ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸಿ ಉಡುಪಿ ಜಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸಂಸ್ಥೆಯ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ನಮೃತಾ ಎನ್ ಆರ್, ಧೃತಿ ಕೆ. ಶೆಟ್ಟಿ, ಆಧ್ಯಾ ಲೋಕೇಶ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿನಿಯರನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಮತ್ತು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್(ರಿ.)ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.
ಕಾರ್ಕಳ : ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಇವರ ಸಹಯೋಗದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಗೊಂಡಿದೆ. ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ನಾಯ್ಕ್ ತಂಡವನ್ನು ತರಬೇತುಗೊಳಿಸಿದ್ದರು.
2025-26ನೇ ಸಾಲಿನ ಬ್ರಾಂಚ್ ಅಸೋಸಿಯೇಷನ್ ಮತ್ತು ವಿದ್ಯಾರ್ಥಿ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನಿಟ್ಟೆಯ ಎನ್ಎಂಎಎಂಐಟಿಯ ಬಿ.ಸಿ.ಆಳ್ವ ಕ್ರೀಡಾ ಸಂಕೀರ್ಣದ ಸದಾನಂದ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಈ ಕಾರ್ಯಕ್ರಮವನ್ನು ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಮತ್ತು ಎನ್ಎಂಎಎಂಐಟಿಯ 2001-2005 ರ ಬ್ಯಾಚ್ನ ಮೆಕ್ಯಾನಿಕಲ್ ಎಂಜಿನಿಯರಿಂಗ್ನ ಹಳೆಯ ವಿದ್ಯಾರ್ಥಿ ವಿಜೇಶ್ ಕಾಮತ್ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ‘ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸುವಲ್ಲಿ ನಾವೀನ್ಯತೆ, ನಾಯಕತ್ವ ಮತ್ತು ತಂಡದ ಕೆಲಸದ ಮಹತ್ವ ಬಹಳಷ್ಟು ಇದೆ. ವಿವಿಧ ಸವಾಲುಗಳನ್ನು ಜೀವನದಲ್ಲಿನ ಅವಕಾಶಗಳಾಗಿ ರೂಪಿಸಿಕೊಳ್ಳಬಹುದಾಗಿದೆ. ವಿವಿಧ ಕೌಶಲ್ಯಗಳನ್ನು ಹೆಚ್ಚಿಸುವುದರೊಂದಿಗೆ ನಾವು ಸಾಮಾಜಿಕ ಸಂಪರ್ಕಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ’ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಎನ್ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್, ಇಂದಿನ ಕ್ರಿಯಾತ್ಮಕ ಜಗತ್ತಿನಲ್ಲಿ ನಿರಂತರ ಕಲಿಕೆ ಮತ್ತು ಕೌಶಲ್ಯ ಅಭಿವೃದ್ಧಿಯ ಅಗತ್ಯ ಹೆಚ್ಚುತ್ತಿದೆ. ಸಂಘ ನೇತೃತ್ವದ ಉಪಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಲ್ಲಿ ವಿವಿಧ ಇಲಾಖೆಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಸಮಗ್ರ ಬೆಳವಣಿಗೆಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ 15 ವಿಭಾಗಗಳ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಲಾಯಿತು. ಸ್ಟೂಡೆಂಟ್ ವೆಲ್ಫೇರ್ ವಿಭಾಗದ ಡೀನ್ ಡಾ.ನರಸಿಂಹ ಕೆ.ಬೈಲ್ಕೇರಿ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.
ಎನ್ಎಂಎಎಂಐಟಿ ಉಪಪ್ರಾಂಶುಪಾಲ ಡಾ.ನಾಗೇಶ್ ಪ್ರಭು ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿನಿ ಐಶ್ವರ್ಯಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಮಯೂರ್ ಪಿ ಮತ್ತು ಶರಣ್ಯ ಗಣೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚೀನಾದ ಶಾಂಗ್ಲೋದಲ್ಲಿ ಡಿಸೆಂಬರ್ 4 ರಿಂದ 13 ವರೆಗೆ ನಡೆಯಲಿರುವ ವಿಶ್ವ ಶಾಲಾ ಮಕ್ಕಳ 15 ವರ್ಷ ಒಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ಭಾರತದ ಬಾಲಕಿಯರ ತಂಡ ಭಾಗವಹಿಸಲಿದ್ದು, ಈ ತಂಡದ ಆಯ್ಕೆಯ ಅರ್ಹತಾ ಶಿಬಿರಕ್ಕೆ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ.
ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಆಗಸ್ಟ್ 29 ರಿಂದ 30 ವರೆಗೆ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಆಯ್ಕೆ ಶಿಬಿರದಲ್ಲಿ ಎಲ್ಲಾ ರಾಜ್ಯಗಳಿಂದ ಆಯ್ದ 200ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದು, ರಾಷ್ಟ್ರೀಯ ಆಯ್ಕೆಗಾರರ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆದಿದೆ. ಅಂತಿಮವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ 23 ಆಟಗಾರರಲ್ಲಿ 2ನೇ ಸ್ಥಾನದಲ್ಲಿರುವ ಶಗುನ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ.
ಕುಮಾರಿ ಶಗುನ್ ಎಸ್. ವರ್ಮ ಹೆಗ್ಡೆ ಶ್ರೀಮತಿ ಶೃತಿ ಮತ್ತು ಸಂದೇಶ್ ವರ್ಮ ದಂಪತಿಗಳ ಪುತ್ರಿಯಾಗಿದ್ದು, ಇವರು ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ’ಸೋಜಾ, ಜೀವನ್ ಡಿ’ ಸಿಲ್ವಾ, ಜೈರಾಜ್ ಪೂಜಾರಿ ಹಾಗೂ ಎಸ್. ಡಿ. ಎಮ್ ಉಜಿರೆಯ ರಮೇಶ್ ಇವರಿಂದ ಕ್ರೀಡಾ ತರಬೇತಿಯನ್ನು ಪಡೆದಿರುತ್ತಾರೆ.
ಕನ್ನಡ ತಾಯಿ ಭುವನೇಶ್ವರಿ ಹಾಗೂ ಕನ್ನಡ ಬಾವುಟದಲ್ಲಿ ಅರಶಿನ – ಕುಂಕುಮದ ಬಣ್ಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ಮಾಡಿಸಬಾರದು ಎಂದು ಚಾಮುಂಡಿ ಚಲೋ ನಡೆಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.
ಸೋಮವಾರ ಧರ್ಮಸ್ಥಳ ಯಾತ್ರೆ ನಡೆಸಲಿರುವ ನಾಯಕರು, ದಸರಾ ವೇಳೆಗೆ ನಡೆಸಲು ಉದ್ದೇಶಿಸಿರುವ ಚಾಮುಂಡಿ ಚಲೋ ಬಗ್ಗೆಯೂ ರೂಪುರೇಷೆ ಸಿದ್ಧಪಡಿಸಲು ಯೋಚಿಸಿದ್ದಾರೆ. ಧರ್ಮಸ್ಥಳದಿಂದ ಮರಳಿದ ಬಳಿಕ ಮೈಸೂರು ಜಿಲ್ಲಾ ಬಿಜೆಪಿ ನಾಯಕರು ಈ ಪ್ರಸ್ಥಾಪನೆಯನ್ನು ರಾಜ್ಯ ಬಿಜೆಪಿ ಘಟಕದ ಮುಂದಿಟ್ಟು, ಚಾಮುಂಡಿ ಚಲೋ ಬಗ್ಗೆ ಯೋಜಿಸುವ ಸಾಧ್ಯತೆ ಇದೆ.
ಈಗಾಗಲೇ ಬಜರಂಗ ಸೇನೆ ಚಾಮುಂಡಿ ಚಲೋ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದು, ಮೈಸೂರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದಲೂ ಚಾಮುಂಡಿ ಬೆಟ್ಟಕ್ಕೆ ಯಾತ್ರೆ ಹೋಗುವ ಬಗ್ಗೆ ಚರ್ಚೆ ಆರಂಭವಾಗಿದೆ.
ಬಿಜೆಪಿ ಹಾಗೂ ಜೆಡಿಎಸ್ ಜನರ ಬದುಕಿನ ಬಗ್ಗೆ ನೋಡುವುದಿಲ್ಲ. ಜನರ ಭಾವನೆ, ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಗಳಿಗೆ ಮಾಡಲು ಬೇರೆ ಕೆಲಸ ಇಲ್ಲ. ಧರ್ಮಸ್ಥಳದಲ್ಲಿ ಸಮಾವೇಶ ಮಾಡಲು ಹೊರಟಿದ್ದಾರೆ. ಎರಡೂ ಪಕ್ಷಗಳು ಜನರ ಬದುಕಿನ ಬಗ್ಗೆ ಆಲೋಚಿಸುತ್ತಿಲ್ಲ. ಅವರ ಭಾವನೆ, ಧರ್ಮದ ಮೇಲೆ ರಾಜಕಾರಣ ಮಾಡಲು ಹೊರಟಿವೆ ಎಂದು ಟೀಕಿಸಿದರು.
ಸೂರಜ್ ಶೆಟ್ಟಿ ನಕ್ರೆ ಇವರು ಕಾರ್ಕಳದ ಸಂಜನಾ ಆರ್ಕೆಡ್ ನಲ್ಲಿ ನಡೆಸುತ್ತಿದ್ದ ಕ್ರಿಯೇಟಿವ್ ಅಸೋಸಿಯೇಟ್ಸ್ ಶಾಖೆಯು ನೂತನವಾಗಿ ಕಾರ್ಕಳ ಜೋಡುರಸ್ತೆಯ ಬಿ.ಟಿ.ಕೆ ಪೆಟ್ರೋಲ್ ಪಂಪ್ ಮುಂಭಾಗದ ಅಧಿದನ್ ಕಟ್ಟಡದಲ್ಲಿ ಆರ್ನಿ ಇಂಜಿನಿಯರಿಂಗ್ ಮತ್ತು ಕಂಟ್ರಾಕ್ಟರ್ಸ್ ಎಂಬ ಹೆಸರಿನೊಂದಿಗೆ ಶುಭಾರಂಭಗೊಂಡಿದೆ.
ನೂತನ ಶಾಖೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಉದಯ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೂರಜ್ ಶೆಟ್ಟಿ ನಕ್ರೆ ಅವರ ಹಿತೈಷಿ ಬಳಗ ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದು, ಸಂಸ್ಥೆಯ ಯಶಸ್ಸಿಗೆ ಶುಭ ಕೋರಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಮತ್ತು ಭಂಡಾರ್ಕರ್ಸ್ ಪದವಿ ಪೂರ್ವ ಕಾಲೇಜು ಕುಂದಾಪುರ ಹಾಗೂ ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ವೈಷ್ಣವ್, ಸುಧನ್ವ ಯು ಮುಂಡ್ಕೂರ್, ಅಚಿಂತ್ಯ ಕೃಷ್ಣ, ಚಿರಾಗ್ ರಾವ್, ಎಸ್ ಅನಿರುಧ್ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.
ಇವರಲ್ಲಿ ವೈಷ್ಣವ್ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಸಂಚರಿಸುತ್ತಿದ್ದ ಕಾರು ಮತ್ತು ಶಿವಮೊಗ್ಗ ಕಡೆಯಿಂದ ಹೆಬ್ರಿ ಕಡೆಗೆ ಚಲಿಸುತ್ತಿದ್ದ ಪಿಕಪ್ ವಾಹನದ ಮಧ್ಯೆ ಅಪಘಾತವುಂಟಾಗಿ ಮಹಿಳೆ ಗಾಯಗೊಂಡ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಆಗುಂಬೆ ತಿರಿವಿನಲ್ಲಿ ನಡೆದಿದೆ.
ಆಗುಂಬೆ ಘಾಟ್ ರಸ್ತೆಯ ತಿರುವಿನಲ್ಲಿ ಅತಿವೇಗವಾಗಿ ಬಂದ ಪಿಕಪ್ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆಗೆ ಗಾಯವಾಗಿದೆ.
ಈ ಬಗ್ಗೆ ಗಾಯಾಳುವಿನ ಮಗ ನೀಡಿದ ದೂರಿನ ಮೇರೆಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸುತ್ತಿರುವ ಬಿಜೆಪಿ ನಡೆಗೆ ಪ್ರತಿಯಾಗಿ ಹೊಸ ವಿಷಯವೊಂದನ್ನು ಎತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ‘ನೂತನ ಸಂಸತ್ತ್ ಭವನ ಉದ್ಘಾಟನೆ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆದೊಯ್ಯದಿರಲು ಕಾರಣ ಏನು? ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆಯ್ಕೆ ವೇಳೆ ಮುಸ್ಲಿಂ ಎಂಬ ಆಯ್ಕೆ ಬರಲಿಲ್ಲವೇ?’ ಎಂದು ಪ್ರಶ್ನಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿಗೆ ದ್ರೌಪದಿ ಮುರ್ಮು ಅವರನ್ನು ಯಾಕೆ ಕರೆದುಕೊಂಡು ಹೋಗಲಿಲ್ಲ? ಅದರ ಉದ್ಘಾಟನೆ ವೇಳೆ ಶಿಷ್ಟಾಚಾರ ಪ್ರಕಾರ ಯಾರು ಮುಂದಿರಬೇಕಿತ್ತು? ಆಗ ಶಿಷ್ಟಾಚಾರ ಪಾಲನೆ ಆಗಿದೆಯೇ? ಮುರ್ಮು ಅವರನ್ನು ಪರಿಶಿಷ್ಟ ಪಂಗಡದವರು ಅಥವಾ ವಿಧವೆ ಎಂಬ ಕಾರಣಕ್ಕೆ ಕರೆದೊಯ್ಯಲಿಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಹಿಂದೂಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಇವರು ಎಷ್ಟು ಗುಡಿಗಳನ್ನು ಕಟ್ಟಿಸಿದ್ದಾರೆ? 6.66 ಲಕ್ಷ ಗುಡಿಗಳು ನಮ್ಮ ಕಾಲದಲ್ಲಿ ಆಗಿವೆ. ಬಿಜೆಪಿಯವರು ರಾಮ ಮಂದಿರವನ್ನು ಜನರ ದುಡ್ಡಿನಿಂದ ಕಟ್ಟಿದ್ದು ಎಂದರು.
ಅಷ್ಟಕ್ಕೂ ಬಾನು ಮುಷ್ತಾಕ್ ಆಯ್ಕೆ ಬಗ್ಗೆ ಜೆಡಿಎಸ್, ಬಿಜೆಪಿಯಲ್ಲೇ ಬಿನ್ನಾಭಿಪ್ರಾಯ ಇದೆ. ಈ ವಿಷಯದಲ್ಲಿ ಯದುವೀರ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.