Home Blog Page 25

ನಿಟ್ಟೆ: ಡಾ.ಎನ್.ಎಸ್.ಎ.ಎಮ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಘಾಟನೆಗೊಂಡ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ

0

ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಸೆ.10 ರಂದು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ವಿದ್ಯಾರ್ಥಿಗಳಲ್ಲಿನ ಹೊಸತನದ ಹುಡುಕಾಟದ ಪುಟ್ಟ ಹೆಜ್ಜೆ, ಏಕೆಂದರೆ ಈ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ದೇಶವನ್ನು ಪುನರ್ ನಿರ್ಮಿಸುವ ಜವಬ್ದಾರಿ ಇದೆ. ಪುನರ್ ನಿರ್ಮಿಸುವುದು ಅಂದರೆ ಸ್ವಾತಂತ್ರ್ಯ ಪೂರ್ವದ ಹೋರಾಟವಲ್ಲ, ಬದಲಿಗೆ ಕರ್ತೃತ್ವ ಶಕ್ತಿಯ ಮೂಲಕ ಮರು ನಿರ್ಮಾಣ. ಹಾಗಾಗಿ ನಮ್ಮ ನೆಲೆಯಲ್ಲಿ ಸಣ್ಣ ಕೆಲಸಗಳ ಮೂಲಕ ಯುವಜನಾಂಗ ಈ ದೇಶಕ್ಕಾಗಿ ಬದುಕಬೇಕು. ಅದಕ್ಕೆ ಪೂರಕ ಶಿಕ್ಷಣ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಿನೇಶ್ ಎಂ ಕೊಡವೂರು ಮಾತನಾಡಿ ವಿದ್ಯಾರ್ಥಿಗಳು ನಿರ್ಧಿಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವತ್ತರಾಗಬೇಕು, ಅಂಕಗಳಿಕೆಗೆ ಸೀಮಿತವಾಗದ ಕಲಿಕೆಗೆ ನಾವು ಗಮನಕೊಡುತ್ತ ಸಮಗ್ರ ಅಭ್ಯೂದಯದ ಕಡೆಗೆ ಗಮನಹರಿಸಬೇಕು. ಪರೀಕ್ಷೆಯ ಅಂಕಗಳು ವಿದ್ಯಾರ್ಥಿಯ ಕಾರ್ಯಕ್ಷಮತೆ, ಶ್ರದ್ಧೆ, ಏಕಾಗ್ರತೆಗಳನ್ನು ಪ್ರತಿನಿಧಿಸುತ್ತದೆ. ಆದರೆ ಅಂಕಗಳೇ ಒಬ್ಬ ವ್ಯಕ್ತಿಯನ್ನು ಅಳೆಯುವ ಅಂತಿಮ ಮಾನದಂಡವಲ್ಲ. ಹೀಗಾಗಿ ಕೌಶಲ್ಯ, ದೇಶಭಕ್ತಿ, ಸಾಮಾಜಿಕ ಜವಾಬ್ದಾರಿಗಳ ಕಡೆಗೂ ಗಮನ ಕೊಡಬೇಕು ಹಾಗೂ ಪ್ರತಿಯೊಬ್ಬರೂ ನಮ್ಮ ದೇಶ, ನಮ್ಮ ಸಮಾಜ ಎನ್ನುವ ಅಭಿಮಾನವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಮಾತನಾಡಿ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ನಮ್ಮ ವಿದ್ಯಾರ್ಥಿಗಳಲ್ಲಿನ ಪ್ರಾಯೋಗಿಕ ಕೌಶಲ್ಯವನ್ನು ಬಿಂಬಿಸುವುದಾಗಿದೆ, ಈ ಮೂಲಕ ತರಗತಿಗಳಲ್ಲಿ ಪಡೆದ ಜ್ಞಾನವನ್ನು ಹೇಗೆ ಜೀವನದಲ್ಲಿ ಅಳವಡಿಸುತ್ತಾರೆ ಎನ್ನುವುದನ್ನು ತೋರಿಸುವ ಪ್ರಯತ್ನ ಇದಾಗಿದೆ. ಹಾಗೆಯೇ ಈ ರೀತಿಯ ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ರೀತಿಯ ಆಲೋಚನೆಗಳಿಗೆ ಪ್ರಚೋದಿಸುತ್ತದೆ, ಹಾಗಾಗಿ ನಮ್ಮ ಶಿಕ್ಷಣ ಸಂಸ್ಥೆ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಎರಡು ದಿನಗಳ ಈ ಪ್ರದರ್ಶನದಲ್ಲಿ ಉಡುಪಿ ಜಿಲ್ಲೆಯ ಸುಮಾರು 20 ಪದವಿ ಪೂರ್ವ ಕಾಲೇಜುಗಳ 1750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರದರ್ಶನ ವೀಕ್ಷಣೆಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಐಕ್ಯೂಎಸಿ ಸಂಯೋಜಕ ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ನಿಶ್ಮಿತಾ ವಂದಿಸಿದರು. ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು.

 

ಕ್ರೈಸ್ಟ್ ಕಿಂಗ್: ವಾಲಿಬಾಲ್ ಪಂದ್ಯಾಟದಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ಹಾಗೂ ಪ್ರಾಥಮಿಕ ವಿಭಾಗದ ಮೂವರು ವಿದ್ಯಾರ್ಥಿಗಳು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

0

 

ಜಿಲ್ಲಾ ಪಂಚಾಯತ್ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಇವರ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ಕಾವಡಿ ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಉಡುಪಿ ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.

ಒಂಬತ್ತನೇ ತರಗತಿಯ ಶಗುನ್ ವರ್ಮಾ, ಶೈನಿ ಡಿಸೋಜಾ, ಕಾರ್ತಿಕಾ ಶೆಟ್ಟಿ, ಆಶಿಕಾ, ಹತ್ತನೇ ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜ, ಎಂಟನೇ ತರಗತಿಯ ಸಾನ್ವಿ ಶೆಟ್ಟಿ ತಂಡವನ್ನು ಪ್ರತಿನಿಧಿಸಿದ್ದು, ಇದರಲ್ಲಿ ಒಂಬತ್ತನೇ ತರಗತಿಯ ಶೈನಿ ಡಿಸೋಜಾ, ಶಗುನ್ ವರ್ಮಾ ಮತ್ತು ಕಾರ್ತಿಕಾ ಶೆಟ್ಟಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಪಂದ್ಯಾಟದಲ್ಲಿ ಶಗುನ್ ವರ್ಮಾ ಬೆಸ್ಟ್ ಅಟ್ಯಾಕರ್ ಮತ್ತು ಶೈನಿ ಡಿಸೋಜ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದುಕೊಂಡರು.

ಇದರ ಜೊತೆಗೆ ಪ್ರಾಥಮಿಕ ವಿಭಾಗದ ಬಾಲಕಿಯರ ಕಾರ್ಕಳ ತಾಲೂಕು ತಂಡವು ಜಿಲ್ಲಾಮಟ್ಟದಲ್ಲಿ ಫ್ರಥಮ ಸ್ಥಾನ ಪಡೆದುಕೊಂಡಿದ್ದು ತಂಡ ಪ್ರತಿನಿಧಿಸಿದ್ದ ಸಂಸ್ಥೆಯ ವಿದ್ಯಾರ್ಥಿನಿಯರಾದ ಆರನೇ ತರಗತಿಯ ತ್ರಿಷ್ಮಾ ಎಸ್, ಕೆಟ್ಲಿನ್ ಏಂಜೆಲ್ ಪಿಂಟೊ, ಎಲ್ಸಾ ರುಬೆಲ್ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತ್ರಿಷ್ಮಾ.ಎಸ್ ಪಂದ್ಯಾಟದ ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಪಡೆದುಕೊಂಡರು.

ಸೆ. 12ರಂದು ಕಾರ್ಕಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

 

ಗ್ಯಾರಂಟಿ ಸಮಾವೇಶವನ್ನು ಉದ್ಘಾಟಿಸಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು

ಪುರಸಭೆ ಹಾಗೂ ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಹಾಗೂ ಅದಾಲತ್

ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ‌ ಆಶ್ರಯದಲ್ಲಿ ಕಾರ್ಕಳ‌ ಪುರಸಭೆ ಮತ್ತು ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯ ಗ್ಯಾರಂಟಿ ಸಮಾವೇಶ ಮತ್ತು ಅದಾಲತ್ ಕಾರ್ಯಕ್ರಮವು ಸೆ.12 ರಂದು ಅಪರಾಹ್ನ 3.00 ಗಂಟೆಗೆ ಕಾರ್ಕಳ ಮಂಜುನಾಥ ಪೈ ಸಭಾಭವನದಲ್ಲಿ ಜರುಗಲಿದ್ದು, ಕಾರ್ಯಕ್ರಮವನ್ನು ಕರ್ನಾಟಕ‌ ಸರಕಾರದ ಮಹಿಳಾ ಮತ್ತು ಮಕ್ಕಳ‌‌ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಸುನೀಲ್ ಕುಮಾರ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಆಶೋಕ್ ಕುಮಾರ್ ಕೊಡವೂರು, ಉಪಾದ್ಯಕ್ಷರಾದ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಾಳ ಅಜಿತ್ ಹೆಗ್ಡೆ, ಪುರಸಭೆಯ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಕುಕ್ಕುಂದೂರು ಪಂಚಾಯತ್ ಅದ್ಯಕ್ಷೆ ಶ್ರೀಮತಿ ಉಷಾ ಹಾಗೂ ಇಲಾಖಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಯ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷರಾದ ಮಾಳ ಅಜಿತ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಲೂರು: ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಗೆಲುವು

0

 

ಸೆ.9ರಂದು ಕಾರ್ಕಳದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಖೋ ಖೋ ಪಂದ್ಯಾವಳಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇಲ್ಲಿಯ ಹುಡುಗರ ತಂಡ ಪ್ರಶಸ್ತಿಯನ್ನು ಗೆದ್ದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ದೈಹಿಕ ಶಿಕ್ಷಕ ಫೆಡ್ರಿಕ್ ರೆಬೆಲ್ಲೋ , ಕಾಲೇಜಿನ ಕ್ರೀಡಾ ಸಂಚಾಲಕರಾದ ಉಪನ್ಯಾಸಕ ಗಾಡ್ಫ್ರೆಡ್ ಹಾಗೂ ಹಳೆಯ ವಿದ್ಯಾರ್ಥಿ ಅಭಿಮನ್ಯು ಇವರ ಮಾರ್ಗದರ್ಶನದಲ್ಲಿ ತಂಡವನ್ನು ತರಬೇತಿಗೊಳಿಸಲಾಗಿತ್ತು. ತಂಡದ ಸಾಧನೆಗಾಗಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ತರಬೇತುದಾರರನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

ಕಾರ್ಕಳ: ಸಾಣೂರು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಸ್ನೇಹ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

0

ಉಡುಪಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಆಚರಣೆಯ ಪ್ರಯುಕ್ತ ನಡೆಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸುವಲ್ಲಿ ನಮ್ಮ ಪಾತ್ರ ಎಂಬ ವಿಷಯದ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನ ಸ್ನೇಹ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಬಹುಮಾನವನ್ನು ಸ್ವೀಕರಿಸಿದ್ದಾಳೆ.

ವಿದ್ಯಾರ್ಥಿಯ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕ್ರೈಸ್ಟ್ ಕಿಂಗ್: ಸಂಭ್ರಮ ಸಡಗರದ ಶಿಕ್ಷಕರ ದಿನಾಚರಣೆ

0

ಮಾನವೀಯ ಮೌಲ್ಯಗಳ ಅಧಃಪತನದಿಂದಾಗಿ ಗುರು-ಶಿಷ್ಯ ಸಂಬಂಧವೂ ಕುಸಿಯುತ್ತಿದೆ: ಎಸ್.ಎಲ್. ಭೋಜೆಗೌಡ

ಶ್ರೀಮತಿ ಸ್ವರ್ಣಲತಾ ಕೆ ಅವರಿಗೆ ‘ಕ್ರೈಸ್ಟ್ ಕಿಂಗ್ ಶಿಕ್ಷಕ ರತ್ನ’ ಮತ್ತು ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರಿಗೆ ಕ್ರೈಸ್ಟ್ ಕಿಂಗ್ ಕ್ರೀಡಾ ಶಿಕ್ಷಕ ಶ್ರೀ’ ಪ್ರಶಸ್ತಿ ಪ್ರದಾನ

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ನೂತನ ಕಾಲೇಜು ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ಎಲ್ ಭೋಜೆಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು “ಪ್ರಸ್ತುತ ಸಮಾಜ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ಇದರಿಂದಾಗಿ ಗುರು ಶಿಷ್ಯ ಸಂಬಂಧದ ಮೌಲ್ಯ ಕೂಡಾ ಕುಸಿಯುತ್ತಿದೆ. ಇಂದು ಸಂಬಂಧಗಳನ್ನು ಹಣದ ಮೂಲಕ ಅಳೆಯುತ್ತಿರುವುದು ಖೇದಕರ ವಿಷಯ, ಶಿಕ್ಷಕರು ಈ ಸಮಾಜದ ಕಣ್ಮಣಿಗಳು, ಅವರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ, ಈ ಪ್ರಪಂಚದಲ್ಲಿ ಸರ್ವಶ್ರೇಷ್ಟ ನಾಯಕರನ್ನು ತಯಾರು ಮಾಡುವವರು ಯಾರಾದರೂ ಇದ್ದರೆ ಅದು ಶಿಕ್ಷಕರು ಮಾತ್ರ” ಎಂದು ಹೇಳಿದರು.

ಇನ್ನೋರ್ವ ಅತಿಥಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಗುರು ಸಂಜೀವ ದೇವಾಡಿಗ ಅವರು ಮಾತನಾಡಿ “ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಪ್ರೀತಿ ಅಭಿಮಾನಗಳನ್ನು ಬೆಳಿಸಿಕೊಳ್ಳಬೇಕು” ಎಂದು ಹೇಳಿದರು. ಸರಕಾರಿ ಪ್ರೌಢಶಾಲೆ ರೆಂಜಾಳ ಇಲ್ಲಿನ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವರ್ಣಲತಾ ಕೆ ಅವರಿಗೆ ‘ಕ್ರೈಸ್ಟ್ ಕಿಂಗ್ ಶಿಕ್ಷಕ ರತ್ನ’ ಮತ್ತು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರಿಗೆ ‘ಕ್ರೈಸ್ಟ್ ಕಿಂಗ್ ಕ್ರೀಡಾ ಶಿಕ್ಷಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಸ್ವರ್ಣಲತಾ ಅವರು “ಉಳಿಪೆಟ್ಟನ್ನು ತಿಂದ ಕಲ್ಲು ಉತ್ತಮ ಮೂರ್ತಿಯಾಗುತ್ತದೆ, ಅದೇ ರೀತಿ ಕಷ್ಟವನ್ನುಂಡು ಬೆಳೆದರೆ ಉತ್ತಮ ವ್ಯಕ್ತಿತ್ವ ಮೂಡಿಬರುತ್ತದೆ” ಎಂದು ಹೇಳಿದರು. ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರು ಮಾತನಾಡಿ “ವಿದ್ಯಾರ್ಥಿಗಳು ಧೈರ್ಯ-ಸ್ಥೈರ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು, ನಮ್ಮ ನಮ್ಮ ಪ್ರತಿಭೆಗಳನ್ನು ನಾವು ನಾವೇ ಗುರುತಿಸಿ, ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಶಿಕ್ಷಕರು ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು, ನಮ್ಮ ದೇಶಕ್ಕಾಗಿ ಕಾಯಾ ವಾಚಾ ಮನಸಾ ದುಡಿಯುವುದೇ ನಿಜವಾದ ದೇಶಪ್ರೇಮ. ಭಾರತದ ಭವಿಷ್ಯ ನಿರ್ಮಾಣವಾಗುವುದು ತರಗತಿ ಕೊಠಡಿಗಳಲ್ಲಿ, ಅಲ್ಲಿ ಮಕ್ಕಳಿಗೆ ಸರಿಯಾದ ಮೌಲ್ಯಯುತ ಶಿಕ್ಷಣ ದೊರೆತಾಗ ಭಾರತ ವಿಶ್ವನಾಯಕನಾಗುತ್ತದೆ” ಎಂದು ಹೇಳಿದರು.

ಶಿಕ್ಷಕ-ರಕ್ಷಕ ಸಂಘದ ಪದವಿಪೂರ್ವ ವಿಭಾಗದ ಅಧ್ಯಕ್ಷರಾದ ದಯಾನಂದ ಮಲೆಬೆಟ್ಟು ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮಿ ನಾರಾಯಣ ಕಾಮತ್ ಪ್ರಸ್ತಾವನೆಗೈದರೆ ಕನ್ನಡ ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ಪ್ರಶಸ್ತಿಗಳ ಪರಿಚಯಗೈದರು. ಸಂಸ್ಥೆಯ ಗಣಿತಶಾಸ್ತ್ರ ಉಪನ್ಯಾಸಕ ಅರುಣ್ ಸಂದೀಪ್ ಡಿ’ಸೋಜ, ಕಚೇರಿ ಸಹಾಯಕಿ ಶ್ರೀಮತಿ ಪೃಥ್ವಿ ಶೆಟ್ಟಿ ಮತ್ತು ಗ್ರಂಥಪಾಲಕಿ ಶ್ರೀಮತಿ ರೇಷ್ಮಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ವೃಂದದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಿಂದ ಹಾಗೂ ಪೋಷಕರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

ಶಕೀಲಾ ಜಿ ಶೆಟ್ಟಿ, ವಿದ್ಯಾ, ಮಮತಾ, ವಿಶ್ವಾನಾಥ ಪುಜಾರಿ, ಕಿಶನ್, ಪ್ರಕಾಶ್ ಡಿಸೋಜ, ಸುನಿಲ್ ಡಿಸೋಜ, ಜಾನ್ ತಾವ್ರೋ, ವನಿತಾ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ – ರಕ್ಷಕ ಸಂಘದ ಪ್ರಾಥಮಿಕ ವಿಭಾಗದ ಅಧ್ಯಕ್ಷ ಉದಯರವಿ ಸ್ವಾಗತಿಸಿ ಪ್ರೌಢಶಾಲಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶರಿಟಾ ನೊರೋನ್ಹ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಹೇಮಲತಾ ಮತ್ತು ಯಶಸ್ವಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರು ವಿದ್ಯಾರ್ಥಿಗಳ ದಾರಿದೀಪ : ಎನ್. ಸಿ. ಸಿ ಕಮಾಂಡಿಂಗ್ ಆಫೀಸರ್ ಎಸ್. ಜಿ. ಪ್ರಭು

0

 

‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಒಬ್ಬರು ಅಪ್ರತಿಮ ಶಿಕ್ಷಕರಾಗಿದ್ದರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷರಾಗಿದ್ದರು. ವಾಗ್ಮಿಯೂ, ತತ್ವಶಾಸ್ತ್ರಜ್ಞರಾಗಿದ್ದು, ಆಕ್ಸಫರ್ಡ್ ಯೂನಿವರ್ಸಿಟಿಯ ವಿಸಿಟಿಂಗ್ ಪ್ರೊಫೆಸರ್ ಆಗಿದ್ದು, ಮುಂದಕ್ಕೆ ಭಾರತದ ರಾಷ್ಟ್ರಪತಿಯಾದರು. ಅವರ ಆದರ್ಶವನ್ನು ಎಲ್ಲಾ ಶಿಕ್ಷಕರು ಇಂದು ಪಾಲಿಸುವ ಅವಶ್ಯಕತೆಯಿದೆ. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಯಾವುದನ್ನೂ ಸಾಧಿಸಬಹುದು. ವಿದ್ಯಾರ್ಥಿದೆಸೆಯಲ್ಲಿ ಕಷ್ಟಪಟ್ಟರೆ ಮುಂದಿನ ಜೀವನ ಸುಖಮಯವಾಗುವುದರಲ್ಲಿ ಸಂದೇಹವಿಲ್ಲ. ಕೆ. ಎಮ್. ಎಸ್. ವಿದ್ಯಾಸಂಸ್ಥೆಯವರು ನನ್ನನ್ನು ಸನ್ಮಾನಿಸಿದ್ಫು ನನಗೆ ಅತೀವ ಸಂತೋಷವನ್ನು ತಂದುಕೊಟ್ಟಿದೆ.’ ಎಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್. ಜಿ. ಪ್ರಭುರವರು ಹೇಳಿದರು.

ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ ಪ್ರಾಸ್ತವಿಕ ಭಾಷಣ ಮಾಡಿದರು. ಪ್ರಾಥಮಿಕ ಶಾಲಾ ಮುಖ್ಯಸ್ತೆ ಮಾತನಾಡಿ “ಎಸ್. ಜಿ. ಪ್ರಭುರವರು ನನ್ನ ಗುರುಗಳು ಎಂದು ಹೇಳಲು ನನಗೆ ಹೆಮ್ಮೆಯನಿಸುತಿದೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ‘ ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ರವರು ಮಾತನಾಡಿ “ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅಪಾರ ದೇಶ ಭಕ್ತರಾಗಿದ್ದು, ಭಾರತದ ಶಿಕ್ಷಣದ ರಾಯಭಾರಿಯಾಗಿದ್ದರು. ಮೈಸೂರು ಬಿಟ್ಟು ಹೋದಾಗ, ಅವರನ್ನು ಮೈಸೂರಿನಿಂದ ರೈಲ್ವೆ ಸ್ಟೇಷನ್ನವರೆಗೆ ಸಾರೋಟ್ ನಲ್ಲಿ ಕುಳ್ಳಿರಿಸಿ, ವಿದ್ಯಾರ್ಥಿಗಳು ಸ್ವತಃ ತಾವೇ ಅವರು ಕೂತುಕೊಂಡಿದ್ದ ಸಾರೋಟನ್ನು ಎಳೆದುಕೊಂಡು ರೈಲ್ವೆ ಸ್ಟೇಷನ್ ರವರೆಗೆ ಹೋಗಿ ತಲುಪುವಂತೆ ಮಾಡಿದರು. ಇದು ವಿದ್ಯಾರ್ಥಿಗಳಿಗೆ ಅವರ ಮೇಲೆ ಇದ್ದ ಪ್ರೀತಿ, ವಿಶ್ವಾಸವನ್ನು ಗೌರವವನ್ನೂ ಸೂಚಿಸುತ್ತದೆ ‘ಎಂದರು.

ವಿಶ್ರಾಂತ ಪ್ರಾಂಶುಪಾಲ ಎಸ್. ಜಿ. ಪ್ರಭುರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು ಮತ್ತು ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು.

ದೀಕ್ಷಾ ಸ್ವಾಗತಿಸಿದರೆ ಅಕ್ಷತಾ ಧನ್ಯವಾದ ಸಮರ್ಪಣೆಗೈದರು.ಶೈಫಾ ಮತ್ತು ಅನಿಶ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲಾ ಉಪನ್ಯಾಸಕರು, ಶಿಕ್ಷಕರು, ಕಚೇರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ರೈಸ್ಟ್ ಕಿಂಗ್: ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟ

0

ಸಾರ್ವಜನಿಕ ಶಿಕ್ಷಣ ಇಲಾಖೆ(ಪದವಿ ಪೂರ್ವ), ಕರ್ನಾಟಕ ಸರ್ಕಾರ ಹಾಗೂ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜು ಇವುಗಳ ಆಶ್ರಯದಲ್ಲಿ ಪದವಿಪೂರ್ವ ವಿಭಾಗದ ಕಾರ್ಕಳ ತಾಲೂಕು ಮಟ್ಟದ ಹುಡುಗರ ಮತ್ತು ಹುಡುಗಿಯರ ವಿಭಾಗಗಳ ಫುಟ್ಬಾಲ್ ಪಂದ್ಯಾಟ ಗಾಂಧೀ ಮೈದಾನದಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಯೋಗೀಶ ದೇವಾಡಿಗ ಇವರು ದೀಪಬೆಳಗಿ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಚಾರ್ಯ ಲಕ್ಷ್ಮಿ ನಾರಾಯಣ ಕಾಮತ್ ಅವರು ಮಾತನಾಡಿ ‘ಕಲಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳ ಕಡೆಗೂ ಮಕ್ಕಳು ಮಹತ್ವ ನೀಡಬೇಕು, ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು’ ಎಂದು ಹೇಳಿದರು. ಅತಿಥಿಗಳಾಗಿದ್ದ ರಾಷ್ಟ್ರಮಟ್ಟದ ದೇಹದಾರ್ಡ್ಯ ಪಟು ಕಾರ್ಕಳದ ಪ್ರವೀಣ್ ದೇವಾಡಿಗ ಕ್ರೀಡಾಳುಗಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ದಯಾನಂದ ಮಲೆಬೆಟ್ಟು, ಕೆಎಂಇಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ಚಂದ್ರ ಹೆಗ್ಡೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿ ಲಾವಣ್ಯ ವಂದಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ರಸಾದ್ ಪಂದ್ಯಾಟ ಸಂಘಟಿಸಿದ್ದರು.

ಕಾರ್ಕಳ: ಕ್ರಿಯೇಟಿವ್ ಕಾಲೇಜಿನಲ್ಲಿ ಗುರುದೇವೋಭವ ಕಾರ್ಯಕ್ರಮ

0

 

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ‘ಕ್ರಿಯೇಟಿವ್ ಗುರುದೇವೋಭವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜ್ಞಾನ ಜ್ಯೋತಿಯನ್ನು ಬೆಳಗಿ, ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ‘ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ತರವಾಗಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಸಂಸ್ಕಾರ, ಶಿಸ್ತು ಹಾಗೂ ಮಾನವೀಯತೆ ಬೆಳೆಸುವುದು ಶಿಕ್ಷಕರ ಮಹತ್ತರ ಜವಾಬ್ದಾರಿ’ ಎಂದು ನುಡಿದರು.

ಗುರುವಂದನೆಯನ್ನು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಲಾಯಿ ಬಾಕ್ಯಾರು, ತೆಳ್ಳಾರುವಿನ ಶಿಕ್ಷಕ ಕೆ. ಯೋಗೀಶ್ ಕಿಣಿ ಯವರು ಮಾತನಾಡಿ ‘ ಇಂದಿನ ಪೀಳಿಗೆಗೆ ಶಿಕ್ಷಕರು ಕೇವಲ ಪಾಠ ಬೋಧಕರು ಮಾತ್ರವಲ್ಲ, ಬಾಳಿನ ದಾರಿ ತೋರಿಸುವ ದೀಪಸ್ತಂಭರೂ ಆಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನನ್ಯ’ ಎಂದು ಹೇಳಿದರು.

‘ಅಮ್ಮನ ನೆರವು ‘ ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಕಳ ಇಲ್ಲಿನ ಅಧ್ಯಕ್ಷರಾದ ಅವಿನಾಶ್ ಜಿ. ಶೆಟ್ಟಿಯವರು ‘ ಶಿಕ್ಷಕರ ಸೇವೆ ಶಾಶ್ವತ. ಅವರು ಬಿತ್ತುವ ಜ್ಞಾನ ಬೀಜ ಯಾವಾಗಲೂ ಫಲವನ್ನು ನೀಡುತ್ತದೆ. ಸಮಾಜದ ಪ್ರಗತಿಗೆ ಶಿಕ್ಷಕರು ಅವಿಭಾಜ್ಯ ಅಂಗ ‘ಎಂದು ಗುರುಗಳ ಸಮರ್ಪಣೆಯನ್ನು ಹೊಗಳಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ ತ್ರಿಶಾ ಪದವಿ ಪೂರ್ವ ಕಾಲೇಜು, ಕಲ್ಯಾಣಪುರ, ಉಡುಪಿಯ ಪ್ರಾಂಶುಪಾಲರಾಗಿರುವ ರಾಮಕೃಷ್ಣ ಹೆಗಡೆ, ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್.ಕೆ, ರಸಾಯನಶಾಸ್ತ್ರ ಉಪನ್ಯಾಸಕರಾದ ಮಲ್ಲಿಕಾರ್ಜುನ ಜಿ. ರಾವ್, ಕನ್ನಡ ವಿಭಾಗ ಮುಖ್ಯಸ್ಥರಾದ ಶಿವಕುಮಾರ್ ರವರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ‘ ಗುರುಗಳ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಅವರ ಮಾರ್ಗದರ್ಶನದಲ್ಲಿ ಕಲಿತು, ಸಮಾಜದ ಉತ್ತಮ ನಾಗರಿಕರಾಗಬೇಕು ‘ ಎಂಬ ಸಂದೇಶವನ್ನು ನೀಡಿದರು.

ಎಲ್ಲಾ ಉಪನ್ಯಾಸಕ ವರ್ಗದವರಿಗೆ ಸಂಸ್ಥೆಯ ವತಿಯಿಂದ ಸವಿನೆನಪಿನ ಉಡುಗೊರೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸಪ್ತ ಸಂಸ್ಥಾಪಕರು, ಬೋಧಕ- ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಹಿಂದಿ ಭಾಷಾ ಉಪನ್ಯಾಸಕಿ ವೃಂದಾದಾತೆ ಯವರು ಉಪನ್ಯಾಸಕರ ಯಾದಿಯನ್ನು ಓದಿದರು. ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ರವರು ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಕಳ ಜ್ಞಾನಸುಧಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

0

 

ಇಂದಿನ ಬದುಕು ಒತ್ತಡದಲ್ಲಿರಲು ಕಾರಣ ಮನುಷ್ಯನಿಗೆ ತೃಪ್ತಿ ಇಲ್ಲದಿರುವುದೇ ಆಗಿದೆ. ನೆಮ್ಮದಿಯನ್ನು ಕಳಕೊಂಡ ಮನುಜ ತಾಳ್ಮೆ, ಸಹನೆಯ ಮನೋಭಾವವನ್ನು ಇಟ್ಟುಕೊಳ್ಳುವುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿಯೇ ಸಾವಧಾನದ ಮನಸ್ಥಿತಿಯನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಗೌರವದ ಉಪಸ್ಥಿತಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯ ಎಂದು ಪಳ್ಳಿ ಸ.ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಸಂತ ಆಚಾರ್ ನುಡಿದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

ಜ್ಞಾನಸುಧಾ ಒತ್ತಡರಹಿತವಾಗಿ ವಿದ್ಯಾರ್ಥಿಗಳ ಏಳಿಗೆಗೆ ತನ್ನ ಯೋಜನಾ ಬದ್ಧವಾದ ಶೈಕ್ಷಣಿಕ ಚಟುವಟಿಕೆಯನ್ನು ರೂಪಿಸಿಕೊಂಡು, ಮೌಲಿಕವಾದ ವಿಚಾರಧಾರೆಯನ್ನು ಪಸರಿಸುವ ಸಾಮಾಜಿಕ ಕಾರ್ಯಕ್ರಮಗಳ ಮುಖೇನ ಶೈಕ್ಷಣಿಕ ಕ್ಷೇತ್ರದಲ್ಲಿ ನಾಡಿನಲ್ಲಿ ಮಾದರಿಯಾಗಿ ನಿಂತಿದೆ ಎಂದರು.

ನಿವೃತ್ತರಾದ ಬೋಳಾದ ಶ್ರೀ ರಾಮಕೃಷ್ಣ ಅನುದಾನಿಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಕೆಮ್ಮಣ್ಣು, ಬೆಳ್ಮಣ್ಣುವಿನ ಸ.ಪ್ರೌ.ಶಾಲೆಯ ಮುಖ್ಯ ಶಿಕ್ಷಕಿ ಸುಶೀಲಾ ಎನ್, ಎರ್ಲಪ್ಪಾಡಿಯ ಅನಂತಮತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್. ವಿಷ್ಣುಮೂರ್ತಿ ಭಟ್, ತೆಳ್ಳಾರಿನ ಸ.ಪ್ರೌ.ಶಾಲೆಯ ಶಿಕ್ಷಕಿ ಅನುಪಮ ಚಿಪ್ಲೂಣಕರ್ ಹಾಗೂ ನಿಟ್ಟೆಯ ಎನ್.ಎಸ್.ಎ.ಎಂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಗ್ರೆಟ್ಟಾ ಸಲ್ಡಾನ್ಹರವರನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ಗೌರವ ಸ್ವೀಕರಿಸಿದವರ ಪರವಾಗಿ ಬೋಳಾದ ಶ್ರೀ ರಾಮಕೃಷ್ಣ ಅನುದಾನಿಕ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ಕೆಮ್ಮಣ್ಣು ಹಾಗೂ ತೆಳ್ಳಾರಿನ ಸ.ಪ್ರೌ.ಶಾಲೆಯ ಶಿಕ್ಷಕಿ ಅನುಪಮ ಚಿಪ್ಲೂಣಕರ್ ಮಾತನಾಡಿದರು.

ಇದೇ ಸಂದರ್ಭ ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಮುಖ್ಯ ಅಭ್ಯಾಗತರಾದ ವಸಂತ್ ಆಚಾರ್‌ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್, ಉಪಪ್ರಾಂಶುಪಾಲರಾದ ಸಾಹಿತ್ಯ, ಉಷಾರಾವ್ ಯು, ಸಂಸ್ಥೆಯ ಹಿತೈಶಿಯಾದ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸಾಹಿತ್ಯ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ನಿರೂಪಿಸಿ ವಂದಿಸಿದರು.