ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ನಿಂದಿಸಿದ ಪ್ರಕರಣದ ಕುರಿತು ಬಿಜೆಪಿ ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಂ ಎಂದಂತೆ: ರಾಘವ ಕುಕ್ಕುಜೆ
ದೇಶದ ಪವಿತ್ರ ಗ್ರಂಥ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನವನ್ನು ಗೌರವಿಸುವ ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಿಸುತ್ತಾನೆ. ಆದರೆ ದೇಶದ ಸಂವಿಧಾನದ ಮೇಲೆ ಗೌರವವೇ ಇಲ್ಲದ ದೇಶದ್ರೋಹಿಗಳು ಮಾತ್ರಾ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ.
ಈ ದೇಶದಲ್ಲಿ ಎಲ್ಲರೂ ಸಮಾನರು, ದಲಿತರೂ ಸೇರಿದಂತೆ ಎಲ್ಲಾ ಜಾತಿ ಮತ ಪಂಥ ಧರ್ಮದ ಜನರಿಗೆ ನಮ್ಮ ದೇಶದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಇದೆ. ಭಾರತದ ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ, ಆದರೆ ಸಂವಿಧಾನದ ಮೇಲೆ ಗೌರವ ಇಲ್ಲದ ಉಮೇಶ್ ನಾಯ್ಕ ಸೂಡ ಎನ್ನುವ ಬಿಜೆಪಿ ಮುಖಂಡನು ದಲಿತರನ್ನು ಹಾಗೂ ಅಂಬೇಡ್ಕರ್ ಅವರನ್ನು ಅವಮಾನಿಸಿರುವುದು ಅತ್ಯಂತ ಖಂಡನೀಯ. ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ಇಂತಹ ಮನಸ್ಥಿತಿಯುಳ್ಳವರು ದೇಶದ ಏಕತೆಗೆ ಮಾರಕ.
ಎಲ್ಲರಿಗೂ ದೇಶಭಕ್ತಿಯ ಪಾಠವನ್ನು ಬೋಧಿಸುವ ಬಿಜೆಪಿ ಪಕ್ಷವು ತನ್ನ ಪಕ್ಷದ ಮುಖಂಡ ಉಮೇಶ್ ನಾಯ್ಕನ ಈ ದೇಶದ್ರೋಹಿ ಕೃತ್ಯಕ್ಕೆ ಮೌನವಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ಅವಮಾನ ಮಾಡಿದ ತನ್ನದೇ ಪಕ್ಷದ ಮುಖಂಡನ ಈ ದುಷ್ಕೃತ್ಯದ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಲಿ. ಸಮುದಾಯಗಳ ನಡುವೆ ಅಪನಂಬಿಕೆ ದ್ವೇಷವನ್ನು ಹರಡಲು ಪ್ರಯತ್ನಿಸಿದ ಆರೋಪಿಯನ್ನು ಬಂಧಿಸಿದ ಉಡುಪಿ ಜಿಲ್ಲಾ ಪೋಲಿಸರಿಗೆ ಅಭಿನಂದೆನಗಳು ಎಂದು ಕಾರ್ಕಳ ಭೂನ್ಯಾಯ ಮಂಡಳಿ ಸದಸ್ಯರಾದ ರಾಘವ ಕುಕ್ಕುಜೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೇತನಾ ವಿಶೇಷ ಶಾಲೆಯಲ್ಲಿ ಸಿದ್ಧಗೊಳಿಸಿದ ಹಣತೆಗಳು ಮಾರಾಟಕ್ಕೆ ಬಿಡುಗಡೆ.
ಈ ಬಾರಿಯ ದೀಪಾವಳಿಗೆ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹಾಗೂ ವಿವಿಧ ಆಕಾರಗಳೊಂದಿಗೆ ಸಿದ್ಧಗೊಳಿಸಿದ ಮಣ್ಣಿನ ಹಣತೆಗಳನ್ನು ನಮ್ಮ ಶಾಲಾ ದಾನಿಗಳು ಹಾಗೂ ಹಿತೈಷಿಗಳು ಆದ ಕಾರ್ಕಳ್ ಕಮಲಾಕ್ಷ ಕಾಮತ್‌ರವರು ದೀಪ ಬೆಳಗಿಸುವುದರ ಜೊತೆ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಇಂತಹ ಒಂದು ಒಳ್ಳೆಯ ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಬದುಕಲು ನಡೆಸುವ ಪ್ರಯತ್ನದಲ್ಲಿ ಇದೀಗ ಕೇವಲ ಹತ್ತು ರೂಪಾಯಿಂದ ಪ್ರಾರಂಭಗೊಳ್ಳುವ ಈ ಬಣ್ಣದ ಹಣತೆಗಳನ್ನು ಶಾಲೆಗೆ ಭೇಟಿ ನೀಡಿ ನಿಮ್ಮ ಆಯ್ಕೆಯ ಹಣತೆಗಳನ್ನು ಖರೀದಿಸಿ ಪ್ರೋತ್ಸಾಹಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವಿನಂತಿ ಮಾಡುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಗಣಪತಿ ಪೈ, ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್ ಅತಿಥಿ ಗಣ್ಯರು, ಶಾಲಾ ಹಿತೈಷಿಗಳು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9480531469.
ಕಾರ್ಕಳ:ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-00ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿರತನ್ ಟಾಟಾರವರಿಗೆ ಶೃದ್ದಾಂಜಲಿ ಸಭೆ
ಪದ್ಮವಿಭೂಷಣ, ಮಹಾ ಮಾನವತಾವಾದಿ ಶ್ರೀ ರತನ್ ಟಾಟಾ ಅವರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆಯನ್ನು ಬುಧವಾರ ದಿನಾಂಕ 16 – 10 -2024ರಂದು ಕಾರ್ಕಳ ಬಸ್ ನಿಲ್ದಾಣದಲ್ಲಿ ಅಭಿನವ ಭಾರತ ಸೊಸೈಟಿ ಆಯೋಜಿಸಿದೆ.
ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ,ದೇಶದ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ ದೇಶಭಕ್ತ ಉದ್ಯಮಿ,ದೇಶದ ಜನರ ಸಮಸ್ಯೆಗೆ ಸದಾ ಮಿಡಿದ ಮಹಾ ಮಾನವತಾವಾದಿ,
ದೇಶದ ಸಂಕಷ್ಟಕ್ಕೆ ಅವಿರತ ಸ್ಪಂದಿಸಿದ ಲೋಕೋಪಕಾರಿ,ಭಾರತ ಮಾತೆಯ ಹೆಮ್ಮೆಯ ಸುಪುತ್ರ, ದೇಶ ಭಕ್ತರ ಪ್ರೀತಿಯ ರತನ್ ಟಾಟಾರವರು ಸ್ವರ್ಗಸ್ಥರಾಗಿದ್ದು ಅವರ ಅದ್ವಿತೀಯ ಸಾಧನೆ, ಅಪ್ರತಿಮ ದೇಶಭಕ್ತಿಯನ್ನು ಮೆಲುಕು ಹಾಕುತ್ತಾ ಅವರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆಯಾಗಿದೆ.
ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-00ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿ ಪದ್ಮವಿಭೂಷಣ ಶ್ರೀ ರತನ್ ಟಾಟಾರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಕಾರ್ಕಳದ ದೇಶಭಕ್ತ ನಾಗರೀಕರ ಬಂಧು ಬಗಿನಿಯರಿಗೆ ಅವಕಾಶ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ದಲಿತ ನಿಂದನೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡನನ್ನು ಶ್ರಮಿಕವರ್ಗದವರೇ ಸಮಾಜದಿಂದ ಒದ್ದೋಡಿಸುವ ಕೆಲಸ ಮಾಡಬೇಕಾಗಿದೆ-ಕಿರಣ್ ಹೆಗ್ಡೆ
ಹಿಂದೂ ಜಾಗರಣ ವೇದಿಕೆಯ ನಾಯಕರೊಬ್ಬರು ಮನುವಾದ ಸಂಸ್ಕೃತಿಯನ್ನು ಮುಂದಿಟ್ಟುಕೊಂಡು ದಲಿತರನ್ನು ನಿಂದನೆ ಮಾಡಿರುವುದನ್ನು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ ಕಾರ್ಕಳ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಶ್ರಮಿಕ ವರ್ಗದವರನ್ನು ಸಮಾಜದಲ್ಲಿ ಗೌರವ ಭಾವನೆಯಿಂದ ನೋಡಿಕೊಂಡೇ ಬರಲಾಗಿದೆ ಆ ಕೆಲಸವನ್ನು ಕಾಂಗ್ರೆಸ್ ಪಕ್ಷ ಕೂಡಾ ಮಾಡುತ್ತಲೇ ಬಂದಿದೆ.
ಶ್ರಮಿಕ ವರ್ಗದಲ್ಲಿ ದಲಿತ ಸಮಾಜದವರದ್ದೇ ಬಹು ಸಂಖ್ಯೆಯಾಗಿರುವುದರಿಂದ ಅವರನ್ನು ನಿಂದಿಸಿವುದು ಅಥವಾ ನಾಡು ಬಿಟ್ಟು ತೊಲಗುವಂತೆ ಮಾಡುವುದಕ್ಕೆ ಮನುವಾದಿ ಸಂಸ್ಕೃತಿಯ ನಾಯಕರಿಗೆ ಸಾಧ್ಯವಿಲ್ಲ. ಅಂಥ ಮುಖಂಡರನ್ನು ಶ್ರಮಿಕವರ್ಗದವರೇ ಸಮಾಜದಿಂದ ಒದ್ದೋಡಿಸುವ ಕೆಲಸ ಮಾಡಬೇಕಾಗಿದೆ ಎಂದು ಕಿರಣ್ ಹೆಗ್ಡೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಯೋಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇಲ್ಲಿನ 12ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ‘ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಲಿಂಗ ಸಮಾನತೆ ಸಾಧಿಸಿ’ ಹಾಗು ‘ನಮ್ಮ ಭಾರತಕ್ಕಾಗಿ ನಮ್ಮ ಯುವಜನತೆ’ ನಮ್ಮ ಎಂಬ ಶಿರೋನಾಮೆಯ ಅಡಿಯಲ್ಲಿ ಕೂಡ ಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವೇದಿಕೆಯಲ್ಲಿ ಜರುಗಿತು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗು ಬಜಗೋಳಿಯ ಸುಪ್ರಸಿದ್ಧ ವೈದ್ಯರಾದ ಡಾ. ವೆಂಕಟಗಿರಿ ರಾವ್ ಇವರು ತಮ್ಮ ಸಮಾರೋಪ ಭಾಷಣದಲ್ಲಿ ‘ಭ್ರೂಣ ಹತ್ಯೆಯು ವೈದ್ಯಕೀಯ ವಲಯ ತಲೆ ತಗ್ಗಿಸುವ ವಿಚಾರವಾಗಿದ್ದು ಇದರ ಬಗ್ಗೆ ವೈದ್ಯ ಸಮೂದಾಯ ಅಲೋಚನೆ ಮಾಡಬೇಕಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಸುಮಾರು ಏಳು ದಿನಗಳ ಶಿಬಿರದಲ್ಲಿ ಮುನಿರಾಜ ರೇಂಜಾಳ ಇವರಿಂದ ‘ಪರಿಪೂರ್ಣ ಶಿಕ್ಷಣ’, ಡಾ.ಸತ್ಯನಾರಾಯಣ ಭಟ್ ಇವರಿಂದ ‘ನಮ್ಮ ಪರಿಸರ ನಮ್ಮ ಜವಾಬ್ದಾರಿ’ ಡಾ. ಚಂದ್ರಕಾಂತ ಜೋಷಿ ಇವರಿಂದ ‘ಊಟ ಬಲ್ಲವನಿಗೆ ರೋಗವಿಲ್ಲ’, ಬೆನೆಡಿಕ್ಟ್ ಫೆರ್ನಾಂಡಿಸ್ ಇವರಿಂದ ‘ಮಾಹಿತಿ ಹಕ್ಕುಗಳ ಅಧಿನಿಯಮ’ಶ್ರೀಮತಿ ಆರತಿ ಅಶೋಕ್ ಇವರಿಂದ ‘ನಮ್ಮ ನೈಸರ್ಗಿಕ ಸಂಪನ್ಮೂಲಗಳ ಪ್ರಾಮುಖ್ಯತೆ’
ಸಂತೋಷ್ ಮಾಳ ಇವರಿಂದ ‘ಕರಕೌಶಲ್ಯ’, ಸುಜಿತ್ ಮಾಳ ಇವರಿಂದ,’ರಂಗತರಬೇತಿ’
ಮುಂತಾದವುಗಳ ಬಗ್ಗೆ ವಿಚಾರಧಾರೆ ಕಾರ್ಯಕ್ರಮಗಳು ಜರಗಿದವು.
ರೋಟರಿ ಕ್ಲಬ್ ಕಾರ್ಕಳ ಹಾಗು ವನ್ಯ ಜೀವಿ ಉಪವಿಭಾಗ ಕಾರ್ಕಳ ಇವರ ಸಹಯೋಗದೊಂದಿಗೆ ‘ಕುದುರೆಮುಖ ಅರಣ್ಯ ವಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹ ಮತ್ತು ವಿಲೇವಾರಿ’ ಕಾರ್ಯಕ್ರಮ ನಡೆಯಿತು.
ಶ್ರೀಮತಿ ಆರತಿ ಅಶೋಕ್ ಇವರ ಸಹಯೋಗದೊಂದಿಗೆ ‘ಸ್ವರ್ಣ ನದಿ ತಟಗಳಲ್ಲಿ ಸುಮಾರು 300 ಗಿಡಗಳನ್ನು ನೆಟ್ಟು ಜಲರಕ್ಷಣೆ’ ಕಾರ್ಯ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ದ್ವಿತೀಯ ಪಿ.ಯು .ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 7 ಜನ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು.
ಉದ್ಯಮಿ ವಿಶ್ವೇಶ್ವರ ಜೋಶಿ, “ಅಮ್ಮನ ನೆರವು” ಟ್ರಸ್ಟ್ ನ ಅವಿನಾಶ್ ಜಿ ಶೆಟ್ಟಿ , ವಿಶ್ರಾಂತ ಮುಖ್ಯೋಪಾಧ್ಯಾಯರಾದ ವಸಂತ್ ಎಂ,
ವಸಂತ್ ಸೇರಿಗಾರ್,ಸುಧಾಕರ್ ಶೆಟ್ಟಿ , ಶ್ರೀಮತಿ ಹರಿಣಿ, ಯೂಟ್ಯೂಬ್ ಚಾನಲನ ಚಂದು , ದಿವಾಕರ್ ಶೇರ್ವೆಗಾರ್ ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಗುರುಪ್ರಸಾದ್ ಮತ್ತು ಅಶ್ವಿತಾ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು
ಶ್ರೀಮತಿ ಸಂಧ್ಯಾ ಸ್ವಾಗತಿಸಿ,ಕಾರ್ಯಕ್ರಮ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಶಿಬಿರದ ವರದಿ ವಾಚನ ಮಾಡುವುದರೊಂದಿಗೆ ವಂದಿಸಿದರು. ಸ್ವಯಂಸೇವಕಿ ಅನ್ವಿತಾ ಇವರು ಕಾರ್ಯಕ್ರಮ ನಿರೂಪಿಸಿದರು.
ಅತ್ಯುತ್ತಮ ಕಾರ್ಯನಿರ್ವಾಹಣ ತಂಡವಾಗಿ ” ಚಿಗುರು” ತಂಡ ಹಾಗು ಉತ್ತಮ ತಂಡವಾಗಿ ” ನಿಸರ್ಗ ” ತಂಡ ಕ್ರಿಯಾಶೀಲ ತಂಡವಾಗಿ ” ಬೆಳಕು” ತಂಡಗಳು ಪ್ರಶಸ್ತಿಯನ್ನು ಪಡೆದುಕೊಂಡವು.
ದಲಿತ ಸಮುದಾಯ,ಬಾಬಾ ಸಾಹೇಬ್ ಅಂಬೇಡ್ಕರ್ ಅವಹೇಳನ ಪ್ರಕರಣ:ಉಮೇಶ್ ನಾಯ್ಕ್ ನ್ಯಾಯಾಂಗ ಬಂಧನ
ಹಿಂದೂ ಜಾಗರಣ ವೇದಿಕೆಯಿಂದ ಉಚ್ಚಾಟನೆ
ಸಮಸ್ತ ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ನಾಯ್ಕ್ ಸೂಡ ಅವರನ್ನು ಪೊಲೀಸರು ಕಾರ್ಕಳದಲ್ಲಿ ಬಂಧಿಸಿದ್ದಾರೆ.
ಪೊಲೀಸರು ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಹಿಂದೂ ಜಾಗರಣ ವೇದಿಕೆಯ ಮುಖಂಡನಾದ ಉಮೇಶ ನಾಯ್ಕ್ ದಕ್ಷಿಣ ಕನ್ನಡ ಮರಾಠೆ ಸಂರಕ್ಷಣಾ ಸಮಿತಿಯ ವಾಟ್ಸ್‌ಅಪ್ ಗುಂಪಿನಲ್ಲಿ ಹಾಕಿದ ವಾಯ್ಸ್ ಮಸೇಜ್‌ನಲ್ಲಿ ಅಂಬೇಡ್ಕರ್ ಹಾಗೂ ದಲಿತರಿಗೆಅಪಮಾನಕರ ರೀತಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆದ ಬಳಿಕ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ದಲಿತ ಸಮುದಾಯ ಹಾಗೂ ಅಂಬೇಡ್ಕರ್ ಅವರನ್ನು ಕೀಳುಮಟ್ಟದಲ್ಲಿ ಅಪಮಾನ ಮಾಡಿದ್ದ ಉಮೇಶ್ ನಾಯ್ಕ್‌ನನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ಅಲ್ಲಲ್ಲಿ ಪೊಲೀಸರಿಗೆ ಮನವಿಗಳನ್ನು ಸಲ್ಲಿಸಿ ಒತ್ತಾಯಿಸಿದ್ದು, ಪೊಲೀಸರು ಅಂದು ರಾತ್ರಿಯೇ ಉಮೇಶನನ್ನು ಸೂಡಾದಲ್ಲಿ ಬಂಧಿಸಿದ್ದರೆಂದು ತಿಳಿದುಬಂದಿದ್ದು, ಆತನ ಮೇಲೆಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)-2023ರ 353(2)ರ ಅಡಿ ಪ್ರಕರಣ ದಾಖಲಿಸಲಾಗಿದೆ.
ನ.10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಗದ್ದಿಗೆ ಕರಾವಳಿ ಮರಾಠಿ ಸಮಾವೇಶ -2024ನ್ನು ಆಯೋಜಿಸಿದ್ದು, ಈ ಸಮಾವೇಶದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪೋಟೊ ಮುದ್ರಿಸಿರುವುದು ಉಮೇಶ ನಾಯ್ಕ್‌ನ ಕಂಗೆಣ್ಣಿಗೆ ಗುರಿಯಾಗಿತ್ತು. ಇದನ್ನೇ ನೆಪವಾಗಿರಿಸಿ ಕೊಂಡು ಹಿಂದೂ ಜಾಗರಣ ವೇದಿಕೆಯ ಮುಖಂಡ ಅಂಬೇಡ್ಕರ್ ಹಾಗೂ ದಲಿತರನ್ನು ಅವಮಾನಿಸಿ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದ.
ಉಮೇಶ ನಾಯ್ಕ್ ತನ್ನ ಸಂದೇಶದಲ್ಲಿ ‘ಮರಾಠಿಗರು ದಲಿತರಲ್ಲ. ಆಮಂತ್ರಣ ಪತ್ರಿಕೆಯಲ್ಲಿರುವ ಅಂಬೇಡ್ಕರ್ ಫೋಟೊ ತೆಗೆದು ಶಿವಾಜಿಯ ಫೋಟೊ ಹಾಕಬೇಕು. ದಲಿತರು ದನದ ಹಾಗೂ ಕೋಣದ ಮಾಂಸ ತಿನ್ನುವವರು. ಸ್ಮಶಾನದಲ್ಲಿ ಮಲಗುವವರು. ಅಂಬೇಡ್ಕರ್ ಫೋಟೊ ಹಾಕಲು ಆತ ನಿನ್ನ ಅಪ್ಪನೇ. ಅಂಬೇಡ್ಕರ್ ಫೋಟೊ ತೆಗೆದು ಶಿವಾಜಿ ಫೋಟೊ ಹಾಕದಿದ್ದರೆ ಕರಾವಳಿ ಮರಾಠಿ ಸಮಾವೇಶಕ್ಕೆ ಬಹಿಷ್ಕಾರ ಹಾಕುತ್ತೇವೆ’ ಎಂದು ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೀಗ ಉಮೇಶ್ ಸೂಡರನ್ನು ಹಿಂದೂ ಜಾಗರಣಾ ವೇದಿಕೆಯ ಎಲ್ಲಾ ಜವಾಬ್ದಾರಿಯಿಂದ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.ಉಮೇಶ್ ಸೂಡ ಮಾತಿಗೂ ಸಂಘಟನೆಗೂ ಯಾವುದೇ ರೀತಿಯ ಸಂಭಂದವಿಲ್ಲ.
ಹಿಂದು ಜಾಗರಣ ವೇದಿಕೆಯು ಎಲ್ಲಾ ಜಾತಿ ಸಮುದಾಯದ ಹಿಂದೂಗಳನ್ನು ಒಂದಾಗಿ ಜೋಡಿಸಿಕೊಂಡು ಅವರಲ್ಲಿ ರಾಷ್ಟ್ರಭಕ್ತಿ ಧರ್ಮ ನಿಷ್ಠೆ ಬೆಳೆಸುವ ಕಾರ್ಯದಲ್ಲಿ ನಿರತವಾಗಿದ್ದುಉಮೇಶ್ ಸೂಡರು ಮಾತನ್ನಾಡಿ ಇರುವಂತಹ ಅಪಸವ್ಯ ಎಂದಿಗೂ ಸಹಿಸುವುದಿಲ್ಲ ಎಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಶಂಕರ್ ಕೋಟ ಸ್ಪಷ್ಟಪಡಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ದಲಿತರರ ನಿಂದನೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ಉಮೇಶ್ ನಾಯ್ಕ್ ಬಂಧಿಸುವಂತೆ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ಅಗ್ರಹ ಮಾಡಿತ್ತು
ದಕ್ಷಿಣ ಕನ್ನಡ ಮರಾಠಿ ಸಂರಕ್ಷಣಾ ಸಮಿತಿ ವಾಟ್ಸಾಪ್ ಗ್ರೂಪ್ ನಲ್ಲಿ ಅಂಬೇಡ್ಕರ್ ಫೋಟೋ ಹಾಕಿದ್ದಕ್ಕೆ ಉಮೇಶ್ ನಾಯ್ಕ್ ಅಂಬೇಡ್ಕರ್ ಹಾಗೂ ದಲಿತರನ್ನು ಅವಚ್ಯಾ ಶಬ್ದಗಳಿಂದ ನಿಂದನೆ ಮಾಡಿದ ಈತನನ್ನು ದೇಶ ದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕಾಗಿ ಉಡುಪಿ ಜಿಲ್ಲಾ ಎಸ್ ಪಿ ಯವರಿಗೆ ಮನವಿ ಮಾಡುತ್ತೇವೆ. ಈ ಗಾಗಲೇ ಕೆಲವು ಜಿಲ್ಲೆಯಲ್ಲಿ ದೂರು ದಾಖಲು ಮಾಡಿದ್ದು.ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ಪ್ರಮುಖರು ಆಗ್ರಹಿಸಿದ್ದರು.
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಬಜಗೋಳಿ ಇದರ ವತಿಯಿಂದ ಎರಡನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವ ‘ಬಜಗೋಳಿ ದಸರಾ’ ವೇದಮೂರ್ತಿ ಎಂ.ರಾಮ್ ಭಟ್ ಅರ್ಚಕರು ಮುಡ್ರಾಲು ಇವರ ನೇತೃತ್ವದಲ್ಲಿ ಬಜಗೋಳಿ ಪೇಟೆಯಲ್ಲಿರುವ ಪಂಚಾಯತ್ ಮೈದಾನದಲ್ಲಿ ದಿನಾಂಕ 11-10-2024 ಶುಕ್ರವಾರ ಮತ್ತು 12-10-2024 ಶನಿವಾರದಂದು ನಡೆಯಲಿದೆ.
ಕಾರ್ಯಕ್ರಮದ ವಿವರಗಳು.
ದಿನಾಂಕ 11.02.2024 ಶುಕ್ರವಾರ
ಬೆಳಿಗ್ಗೆ ಗಂಟೆ 7-15ಕ್ಕೆ:ವಿಗ್ರಹ ತರುವುದು(ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ)
ಪೂರ್ವಾಹ್ನ ಗಂಟೆ 8-00ಕ್ಕೆ:ಅಪ್ಪಾಯಿ ಬಸದಿ ಬಳಿಯಿಂದ ವಿಗ್ರಹದ ಪುರಪ್ರವೇಶ ಮೆರವಣಿಗೆ
ಪೂರ್ವಾಹ್ನ ಗಂಟೆ 9-00ಕ್ಕೆ:ಗಂಟೆಗೆ ವಿಗ್ರಹದ ಪ್ರತಿಷ್ಠಾಪನೆ
ಪೂರ್ವಾಹ್ನ ಗಂಟೆ 9-30ರಿಂದ ಭಜನಾ ಕಾರ್ಯಕ್ರಮ
ಪೂರ್ವಾಹ್ನ ಗಂಟೆ 11.00ರಿಂದ ಧಾರ್ಮಿಕ ಸಭೆ ನಡೆಯಲಿದೆ.
ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಗಂಟೆ 1.00 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.00ರಿಂದ 3.00ರ ವರೆಗೆ ಬಜಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,3.00ರಿಂದ 6.00ರ ವರೆಗೆ ಬಜಗೋಳಿ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,4.30ರಿಂದ 6.00ರ ವರೆಗೆ ಓಂಕಾರ ಭಜನಾ ಮಂಡಳಿ ಕಾಬೆಟ್ಟು ಕಾರ್ಕಳ ಇವರಿಂದ ಭಕ್ತಿ ಸುಧೆ, 6.00ರಿಂದ 7.00ವರೆಗೆ ಸಭಾ ಕಾರ್ಯಕ್ರಮ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾರ್ಲರ್ಶಿಪ್ ವಿತರಣಾ ಕಾರ್ಯಕ್ರಮ,7.00ರಿಂದ ಮಹಾಪೂಜೆ 7.300 ರಂಗಪೂಜೆ 8.00ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 8.30ರಿಂದ 9.30ರ ವರೆಗೆ ತೆಂಕುತಿಟ್ಟು ಯಕ್ಷಗಾನ ವೈಭವ ಹಾಗೂ,9.30 ರಿಂದ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಮಣಿಕೋಟೆ ಬಾಗಿಲು ಸಾರಥ್ಯದ ಭಕ್ತಿ ಪ್ರಧಾನ ವಿಭಿನ್ನ ಶೈಲಿಯ ರಂಘ ವಿನ್ಯಾಸದ ಕುತೂಹಲ ಭರಿತ ನಾಟಕ ಕದಂಬ ಪ್ರದರ್ಶನಗೊಳ್ಳಲಿದೆ.
ದಿನಾಂಕ 12.02.2024 ಶನಿವಾರ
ಪೂರ್ವಾಹ್ನ ಗಂಟೆ 7-15ಕ್ಕೆ ಅಲಂಕಾರ ಪೂಜೆ
ಪೂರ್ವಾಹ್ನ ಗಂಟೆ 9-00ಕ್ಕೆ ಕಳಸ ಶುದ್ದಿ
ಪೂರ್ವಾಹ್ನ ಗಂಟೆ 10.00ರಿಂದ ಮುದ್ದು ಶಾರದೆ ಮತ್ತು ಮುದ್ದು ಕೃಷ್ಣ ಸ್ಪರ್ಧೆಗಳು
ಪೂರ್ವಾಹ್ನ ಗಂಟೆ 11.30ರಿಂದ 12.30ರ ವರೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ
12.30ರಿಂದ ಮಹಾಪೂಜೆ ಪ್ರಸಾದವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.00ರಿಂದ ತುಳುನಾಡ ಗಾನ ಗಂಧರ್ವ ಕಲರ್ಸ್ ಕನ್ನಡ ಖ್ಯಾತಿಯ ಜಗದೀಶ್ ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ, ಸಂಜೆ 4.30ರಿಂದ ವಿಸರ್ಜನಾ ಪೂಜೆ, ಹುಲಿ ಕುಣಿತ,ಸಂಜೆ 5.30ರಿಂದ ವಿವಿಧ ವಿಶೇಷ ತಂಡಗಳೊಂದಿಗೆ ವಿಜೃಂಭಣೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ತಳಮಟ್ಟದ ಗ್ರಾಮೀಣಾಭಿವೃದ್ಧಿಯ ಗುರಿಸಾಧನೆಗಾಗಿ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸ ಬೇಕಾದುದು ಇಂದಿನ ಆಧ್ಯತೆಯಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ವಿಧಾನ ಪರಿಷತ್ ಚುನಾವಣೆಯ ಪೂರ್ವತಯಾರಿಯ ನಿಮಿತ್ತ ನಡೆದ ಗ್ರಾಮ ಪಂಚಾಯತ್ ಸದಸ್ಯರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತಾಡುತ್ತಿದ್ದರು.
ಕಾಂಗ್ರೆಸ್ ಸಾಮಾಜಿಕ ಕಾಳಜಿಯ ಕಾರ್ಯಸಾಧನೆಯ ಬದ್ಧತೆಯ ಮೇಲೆ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹಾಗೂ ಸಹಕಾರೀ ಕ್ಷೇತ್ರದ ಬಗ್ಗೆ ಅಪಾರ ಅನುಭವ ಹೊಂದಿರುವ ರಾಜು ಪೂಜಾರಿ ಯವರನ್ನು ಚುನಾವಣಾ ಕಣಕ್ಕಿಳಿಸಿದೆ. ಗ್ರಾಮ ಪಂಚಾಯತ್ ಸದಸ್ಯನಾಗಿ ಅಧ್ಯಕ್ಷನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯ ಅಧ್ಯಕ್ಷನಾಗಿ ಅವಿಭಜಿತ ದ.ಕ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿ ಕೊಟ್ಟವರು ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ವಿನಯ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತಾಡಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಅನುಭವಿಸಿದ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಈ ಭಾರಿ ನಮ್ಮ ಅಭ್ಯರ್ಥಿ ರಾಜು ಪೂಜಾರಿಯವರನ್ನು ಗೆಲ್ಲಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ ಎಂದು ಕರೆನೀಡಿದರು.
ಅಭ್ಯರ್ಥಿ ರಾಜು ಪೂಜಾರಿ ಮಾತಾಡಿ ತನ್ನ ಸಾಧನೆಗಳನ್ನು ಕಾರ್ಯಕರ್ತರ ಮುಂದಿಟ್ಟು ಮತಯಾಚಿಸಿ ತನ್ನ ಗೆಲುವು ಕಾರ್ಯಕರ್ತರ ಗೆಲುವು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಖೆಬೈಲ್, ಕೆಪಿಸಿಸಿ ಉಸ್ತವಾರಿ ಎಂ ಎಸ್ ಮಹಮ್ಮದ್, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಸದಾಶಿವ ದೇವಾಡಿಗ, ಚಂದ್ರಶೇಖರ ಬಾಯಿರಿ, ಅಲ್ಪ ಸಂಖ್ಯಾತ ಘಟಕಾಧ್ಯಕ್ಷ ಸಯಿಫುದ್ದೀನ್ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದಾರಾವ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಸಂದರ್ಭೋಜಿತ ಮಾತಾಡಿ ವಂದನಾರ್ಪಣೆ ಗೈದರು.
ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯ ಜತೆಗೆ ಧರ್ಮ ಶಿಕ್ಷಣದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಅರುಣ್ ಉಳ್ಳಾಲ ಅವರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ.
ಉಳ್ಳಾಲ ತಾಲೂಕಿನ ಕಿನ್ಯ ಬೆಳರಿಂಗೆಯ ಕೇಶವ ಶಿಶುಮಂದಿರದಲ್ಲಿ ನವದಂಪತಿಗಳ ಸಮಾವೇಶದಲ್ಲಿ ಹಿಂದೂ ವಿಚಾರ ಪದ್ಧತಿಗಳ ಮತ್ತು ಕೌಟುಂಬಿಕ ಸಂಗತಿಗಳ ಬಗ್ಗೆ ಬೋಧನೆ ಮಾಡುತ್ತ, ಹಿಂದೂ ಸಮಾಜದ ಮಕ್ಕಳು ಹಿಂದೂ ಸಂಸ್ಕೃತಿಯ ಸಂಸ್ಕಾರ ನೀಡುವ ಶಾಲೆಗಳಿಗೆ ಹೋದರೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನೆಪ ಮಾಡಿಕೊಂಡು ಅವರ ಮೇಲೆ ಕೇಸು ದಾಖಲಿಸಿಸಲಾಗಿದೆ.
ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡಿದ ಉಪನ್ಯಾಸಕರ ಮೇಲೆ ಕೇಸು ದಾಖಲು ಮಾಡುವ ಮೂಲಕ, ಸರಕಾರ ಕೂಡ ಸಮಾಜದಲ್ಲಿ ಅಶಾಂತಿ, ಅಸಮಾನತೆಗೆ ಪ್ರೋತ್ಸಾಹಿಸುವವರ ಪರ ನಿಂತಿರುವುದು ಇದರಿಂದ ಸ್ಪಷ್ಟವಾಗಿದೆ, ದಾಖಲಿಸಿಕೊಂಡ ಕೇಸ್ ಅನ್ನು ತಕ್ಷಣವೇ ವಾಪಸ್ ತೆಗೆದುಕೊಳ್ಳಬೇಕು.
ಮಂಗಳೂರು ಪೊಲೀಸರು ಸ್ವಯಂ ಪ್ರೇರಿತ ಕೇಸನ್ನು ದಾಖಲಿಸುವ ಮೂಲಕ ರಾಜ್ಯ ಸರಕಾರಕ್ಕೆ ಖುಷಿ ಪಡಿಸುವ ಉದ್ದೇಶ ಹೊಂದಿದೆ. ಈ ಹಿಂದೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸುತ್ತೇವೆ ರಾಜ್ಯ ಭವನಕ್ಕೆ ನುಗ್ಗುತ್ತೇವೆ ಎಂದು ಹೇಳಿಕೆ ಕೊಟ್ಟರೂ ಅವರ ಮೇಲೆ ಪ್ರಕರಣ ದಾಖಲಸಿಕೊಳ್ಳದೆ, ಈಗ ಹಿಂದೂ ಧರ್ಮದ ಬಗ್ಗೆ ಮಾತನಾಡುವವರ ಬಗ್ಗೆ ಕೇಸು ದಾಖಲಿಸಲು ತೋರಿಸುವ ಆಸಕ್ತಿ, ಹಿಂದೂಗಳನ್ನು ಗುರಿಯಾಗಿಸಿಕೊಂಡು ನಿರಂತರ ಕೇಸು ದಾಖಲಿಸುತ್ತಿರುವ ಹಿಂದೂ ವಿರೋಧಿ ರಾಜ್ಯ ಸರ್ಕಾರಕ್ಕೆ ನನ್ನ ದಿಕ್ಕಾರವಿದೆ. ಡಾ ಅರುಣ್ ಉಳ್ಳಾಲ ಅವರ ಮೇಲೆ ಕೇಸು ದಾಖಲಿಸಿದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ ಅವರು ತಿಳಿಸಿದ್ದಾರೆ