Home Blog Page 2

ಕಾರ್ಕಳ : ಜೋಡುರಸ್ತೆಯಲ್ಲಿ ಆರ್ನಿ ಇಂಜಿನಿಯರಿಂಗ್ ಮತ್ತು ಕಂಟ್ರಾಕ್ಟರ್ಸ್ ಶುಭಾರಂಭ

0

 

ಸೂರಜ್ ಶೆಟ್ಟಿ ನಕ್ರೆ ಇವರು ಕಾರ್ಕಳದ ಸಂಜನಾ ಆರ್ಕೆಡ್ ನಲ್ಲಿ ನಡೆಸುತ್ತಿದ್ದ ಕ್ರಿಯೇಟಿವ್ ಅಸೋಸಿಯೇಟ್ಸ್ ಶಾಖೆಯು ನೂತನವಾಗಿ ಕಾರ್ಕಳ ಜೋಡುರಸ್ತೆಯ ಬಿ.ಟಿ.ಕೆ ಪೆಟ್ರೋಲ್ ಪಂಪ್ ಮುಂಭಾಗದ ಅಧಿದನ್ ಕಟ್ಟಡದಲ್ಲಿ ಆರ್ನಿ ಇಂಜಿನಿಯರಿಂಗ್ ಮತ್ತು ಕಂಟ್ರಾಕ್ಟರ್ಸ್ ಎಂಬ ಹೆಸರಿನೊಂದಿಗೆ ಶುಭಾರಂಭಗೊಂಡಿದೆ.

ನೂತನ ಶಾಖೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಉದಯ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೂರಜ್ ಶೆಟ್ಟಿ ನಕ್ರೆ ಅವರ ಹಿತೈಷಿ ಬಳಗ ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದು, ಸಂಸ್ಥೆಯ ಯಶಸ್ಸಿಗೆ ಶುಭ ಕೋರಿದರು.

ಉಡುಪಿ ಜ್ಞಾನಸುಧಾ : ಜಿಲ್ಲಾ ಮಟ್ಟದ ಶಟಲ್ ಬ್ಯಾಡ್‌ಮಿಂಟನ್‌ನಲ್ಲಿ ರನ್ನರ್ ಅಪ್

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಮತ್ತು ಭಂಡಾರ್‌ಕರ‍್ಸ್ ಪದವಿ ಪೂರ್ವ ಕಾಲೇಜು ಕುಂದಾಪುರ ಹಾಗೂ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟದಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ವೈಷ್ಣವ್, ಸುಧನ್ವ ಯು ಮುಂಡ್ಕೂರ್, ಅಚಿಂತ್ಯ ಕೃಷ್ಣ, ಚಿರಾಗ್ ರಾವ್, ಎಸ್ ಅನಿರುಧ್ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

ಇವರಲ್ಲಿ ವೈಷ್ಣವ್ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಹೆಬ್ರಿ: ಕಾರು-ಪಿಕಪ್ ನಡುವೆ ಡಿಕ್ಕಿ; ಮಹಿಳೆಗೆ ಗಾಯ

0

 

ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಸಂಚರಿಸುತ್ತಿದ್ದ ಕಾರು ಮತ್ತು ಶಿವಮೊಗ್ಗ ಕಡೆಯಿಂದ ಹೆಬ್ರಿ ಕಡೆಗೆ ಚಲಿಸುತ್ತಿದ್ದ ಪಿಕಪ್ ವಾಹನದ ಮಧ್ಯೆ ಅಪಘಾತವುಂಟಾಗಿ ಮಹಿಳೆ ಗಾಯಗೊಂಡ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಆಗುಂಬೆ ತಿರಿವಿನಲ್ಲಿ ನಡೆದಿದೆ.

ಆಗುಂಬೆ ಘಾಟ್ ರಸ್ತೆಯ ತಿರುವಿನಲ್ಲಿ ಅತಿವೇಗವಾಗಿ ಬಂದ ಪಿಕಪ್ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆಗೆ ಗಾಯವಾಗಿದೆ.

ಈ ಬಗ್ಗೆ ಗಾಯಾಳುವಿನ ಮಗ ನೀಡಿದ ದೂರಿನ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸತ್ತು ಉದ್ಘಾಟನೆಗೆ ಮುರ್ಮು ಗೈರು ಯಾಕೆಂದು ಬಿಜೆಪಿ ಹೇಳಲಿ: ಲಾಡ್

0

 

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸುತ್ತಿರುವ ಬಿಜೆಪಿ ನಡೆಗೆ ಪ್ರತಿಯಾಗಿ ಹೊಸ ವಿಷಯವೊಂದನ್ನು ಎತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ನೂತನ ಸಂಸತ್ತ್ ಭವನ ಉದ್ಘಾಟನೆ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆದೊಯ್ಯದಿರಲು ಕಾರಣ ಏನು? ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆಯ್ಕೆ ವೇಳೆ ಮುಸ್ಲಿಂ ಎಂಬ ಆಯ್ಕೆ ಬರಲಿಲ್ಲವೇ?’ ಎಂದು ಪ್ರಶ್ನಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿಗೆ ದ್ರೌಪದಿ ಮುರ್ಮು ಅವರನ್ನು ಯಾಕೆ ಕರೆದುಕೊಂಡು ಹೋಗಲಿಲ್ಲ? ಅದರ ಉದ್ಘಾಟನೆ ವೇಳೆ ಶಿಷ್ಟಾಚಾರ ಪ್ರಕಾರ ಯಾರು ಮುಂದಿರಬೇಕಿತ್ತು? ಆಗ ಶಿಷ್ಟಾಚಾರ ಪಾಲನೆ ಆಗಿದೆಯೇ? ಮುರ್ಮು ಅವರನ್ನು ಪರಿಶಿಷ್ಟ ಪಂಗಡದವರು ಅಥವಾ ವಿಧವೆ ಎಂಬ ಕಾರಣಕ್ಕೆ ಕರೆದೊಯ್ಯಲಿಲ್ಲವೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಹಿಂದೂಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಇವರು ಎಷ್ಟು ಗುಡಿಗಳನ್ನು ಕಟ್ಟಿಸಿದ್ದಾರೆ? 6.66 ಲಕ್ಷ ಗುಡಿಗಳು ನಮ್ಮ ಕಾಲದಲ್ಲಿ ಆಗಿವೆ. ಬಿಜೆಪಿಯವರು ರಾಮ ಮಂದಿರವನ್ನು ಜನರ ದುಡ್ಡಿನಿಂದ ಕಟ್ಟಿದ್ದು ಎಂದರು.

ಅಷ್ಟಕ್ಕೂ ಬಾನು ಮುಷ್ತಾಕ್ ಆಯ್ಕೆ ಬಗ್ಗೆ ಜೆಡಿಎಸ್, ಬಿಜೆಪಿಯಲ್ಲೇ ಬಿನ್ನಾಭಿಪ್ರಾಯ ಇದೆ. ಈ ವಿಷಯದಲ್ಲಿ ಯದುವೀರ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ಆ. 31 ರಂದು ಜೆಡಿಎಸ್ ನಿಂದ ಧರ್ಮಸ್ಥಳ ಸತ್ಯ ಯಾತ್ರೆ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳವು ‘ಧರ್ಮಸ್ಥಳ ಸತ್ಯ ಯಾತ್ರೆ’ ಕೈಗೊಂಡಿದ್ದು, ಇದೇ ರವಿವಾರ 31 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆ. 31 ರಂದು ಧರ್ಮಸ್ಥಳ ಸತ್ಯ ಯಾತ್ರೆ ಆರಂಭವಾಗುತ್ತದೆ. ಮೊದಲಿಗೆ ಹಾಸನದಲ್ಲಿ ಸೆನ್ಯಾತ್ರ್ ಮಾಡಿದ್ದೇವೆ. ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು ಅಲ್ಲಿ ತಿಂಡಿ ವ್ಯವಸ್ಥೆ ಮಾಡಿದ್ದೇವೆ. ಅಲ್ಲಿಂದ ನೇತ್ರವತಿಗೆ ಹೋಗಿ ಪಾದಯಾತ್ರೆ ಮಾಡಿದ್ದೇವೆ. ಅಲ್ಲಿ ವೇದಿಕೆ ರಚನೆ ಮಾಡಿದ್ದೇವೆ. ಅಲ್ಲಿಂದ ಪಾದಯಾತ್ರೆ ಮಾಡುತ್ತೇವೆ. ಅಲ್ಲಿ ವೇದಿಕೆ ರಚನೆ ಮಾಡಿದ್ದೇವೆ. ಅಲ್ಲಿಂದ ಕೆಲವು ಸಂದೇಶಗಳನ್ನು ನೀಡುತ್ತೇವೆ ಎಂದು ತಿಳಿಸಿದರು.

ಧರ್ಮಸ್ಥಳಕ್ಕೆ ಅಪಮಾನವೆಸಗಲು ಸರ್ಕಾರ ಮುಂದಾಗಿದೆ. ನಾನು ಒಬ್ಬ ಭಕ್ತನಾಗಿ ಹಾಗೂ ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಸತ್ಯ ಯಾತ್ರೆ ಮಾಡಿ, ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ನೀಡುತ್ತೇವೆ ಎಂದರು.

ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಮಾನ ಹಾಗೂ ಹಲವಾರು ಅನುಮಾನಗಳಿಗೆ ರಾಜ್ಯ ಸರ್ಕಾರ ಎದೆ ಮಾಡಿಕೊಟ್ಟಿದೆ. ತುರಾತುರಿಯಲ್ಲಿ ಎಸ್.ಐ.ಟಿ. ರಚನೆ ಮಾಡಿದೆ. ಧರ್ಮಸ್ಥಳ ಕ್ಷೇತ್ರದ ವಿಷಯದಲ್ಲಿ ಒಂದು ತಂಡವಾಗಿ ಪಿತೂರಿ ಮಾಡಿದ್ದನ್ನು ನೋಡಿದ್ದೇವೆ. ಒಬ್ಬನ ಹೇಳಿಕೆಯನ್ನು ಪರಿಗಣಿಸಿ ಎಸ್. ಐ. ಟಿ. ಯನ್ನು ಯಾಕೆ ರಚನೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ದಿಲ್ಲಿಯಲ್ಲಿದ್ದರೂ ಹೆಗ್ಗಡೆ ಜೊತೆ ಮಾತನಾಡಿ ನೈತಿಕ ಬೆಂಬಲ ನೀಡಿದ್ದಾರೆ ಎಂದರು.

ಕಾರ್ಕಳ: ಅನಾರೋಗ್ಯದಿಂದ ನಿಧನ-ಶವ ಮನೆಯೊಳಗಡೆ ಕೊಳೆತ ಸ್ಥಿತಿಯಲ್ಲಿ ಪತ್ತೆ

0

ವ್ಯಕ್ತಿಯೋರ್ವರು ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲಿ ಮೃತಪಟ್ಟು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾರ್ಕಳದ ನಲ್ಲೂರು ಗ್ರಾಮದ ಹೊಸಮನೆ ಪೆರೆಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ರಘುರಾಮ (65) ಎಂದು ಗುರ್ತಿಸಲಾಗಿದೆ. ಇವರ ಮನೆಯವರು ಕಳೆದ 15 ವರ್ಷಗಳಿಂದ ಬೇರೆ ವಾಸವಾಗಿದ್ದು, ಇವರು ಮಾತ್ರ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಬಿ.ಪಿ., ಶುಗರ್‌, ಹರ್ನಿಯ ಸಮಸ್ಯೆಗೆ ಒಳಗಾಗಿದ್ದು, ಎಡಕಾಲಿಗೆ ಗ್ಯಾಂಗ್ರಿನ್‌ ಆಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಕಳೆದ ವಾರವಷ್ಟೇ ಚಿಕಿತ್ಸೆ ಪಡೆದಿದ್ದರು. ತದನಂತರದಲ್ಲಿ ಅರೋಗ್ಯ ಸಮಸ್ಯೆ ತೀವ್ರವಾಗಿ ಆ.25 ರಿಂದ 28 ರ ವರೆಗಿನ ಅವಧಿಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ದುರ್ವಾಸನೆ ಬಂದ ಕಾರಣ ಸ್ಥಳೀಯರು ಮನೆ ಪರೀಕ್ಷಿಸಿದಾಗ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಈ ಬಗ್ಗೆ ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: SVT ಕಾಲೇಜಿನಲ್ಲಿ 2025-26ನೇ ಸಾಲಿನ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ

0

ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ 2025-26ನೇ ಸಾಲಿನ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಶಿಕ್ಷಕಿ, ಸಾಹಿತಿ ಪ್ರಜ್ವಲಾ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಸಂಘದ ಮಹತ್ವವನ್ನು ತಿಳಿಸಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಗೀತಾ ಜಿ. ವಹಿಸಿದ್ದರು. ವೇದಿಕೆಯಲ್ಲಿ ಸಾಹಿತ್ಯ ಸಂಘದ ಕಾರ್ಯದರ್ಶಿಗಳಾದ ಕು. ಮಂಜುಳಾ ತೃತೀಯ ಬಿ.ಎ, ಜಿಶಾ ತೃತೀಯ ಬಿ.ಕಾಂ ಉಪಸ್ಥಿತರಿದ್ದರು.

ಸಾಹಿತ್ಯ ಸಂಘದ ಅಧ್ಯಕ್ಷರಾದ ಕನ್ನಡ ಉಪನ್ಯಾಸಕಿ ರೇಖಾ ಸ್ವಾಗತಿಸಿದರು. ಕು.ದೀಪ ತೃತೀಯ ಬಿ.ಕಾಂ. ಕಾರ್ಯಕ್ರಮ ನಿರೂಪಿಸಿ, ಕು. ಮಂಜುಳಾ ತೃತೀಯ ಬಿ.ಎ ವಂದಿಸಿದರು.

ಕ್ರೈಸ್ಟ್ ಕಿಂಗ್: ಪ್ರೌಢಶಾಲಾ ವಿಭಾಗದ ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

 

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರ ಸಹಯೋಗದಲ್ಲಿ ವಿದ್ಯಾವರ್ಧಕ ಪ್ರೌಢಶಾಲೆ ಮುಂಡ್ಕೂರು ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.

ಒಂಬತ್ತನೇ ತರಗತಿಯ ಶೈನಿ ಡಿಸೋಜಾ, ಶಗುನ್ ವರ್ಮಾ, ಕಾರ್ತಿಕಾ ಶೆಟ್ಟಿ, ಆಶಿಕಾ, ಹತ್ತನೇ ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜ, ಎಂಟನೇ ತರಗತಿಯ ಸಾನ್ವಿ ಶೆಟ್ಟಿ ತಂಡವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾಟದಲ್ಲಿ ಶಗುನ್ ವರ್ಮಾ ಬೆಸ್ಟ್ ಅಟ್ಯಾಕರ್ ಮತ್ತು ಶೈನಿ ಡಿಸೋಜ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದುಕೊಂಡರು.

19ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮ

0

 

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ 19ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮವು ವಿಜೃಂಭಣೆಯಿಂದ ಜರಗಿತು.

ಬೆಳಿಗ್ಗೆಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಸಾರ್ವಜನಿಕ ಗಣ ಹೋಮ, ಕುಣಿತ ಭಜನಾ ಕಾರ್ಯಕ್ರಮ, ಚೆಂಡೆವಾದನ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.

ಕ್ರೈಸ್ಟ್ ಕಿಂಗ್ : ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಹಾಗೂ ಪ್ರೌಢಶಾಲಾ ಬಾಲಕರ ತಂಡ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ ಇವರ ಆಶ್ರಯದಲ್ಲಿ ಸರಕಾರಿ ಸಂಯುಕ್ತ ಪ್ರೌಢಶಾಲೆ ವಳಕಾಡು ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ 14/17ರ ವಯೋಮಿತಿ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ 14ರ ವಯೋಮಿತಿಯ ಬಾಲಕಿಯರ ತಂಡ ಹಾಗೂ ಪ್ರೌಢಶಾಲೆಯ 17ರ ವಯೋಮಿತಿಯ ಬಾಲಕರ ತಂಡಗಳು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ.

14ರ ವಯೋಮಿತಿಯ ಬಾಲಕಿಯರ ತಂಡವನ್ನು ಪ್ರತಿನಿಧಿಸಿದ್ದ ಎಂಟನೇ ತರಗತಿಯ ಖುಷಿ ಶೆಟ್ಟಿ, ಆರನೇ ತರಗತಿಯ ತ್ರಿಷ್ಮ ಎಸ್. ಹಾಗೂ ಕೆಟ್ಲಿನ್ ಏಂಜೆಲ್ ಪಿಂಟೊ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದರೆ ಪ್ರೌಢಶಾಲಾ ಬಾಲಕರ 17ರ ವಯೋಮಿತಿಯ ತಂಡವನ್ನು ಪ್ರತಿನಿಧಿಸಿದ್ದ ಹತ್ತನೇ ತರಗತಿಯ ಗೌರವ್ ಆರ್, ಪ್ರಥಮ್ ಶೆಟ್ಟಿ, ಶೋಭಿತ್ ಕೆ ಎಚ್ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.