Home Blog Page 2

ಗೋಮಾಂಸ ರಪ್ತಿನಲ್ಲಿ ಭಾರತ ಪ್ರಥಮ ಸ್ಥಾನದಲ್ಲಿರುವುದೇ ಸ್ಥಳೀಯವಾಗಿ ಅಕ್ರಮ ಗೋಹತ್ಯೆ ನಡೆಯಲು ಕಾರಣ: ಶುಭದ ರಾವ್

0

ಗೋಮಾಂಸ ರಪ್ತಿನಲ್ಲಿ ಭಾರತವು ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೊದಲು ಈ ಬಗ್ಗೆ ಕ್ರಮ ಕೈಗೊಂಡರೆ ದೇಶದ ವಿವಿದೆಡೆಗಳಲ್ಲಿ ನಡೆಯುತ್ತಿರುವ ಗೋಹತ್ಯೆಗೆ ಕಡಿವಾಣ ಬೀಳಲು‌ ಸಾಧ್ಯವಿದೆ, ಅಕ್ರಮ ಗೋಹತ್ಯೆ ನಿಗ್ರಹವನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.

ಸಾಂಬಾರ ಪದಾರ್ಥಗಳ ರಪ್ತಿಗೆ ಹೆಸರುವಾಸಿಯಾಗಿದ್ದ ಭಾರತವು ಪ್ರಸ್ತುತ ‌ಬಿಜೆಪಿ ಆಡಳಿತದಲ್ಲಿ ಗೋಮಾಂಸ ರಪ್ತಿಗೆ ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದಿರುವುದು ಅತ್ಯಂತ ದುರದೃಷ್ಟಕರ. ಭಾಷಣದಲ್ಲಿ ಗೋಪ್ರೇಮವನ್ನು ತೋರ್ಪಡಿಸಿ ಲಾಭದ ಆಸೆಗೆ ಗೋಮಾಂಸವನ್ನು ರಪ್ತು ಮಾಡುವವರಿಂದ ಕಾಂಗ್ರೆಸ್ ಪಾಠ ಕಲಿತುಕೊಳ್ಳಬೇಕಿಲ್ಲ.

ಅಕ್ರಮ ಗೋಹತ್ಯೆ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಹೆಸರುಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ಆರೋಪ ಮಾಡಿರುವ ಸುನೀಲ್ ಕುಮಾರ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಗೋವಿನ ರಕ್ಷಣೆಯ ಹೆಸರು ಹೇಳಿಕೊಂಡು ನಾಲ್ಕು ಅವಧಿಗೆ ಶಾಸಕರಾಗಿ ಅಧಿಕಾರ ಅನುಭವಿಸಿದ ಸುನಿಲ್ ಕುಮಾರ್ ಶಾಸಕರಾಗಿರುವ ಕ್ಷೇತ್ರದಲ್ಲಿಯೇ ಈ ಪರಿ ಗೋಹತ್ಯೆ ನಡೆಯಲು ಅವರ ಪರೋಕ್ಷ ಬೆಂಬಲವೇ ಕಾರಣ, ಮುಂದಿನಿಂದ ಗೋಭಕ್ತಿ ಹಿಂಬಾಗಲಿನಿಂದ ಗೋಹಂತಕರೊಂದಿಗೆ ದೋಸ್ತಿ ಇದು ಅವರ ನೀತಿಯಾಗಿರುದೇ ಅಕ್ರಮ ಗೋಹತ್ಯೆಗೆ ಕಾರಣ. ನಾಲ್ಕು ಅವಧಿಗೆ ಶಾಸಕರಾಗಿರುವ ಆಡಳಿತರೂಡ ಪರೋಕ್ಷ ಬೆಂಬಲವೇ ಇದಕ್ಕೆ ನೇರ ಹೊಣೆಯಾಗಿದೆ.

ಕಾಂಗ್ರೆಸ್ ಪಕ್ಷ ಯಾವತ್ತೂ ಕೂಡ ಅಕ್ರಮಗಳಿಗೆ ಬೆಂಬಲ ನೀಡಿದ‌ ಪಕ್ಷವಲ್ಲ, ಇನ್ನು ಮುಂದೆಯೂ ಅಕ್ರಮ ಹಾಗೂ ಸಮಾಜಘಾತುಕ ಕೃತ್ಯಗಳನ್ನು ನಡೆಸುವವರಿಗೆ ಬೆಂಬಲ ನೀಡುವುದಿಲ್ಲ ಎನ್ನುವುದನ್ನು ಸುನೀಲ್ ಕುಮಾರ್ ಅರ್ಥಮಾಡಿಕೊಂಡು ಹೇಳಿಕೆ ನೀಡಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 10ನೇ ತರಗತಿ ವಿದ್ಯಾರ್ಥಿನಿ ಸಾವು

0

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 15 ವರ್ಷದ ಬಾಲಕಿಯೊಬ್ಬಳು ನ. 12ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಮೃತ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಮಗಳು ಹರ್ಷಿತಾ (15) ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತಾ ಅವರು, ನ. 4ರಂದು ತಲೆನೋವು ಎಂದು ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದಳು. ಈ ವೇಳೆ ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಳಾಗಿದ್ದ ಅವಳನ್ನು ತಕ್ಷಣವೇ ತಾಯಿ ಚಿಕಿತ್ಸೆಗೆಂದು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೇ ನ. 12ರಂದು ಮೃತಪಟ್ಟಿದ್ದಾರೆ.

ಕಡಬದ ರಾಜೇಶ್ ಎಂಬಾತ ಹರ್ಷಿತಾಗೆ ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಹೀಗಾಗಿ ಹರ್ಷಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯವಿದೆ ಎಂದು ಆಕೆಯ ತಂದೆ ಶ್ರೀಧರ ಕುಂಬಾರ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ; ಪ್ರಕರಣ ದಾಖಲು

0

ಮಂಗಳೂರಿನ ಮಾಲ್‌ವೊಂದರಲ್ಲಿ ಉದ್ಯೋಗಿಯಾಗಿರುವ 24 ವರ್ಷದ ಯುವತಿಯೊಬ್ಬರು ನವೆಂಬರ್ 11ರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.

ನಾಪತ್ತೆಯಾದ ಯುವತಿಯನ್ನು ಜಪ್ಪು ಸೂಟರ್ ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ.

ಸುಮಾ ಅವರು ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದರು, ಆದರೆ ಅವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಕುಮಾರ್ ಅವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಸುಮಾ ಅವರು ಸುಮಾರು 5 ಅಡಿ ಎತ್ತರ, ಮಧ್ಯಮ ಮೈಕಟ್ಟು ಮತ್ತು ಗೋಧಿ ಬಣ್ಣದ ಮೈಕಟ್ಟು ಹೋಂದಿದ್ದಾರೆ. ಅವರು ಕೊನೆಯದಾಗಿ ಕಪ್ಪು ಪ್ಯಾಂಟ್ ಮತ್ತು ಕಪ್ಪು ಉದ್ದ ತೋಳಿನ ಶರ್ಟ್ ಧರಿಸಿದ್ದರು. ಅವರು ಕನ್ನಡ, ತುಳು ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋನ್ ಮಾಡಿ ಐಫೋನ್‌ ಖರೀದಿ, ಕಂತು ಕಟ್ಟದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

0

 

ಮೊಬೈಲ್ ಫೋನ್ ಲೋನ್ ಕಟ್ಟಿಲ್ಲ ಎಂದು ಆರೋಪಿಸಿ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಿಗಳು ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಪಾಲಕ್ಕಾಡ್‌ನಲ್ಲಿ ನಡೆದಿದೆ.

ಪಾಲಕ್ಕಾಡ್‌ನ ವಾಣಿಯಂಕುಳಂ ಪನಯೂರ್ ನಿವಾಸಿ ಯುವಕನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ದೂರು ದಾಖಲಾಗಿದ್ದು, ಫೈನಾನ್ಸ್ ಕಂಪನಿಯ ಉದ್ಯೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೇಬಲ್ಲಿ ಹಣ ಇಲ್ಲದಿದ್ರೂ ಐಫೋನ್‌ ಖರೀದಿಸಲು ಬಜಾಜ್ ಫೈನಾನ್ಸ್‌ನಲ್ಲಿ ಲೋನ್ ಮಾಡಿದ್ದ ಯುವಕ. ಲೋನ್ ತೆಗೆದುಕೊಂಡು ಐಫೋನ್ ಖರೀದಿಸಿದ ನಂತರ, ವಾಣಿಯಂಕುಳಂ ಪನಯೂರ್ ನಿವಾಸಿ ಶರೀಫ್ ಸತತವಾಗಿ ಕಂತುಗಳನ್ನು ಕಟ್ಟಲು ವಿಫಲರಾಗಿದ್ದರು. ಆಗ ಕಂಪನಿಯ ಉದ್ಯೋಗಿ ಶರೀಫ್‌ನನ್ನು ಹುಡುಕಿಕೊಂಡು ಬಂದಿದ್ದಾನೆ. ಮನೆಗೆ ಬಂದು, ಕಂಪನಿಯ ಗ್ರಾಹಕರಲ್ಲದ ತಾಯಿಯ ಫೋನ್ ನಂಬರ್ ಪಡೆದಿದ್ದನ್ನು ಶರೀಫ್ ಪ್ರಶ್ನಿಸಿದ್ದಾನೆ. ಈ ವಿಚಾರವಾಗಿ ಫೋನ್‌ನಲ್ಲಿ ನಡೆದ ವಾಗ್ವಾದವೇ ಹಲ್ಲೆಯಲ್ಲಿ ಕೊನೆಗೊಂಡಿದೆ.

ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಾಣಿಯಂಕುಳಂನಲ್ಲಿ ಈ ಘಟನೆ ನಡೆದಿದೆ. ಶರೀಫ್ ಎಂಬ ಯುವಕನೇ ಉದ್ಯೋಗಿ ಅನೂಪ್‌ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದೆ. ಅನೂಪ್ ಹೊಡೆದ ಹೊಡೆತಕ್ಕೆ ಕೆಳಗೆ ಬಿದ್ದ ಶರೀಫ್‌ನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ. ಕೋಪದಲ್ಲಿ ಹೊಡೆದ ಬಳಿಕ ಅನೂಪ್ ಅವರೇ ಶರೀಫ್‌ನನ್ನು ಒಟ್ಟಪಾಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಯೋಗಾಸನ ಸ್ಪರ್ಧೆ : ಕಾರ್ಕಳ ಜ್ಞಾನಸುಧಾದ ಮೂವರು ರಾಜ್ಯಮಟ್ಟಕ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ವಿದ್ಯೋದಯ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಸೋಲೊ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯುಸಿಯ ಪೂರ್ವಜ್ ಗೌಡ ವಿ. ಹಾಗೂ ದೃತಿ.ಡಿ.ಎಲ್, ರಿದಮಿಕ್ ವಿಭಾಗದಲ್ಲಿ ದ್ವಿತೀಯ ಪಿಯುಸಿಯ ವಿಶ್ರುತ್‌ರಾಜ್ ಟಿ.ಬಿ ಹಾಗೂ ಪೂರ್ವಜ್ ಗೌಡ ವಿ. ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

‘ತಿಥಿ’ ಚಿತ್ರ ಖ್ಯಾತಿಯ ಗಡ್ಡಪ್ಪ ವಿಧಿವಶ : ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ

0

 

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ತಿಥಿ ಫಿಲಂನಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುವ ಮೂಲಕ ಗಡ್ಡಪ್ಪ ಎಂದೇ ಖ್ಯಾತಿ ಗಳಿಸಿದ್ದ ಚನ್ನೇಗೌಡ ಇಂದು ನಿಧನರಾಗಿದ್ದಾರೆ.

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ತಿಥಿ ಫಿಲಂನಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುವ ಮೂಲಕ ಗಡ್ಡಪ್ಪ ಎಂದೇ ಖ್ಯಾತಿ ಗಳಿಸಿದ್ದ ಚನ್ನೇಗೌಡ ಇಂದು ನಿಧನರಾಗಿದ್ದಾರೆ. ಮೃತರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳನ್ನು ಹೊಂದಿದ್ದ ಗಡ್ಡಪ್ಪ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಮಂಡ್ಯ ಜಿಲ್ಲೆ ನೊದೆಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಚನ್ನೇಗೌಡರು ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಕೆಲವು ದಿನಗಳ ಹಿಂದಷ್ಟೇ ಜಾರಿಬಿದ್ದಿದ್ದ ಚನ್ನೇಗೌಡರಿಗೆ ಸೊಂಟಕ್ಕೆ ಪೆಟ್ಟಾಗಿತ್ತು. ಇಂದು ತಮ್ಮ ಸ್ವಗ್ರಾಮದಲ್ಲಿಯೇ ಚನ್ನೇಗೌಡರು ನಿಧನ ಹೊಂದಿದ್ದಾರೆ. ಈ ಬಗ್ಗೆ ಚನ್ನೇಗೌಡರ ಸುಪುತ್ರಿ ಮಾಹಿತಿ ನೀಡಿದ್ದು ಇಂದು ಸಂಜೆ ಅವರ ಸ್ವಗ್ರಾಮದಲ್ಲಿಯೇ ಅಂತಿಮ ವಿಧಿವಿಧಾನಗಳು ನೆರವೇರಲಿದೆ.

ತಿಥಿ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದ ಚನ್ನೇಗೌಡರು ಗಡ್ಡಪ್ಪ ಎಂದೇ ಪ್ರತೀತಿ ಪಡೆದಿದ್ದರು. ಜಾನಿ ಮೇರಾ ನಾಮ್, ತರ್ಲೇ ವಿಲೇಜ್, ಹಳ್ಳಿ ಪಂಚಾಯ್ತಿ ಸೇರಿದಂತೆ ತಮ್ಮ ಇಳಿ ವಯಸ್ಸಿನಲ್ಲಿ ಒಟ್ಟೂ 8 ಸಿನಿಮಾಗಳಿಗೆ ಗಡ್ಡಪ್ಪ ಖ್ಯಾತಿಯ ಚನ್ನೇಗೌಡರು ಬಣ್ಣ ಹಚ್ಚಿದ್ದಾರೆ. ಗಡ್ಡಪ್ಪ ಅವರ ನಟನೆಯ ತಿಥಿ ಸಿನಿಮಾ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಚನ್ನೇಗೌಡರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಅವರ ಅಭಿಮಾನಿ ಬಳಗ ಸಂತಾಪ ಸೂಚಿಸಿದೆ.

ಇದೆಲ್ಲವೂ ರಾಜ್ಯದ ಕಾನೂನು-ಸುವ್ಯವಸ್ಥೆಯ ಕರಾಳ ಮುಖದ ನಿಜ ಸ್ವರೂಪ ಬಿಚ್ಚಿಟ್ಟಿದೆ – ಶಾಸಕ ವಿ. ಸುನಿಲ್ ಕುಮಾರ್

0

ಶಿರ್ಲಾಲಿನಲ್ಲಿ ಮಾರಕಾಸ್ತ್ರ ತೋರಿಸಿ ದನ ಕಳ್ಳತನ, ನಲ್ಲೂರಿನ ಅಕ್ರಮ ಖಸಾಯಿಖಾನೆ, ತೆಳ್ಳಾರಿನ ಕಾಡುಪ್ರಾಣಿ ಮಾಂಸ ಪತ್ತೆ ಪ್ರಕರಣ

ಇದೆಲ್ಲವೂ ರಾಜ್ಯದ ಕಾನೂನು-ಸುವ್ಯವಸ್ಥೆಯ ಕರಾಳ ಮುಖದ ನಿಜ ಸ್ವರೂಪ ಬಿಚ್ಚಿಟ್ಟಿದೆ – ಶಾಸಕ ವಿ. ಸುನಿಲ್ ಕುಮಾರ್

ಕಾರ್ಕಳದ ಶಿರ್ಲಾಲಿನಲ್ಲಿ ಬಡ ಹೈನುಗಾರ್ತಿ ಮಹಿಳೆಗೆ ಮಾರಕ ಅಸ್ತ್ರ ತೋರಿಸಿ ದನ ಕಳ್ಳತನ, ನಲ್ಲೂರಿನಲ್ಲಿ ಅಕ್ರಮ ಕಸಾಯಿಖಾನೆ ಬಯಲಾಗಿರುವುದು, ತೆಳ್ಳಾರಿನಲ್ಲಿ ಕಾಡುಪ್ರಾಣಿ ಮಾಂಸ ಪತ್ತೆ ಇದೆಲ್ಲವೂ ರಾಜ್ಯದ ಕಾನೂನು-ಸುವ್ಯವಸ್ಥೆಯ ಕರಾಳ ಮುಖದ ನಿಜ ಸ್ವರೂಪ ಬಿಚ್ಚಿಟ್ಟಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಈ ಎಲ್ಲ ಘಟನೆಗಳನ್ನು ತೀವೃವಾಗಿ ಖಂಡಿಸಿರುವ ಅವರು ಈ ಮೂರು ಪ್ರಕರಣ ಸಹಿತ ಇಂತಹ ಹಲವು ಪ್ರಕರಣಗಳ ಆರೋಪಿಗಳೆಲ್ಲರೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ಕಾಂಗ್ರೆಸ್ ಈ ಅಕ್ರಮ ಗೋಹತ್ಯೆ ದಂಧೆಯ ಹಣವನ್ನು ಚುನಾವಣೆಗೆ ಬಳಸುತ್ತಿದೆ. ಈ ಆರೋಪಿಗಳಿಂದ ಕಾಂಗ್ರೆಸ್ ಚುನಾವಣಾ ಖಾತೆಗೆ ಭರಪೂರ ಹಣ ಹರಿಯುತ್ತಿದೆ ಎನ್ನುವ ಅನುಮಾನವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ, ರಕ್ಷಣೆ ನಿಲ್ಲುತ್ತದೆ ಎನ್ನುವ ಕಾರಣಕ್ಕೆ ಕಿಡಿಗೇಡಿಗಳು ಯಾವುದೇ ಭಯವಿಲ್ಲದೆ ನಿರಂತರ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಮನೆಮನೆಗಳಲ್ಲಿ ಗೋ ಕಳ್ಳತನ, ಗೋವಧೆ ಹಾಗೂ ಪ್ರಾಣಿ ವಧೆ ಮುಲಾಜಿಲ್ಲದೆ ನಡೆಯುತ್ತಿದೆ. ಹಟ್ಟಿಯಲ್ಲಿರುವ ಗೋವುಗಳಷ್ಟೆ ಅಲ್ಲದೆ ಇವರುಗಳ ವಕ್ರ ದೃಷ್ಟಿ ಅಮಾಯಕ ಕಾಡುಪ್ರಾಣಿಗಳ ಕಡೆಗೂ ಹರಿದಿದೆ. ಕಾಂಗ್ರೆಸ್ ಸರಕಾರವೇ ಇವರನ್ನು ಪೋಷಿಸುತ್ತಿದೆಯೇ?

ಕಾಂಗ್ರೆಸ್ ಹಾಗೂ ಸ್ಥಳಿಯ ಕಾಂಗ್ರೆಸ್ ನಾಯಕರ ಬೆಂಬಲ ಇಲ್ಲದೆ ಇಂತಹ ದಂಧೆ ಸಾಧ್ಯವೇ?” ಎಂದು ಪ್ರಶ್ನಿಸಿರುವ ಅವರು, “ಸರಕಾರ ಮತ್ತು ಜಿಲ್ಲಾಡಳಿತ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡವರ ಮಟ್ಟ ಹಾಕಬೇಕು, ಅಪರಾಧಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬಿಜೆಪಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.

ನಿಟ್ಟೆ : ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚಿದ ಜನಿಟ ವೆಲಿಕಾ ಡಿಸೋಜಾ

0

 

ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2ನೇ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜನಿಟ ವೆಲಿಕ ಡಿಸೋಜ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಬೆಂಗಳೂರಿನಲ್ಲಿ ನ. 5ರಿಂದ 8ರವರೆಗೆ ಆಯೋಜಿಸಿದ್ದ 41ನೇ ಕರ್ನಾಟಕ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಮತ್ತು ಆಯ್ಕೆ ಪರೀಕ್ಷೆ (2025–26)ಯಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು, ನಿಟ್ಟೆ ಸಂಸ್ಥೆಗೆ ಹಾಗೂ ಉಡುಪಿ ಕರಾವಳಿ ರೋಲರ್ ಸ್ಕೇಟಿಂಗ್ ಕ್ಲಬ್‌ಗೆ ಕೀರ್ತಿ ತಂದಿದ್ದಾರೆ.

18 ವರ್ಷ ಮೇಲ್ಪಟ್ಟವರ ವಿಭಾಗದ ಸ್ಪೀಡ್ ಕ್ವಾಡ್ ಸ್ಪರ್ಧೆಯಲ್ಲಿ ಜನಿಟ ಅವರ ಅದ್ಭುತ ಪ್ರದರ್ಶನವು ಅವರಿಗೆ ಉನ್ನತ ಗೌರವಗಳನ್ನು ತಂದುಕೊಟ್ಟಿರುವುದಷ್ಟೇ ಅಲ್ಲದೆ, ಮುಂದಿನ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶವನ್ನೂ ಒದಗಿಸಿದೆ.

ಇವರು ಉಡುಪಿಯ ಆಗ್ನೆಲ್ಲೊ ಡಿಸೋಜ ಹಾಗೂ ಶ್ರೀಮತಿ ಜೆಸಿಂತಾ ರೋಜ್ ಡಿಸೋಜರವರ ಪುತ್ರಿಯಾಗಿರುತ್ತಾರೆ. ಮನೀಶ್ ಬಂಗೇರ ಮತ್ತು ಕಿಶೋರ್ ಕುಮಾರ್ ಇವರಿಗೆ ಮಾರ್ಗದರ್ಶನ ನೀಡಿದ್ದಾರೆ.

ನಲ್ಲೂರು ಅಕ್ರಮ ಗೋ ಹತ್ಯೆಯ ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯದೆ ಪೋಲಿಸ್‌ ಇಲಾಖೆ ಆರೋಪಿಗಳ ಹೆಡೆಮುರಿ ಕಟ್ಟಿ – ನವೀನ್‌ ನಾಯಕ್‌ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ

0

 

ನಲ್ಲೂರಿನ ಪರಿಸರದಲ್ಲಿ ನಡೆದಿರುವ ಅಕ್ರಮ ಹಾಗೂ ವ್ಯವಸ್ಥಿತ ಗೋ ಹತ್ಯೆ ದಂಧೆಯ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಪ್ರತಿ ಬಾರಿ ಗೋ ರಕ್ಷಣೆಯ ಕಾರ್ಯ ಮಾಡುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ಇಂತಹ ಅಕ್ರಮ ಗೋ ಹತ್ಯೆ ದಂಧೆಗಳನ್ನು, ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಬಯಲು ಮಾಡುವುದು ನಮ್ಮ ಹಿಂದೂ ಕಾರ್ಯಕರ್ತರೇ ಎನ್ನುವುದನ್ನು ನಾವು ಗಮನಿಸಬೇಕಾದ ಅಂಶ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ ಎನ್ನುವ ಭರವಸೆಯಿಂದ, ಆರೋಪಿಗಳು ಕಾನೂನಿನ ಭಯುವಿಲ್ಲದೆ ಇಷ್ಟು ರಾಜಾರೋಷವಾಗಿ ತನ್ನ ಮನೆಯಲ್ಲಿಯೇ ಅಕ್ರಮ ಗೋ ಮಾಂಸ ವ್ಯಾಪಾರ ಮಾಡುವ ದಂಧೆಯನ್ನು ನಡೆಸಿಕೊಡಿದ್ದರು. ಇಂತಹ ಅಕ್ರಮ ಗೋ ಮಾಂಸ ದಂಧೆಗಳಿಂದಲೇ ಗೋ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿರುವುದು. ಇಂತಹ ಅಕ್ರಮ ದಂಧೆಗಳನ್ನು ಮಟ್ಟಹಾಕಿದರೆ ಗೋ ಕಳ್ಳತನವು ತನ್ನಿಂದ ತಾನೇ ನಿಯಂತ್ರಣಕ್ಕೆ ಬರುತ್ತದೆ.

ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ಹೆಡೆಮುರಿಕಟ್ಟಿ, ಪೊಲೀಸ್ ಇಲಾಖೆ ಇನ್ನಷ್ಟು ಚುರುಕಾಗಿ ಕಾರ್ಕಳದಾದ್ಯಂತ ಇರುವ ಅಕ್ರಮ ಕಸಾಯಿಖಾನೆಗಳನ್ನು ಶೀಘ್ರವೇ ಪತ್ತೆ ಹಚ್ಚಿ ಅಕ್ರಮ ದಂಧೆ ಕೋರರನ್ನು ಬಂಧಿಸಿ, ಅಕ್ರಮ ಕಸಾಯಿಖಾನೆಗಳನ್ನು ವಶಕ್ಕೆ ಪಡೆದು ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂದು ಒತ್ತಾಯಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೈಸ್ಟ್ ಕಿಂಗ್ : ಕರಾಟೆ ಪಂದ್ಯಾಟದಲ್ಲಿ ಎಂಟನೇ ತರಗತಿಯ ಸುದೀಕ್ಷಾ ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಉಪನಿರ್ದೇಶಕರ ಕಛೇರಿ ದಾವಣಗೆರೆ ಇವರ ಆಶ್ರಯದಲ್ಲಿ ಫಾತಹ್ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆ, ಮಾಗನಹಳ್ಳಿ, ದಾವಣಗೆರೆ ಇಲ್ಲಿ ನಡೆದ ರಾಜ್ಯಮಟ್ಟದ 14ರ ವಯೋಮಿತಿಯ 50 ಕೆಜಿ ವಿಭಾಗದ ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲಮಾದ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಸುದೀಕ್ಷಾ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈಕೆ ರೆಂಜಾಳದ ದಿವಾಕರ.ಕೆ.ಪೂಜಾರಿ ಹಾಗೂ ಶ್ರೀಮತಿ ಉಷಾ.ಕೆ ಇವರ ಸುಪುತ್ರಿಯಾಗಿದ್ದಾಳೆ.