುಪರಿಶೀಲನೆ ಮಾಡಿ ಕ್ಷೇತ್ರದಲ್ಲಿ ಪಾರಂಪರಿಕ ಹಿನ್ನೆಲೆಯಿರುವ ಮೂಲನಿವಾಸಿ ಸಮುದಾಯಕ್ಕೆ ವ್ಯವಸ್ಥಾಪನಾ ಸಮಿತಿಯಲ್ಲಿ ಶಾಶ್ವತ ಪ್ರಾತಿನಿಧ್ಯ ನೀಡುವಂತೆ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಗಂಗಾಧರ ಗೌಡ ಇವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯಲ್ಲಿ ಮಲೆ ಕುಡಿಯರ ಸೇರ್ಪಡೆಯಾಗಬೇಕು-ಶ್ರೀಧರ ಗೌಡ ಈದು

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯಲ್ಲಿ ಮಲೆ ಕುಡಿಯರ ಸೇರ್ಪಡೆಯಾಗಬೇಕು-ಶ್ರೀಧರ ಗೌಡ ಈದು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪ್ರಸಿದ್ಧ ಕ್ಷೇತ್ರವಾಗಿ ನಾಡಿನಲ್ಲೆಡೆ ಚಿರಪರಿಚಿತವಾಗಿದೆ.ನಾಗದೇವರ ಮೂಲ ಆರಾಧನಾ ಸ್ಥಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳಾಗಿರುವ ಮಲೆಕುಡಿಯ ಸಮುದಾಯಕ್ಕೆ ಸೇರಿರುವ ದೇವಸ್ಥಾನವೆಂಬ ಹಿನ್ನೆಲೆಯನ್ನು ಹೊಂದಿದೆ.ನಮ್ಮ ಮಲೆಕುಡಿಯ ವಂಶಸ್ಥರಾದ ಕುಕ್ಕೆ ಮತ್ತು ಲಿಂಗ ಅನ್ನುವ ಇಬ್ಬರು ದೈವೀ ಪುರುಷರು ಶ್ರೀ ಕ್ಷೇತ್ರದ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ.

 

ಕಾಲ ನಂತರದಲ್ಲಿ ದೇವಸ್ಥಾನವು ಸರಕಾರದ ಆಡಳಿತ ಕೊಳಪಟ್ಟು ಉತ್ತಮ ರೀತಿಯಲ್ಲಿ ನಿರ್ವಹಣೆಗೊಂಡು ಮುನ್ನಡೆಯುತ್ತಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ನಂಟು ಇರುವುದನ್ನು ನಾವು ಕಾಣಬಹುದು. ಪೂಜಾ ಕೈಂಕರಗಳು ನೆರವೇರುವಲ್ಲಿ ಮಲೆಕುಡಿಯರ ಪಾತ್ರ ಮಹತ್ವದ್ದಾಗಿದೆ.

 

ಶ್ರೀ ಕ್ಷೇತ್ರದ ದೇವರ ಪರಿಚಾರಕ ವೃತ್ತಿಯಿಂದ (ಬುಟ್ಟಿಚಾಕರಿ) ಉತ್ಸವ ಕಾರ್ಯಗಳು, ಸಾಂಗೋಪವಾಗಿ ನೆರವೇರಲು ಮಲೆಕುಡಿಯರು ನಾನಾ ರೀತಿಯಲ್ಲಿ ಶ್ರಮಪಡುತ್ತಾರೆ. ದೈವದ ನೇಮೋತ್ಸವ ಕಾರ್ಯಕ್ರಮದಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದೆ. ಅಷ್ಟಮಿಯಂದು ಶ್ರೀ ದೇವಳದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವವನ್ನು ನೆರವೇರಿಸುವುದೇ ನಮ್ಮ ಸಮುದಾಯದವರು.

 

ಮುಖ್ಯವಾಗಿ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ದೇವರ ಬ್ರಹ್ಮ ರಥವನ್ನು ಕಟ್ಟುವ ಕಾರ್ಯವನ್ನು ಮಲೆ ಕುಡಿಯರೆ ನಿರ್ವಹಿಸುತ್ತಿದ್ದು, ಈ ಕುರಿತಾದ ಕಟ್ಟು ಕಟ್ಟಲೆಗಳನ್ನು ಅನೂಚಾನವಾಗಿ ನಮ್ಮ ಸಮುದಾಯದವರು ಪಾಲಿಸಿಕೊಂಡು ಬಂದಿರುತ್ತಾರೆ.

ಧಾರ್ಮಿಕ ವಿಧಿ ವಿಧಾನವಾದ ಅಷ್ಟಮಂಗಳದಲ್ಲಿಯೂ ಈ ಸಂಬಂಧವಾಗಿ ಅನೇಕ ವಿಚಾರಗಳು ಪ್ರಸ್ತಾಪವಾಗಿದ್ದು ಮೂಲ ನಿವಾಸಿಗಳಾದ ಮಲೆಕುಡಿಯರು ಮತ್ತು ದೇವಸ್ಥಾನಕ್ಕೆ ಪರಂಪರಾಗತವಾಗಿ ಇರುವ ಭಾಂದವ್ಯವನ್ನು ತಿಳಿಸುತ್ತದೆ. ಶ್ರೀದೇವರ ಸೇವೆ ಅಲ್ಲದೆ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಮಲೆಕುಡಿಯರು ದುಡಿಯುತ್ತಿದ್ದಾರೆ. ಈ ಎಲ್ಲಾ ಕಾರಣದ ಹಿನ್ನೆಲೆಯಿಂದಾಗಿ ಇದುವರೆಗಿನ ಕಾರ್ಯ ನಿರ್ವಹಿಸುತ್ತಿದ್ದ ಸಮಿತಿಗಳಲ್ಲಿ ಮಲೆ ಕುಡಿಯರಿಗೆ ಕನಿಷ್ಠ ಒಂದು ಸದಸ್ಯತ್ವ ಸ್ಥಾನವನ್ನು ಕಾಯ್ದಿರಿಸುವುದರ ಜೊತೆಗೆ ಮೀಸಲಾಗಿಡ ಲಾಗಿತ್ತು ಎಂಬುದು ಗಮನಿಸಬೇಕಾದ ಅಂಶ.

ಆದರೆ ಈ ಸಾಲಿನ ಹೊಸ ಸಮಿತಿಯಲ್ಲಿ ಸಮುದಾಯದ ಮಂದಿಯ ಹೆಸರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿ ಇದ್ದು. ಸರ್ಕಾರ ಮತ್ತೊಮ್ಮೆ ಮರು ಪರಿಶೀಲನೆ ಮಾಡಿ ಮಲೆಕುಡಿಯರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಅಂತಿಮಗೊಳಿಸಿ ವ್ಯವಸ್ಥಾಪನ ಸಮಿತಿಯನ್ನು ಘೋಷಣೆ ಮಾಡಬೇಕು.

ಸರಕಾರ ಪದೇ ಪದೇ ಅರಣ್ಯಾಧಾರಿತ ಬುಡಕಟ್ಟು ಜನರ, ಆದಿವಾಸಿಗಳ ಪರ ಎಂಬುದಾಗಿ ಹೇಳುತ್ತಿರುವಾಗ ಈ ವಿಚಾರದಲ್ಲಿ ಕೂಡ ಅರಣ್ಯ ಮೂಲ ಬುಡಕಟ್ಟು ಜನಾಂಗವಾದ ಮಲೆಕುಡಿಯರಿಗೆ ವ್ಯವಸ್ಥಾಪನ ಸಮಿತಿಯಲ್ಲಿ ಒಂದು ಸ್ಥಾನವನ್ನು ಕೊಟ್ಟು ನ್ಯಾಯವನ್ನು ಒದಗಿಸಿ ಕೊಡಬೇಕಾಗಿದೆ.

ಪ್ರಮುಖವಾಗಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಲೆಕುಡಿಯರಿಲ್ಲದ ಸಮಿತಿಯು ಪೂರ್ಣ ಪ್ರಮಾಣದ ಸಮಿತಿಯಾಗಿರಲು ಸಾಧ್ಯವಿಲ್ಲ. ಹಾಗಾಗಿ ಕಾನೂನು ಹೋರಾಟಕ್ಕೆ ಅವಕಾಶ ಮಾಡಿಕೊಡದೆ ದೊಡ್ಡ ಮಟ್ಟದಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಜನಾಂಗದವರಿಗೆ ಅವಕಾಶ ಮಾಡಿಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕಾಗಿ ಸಮಸ್ತ ಮಲೆ ಕುಡಿಯರ ಪರವಾಗಿ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

 

ಕ್ರೈಸ್ಟ್ ಕಿಂಗ್: ಪದವಿಪೂರ್ವ ವಿಭಾಗದ ಪ್ರತಿಭಾ ಪುರಸ್ಕಾರ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಮೂಲಭೂತ ಮಂತ್ರವಾಗಬೇಕು: ನಿವೃತ್ತ ಸಿಎ ಕಮಲಾಕ್ಷ ಕಾಮತ್

0

ಕ್ರೈಸ್ಟ್ ಕಿಂಗ್: ಪದವಿಪೂರ್ವ ವಿಭಾಗದ ಪ್ರತಿಭಾ ಪುರಸ್ಕಾರ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ

ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಮೂಲಭೂತ ಮಂತ್ರವಾಗಬೇಕು: ನಿವೃತ್ತ ಸಿಎ ಕಮಲಾಕ್ಷ ಕಾಮತ್

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಸಿಎ ಕಮಲಾಕ್ಷ ಕಾಮತ್ ಅವರು ಆಗಮಿಸಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಮೂಲಭೂತ ಮಂತ್ರವಾಗಬೇಕು. ಸಂಸ್ಕಾರವನ್ನು ಎಳವೆಯಿಂದಲೇ ರೂಢಿಸಿಕೊಳ್ಳಬೇಕು. ಏಕೆಂದರೆ ದೊಡ್ಡವರಾದ ಮೇಲೆ ಅದನ್ನು ಬೆಳೆಸಿಕೊಳ್ಳುವುದು ಕಷ್ಟ. ಕಲಿಕೆಯ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ” ಎಂದು ಹೇಳಿದರು.

ಇನ್ನೋರ್ವ ಅತಿಥಿ ಸಿವಿಲ್ ಇಂಜಿನಿಯರ್ ನಾಸಿರ್ ಶೇಖ್ ಅವರು ಮಾತನಾಡಿ “ಬೀಳ್ಕೊಡುಗೆ ಎಂದರೆ ಶಾಲೆಯನ್ನು ಬಿಟ್ಟು ಹೋಗುವುದಲ್ಲ, ಬದಲಾಗಿ ಕಲಿತ ಶಾಲೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವುದು. ಸಮಾಜದಲ್ಲಿ ಸೌಹಾರ್ದತೆ ಮೂಡಿಸುವಲ್ಲಿ ಯುವಜನತೆ ಶ್ರಮಿಸಬೇಕು” ಎಂದು ಹೇಳಿದರು.

ಮತ್ತಿಬ್ಬರು ಅತಿಥಿಗಳಾದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ನಿಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶ್ರೀಮತಿ ಡೀನಾ ಮರಿಯ ಫೆರ್ನಾಂಡಿಸ್ ಹಾಗೂ ಸಂಸ್ಥೆಯ ಸಮಾಲೋಚಕಿ ಸಿಸ್ಟರ್ ಡಾ.ಶಾಲೆಟ್ ಸಿಕ್ವೇರಾ ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಕ್ರೈಸ್ಟ್ ಕಿಂಗ್ ವಿದ್ಯಾರ್ಥಿಗಳು ತಮ್ಮ ಉತ್ತಮ ಗುಣನಡತೆಯಿಂದಾಗಿ ಹೋದ ಕಡೆಗಳಲ್ಲಿ ಉತ್ತಮ ಹೆಸರು ಸಂಪಾದಿಸುತಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ ಮಕ್ಕಳು ನಿರಂತರ ಪರಿಶ್ರಮಿಗಳಾಗಬೇಕು. ಮಕ್ಕಳು ಶಿಕ್ಷಕರ ಪ್ರೀತಿ ಕಾಳಜಿಯನ್ನು ಸದಾ ಕಾಲ ನೆನಪಿಟ್ಟುಕೊಳ್ಳಬೇಕು” ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮಿ ನಾರಾಯಣ ಕಾಮತ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ನಂತರ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.

ಉಪನ್ಯಾಸಕರಾದ ದೀಪಕ್, ಶ್ರೀಮತಿ ಸೌಮ್ಯ ನಾಯ್ಕ್, ಕು.ಅಭಿನಯ, ಶ್ರೀಮತಿ ಶಿಜಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗಣಿತ ಉಪನ್ಯಾಸಕಿ ಶ್ರೀಮತಿ ಭಾರತಿ ಸ್ವಾಗತಿಸಿ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಪಾವನಾ ಧನ್ಯರಾಜ್ ಕಾರ್ಯಕ್ರಮ ನಿರೂಪಿಸಿದರು. ರಸಾಯನ ಶಾಸ್ತç ಉಪನ್ಯಾಸಕಿ ಶ್ರೀಮತಿ ನಯನಾ ವಂದಿಸಿದರು.